ಜೆಪ್ಪು ಬಪ್ಪಾಲ್ ಪರಿಸರ ಜನರು ಬದುಕಲು ಅಸಹನೀಯ :ವೇದವ್ಯಾಸ ಕಾಮತ್

3:35 PM, Thursday, November 2nd, 2017
Share
1 Star2 Stars3 Stars4 Stars5 Stars
(5 rating, 1 votes)
Loading...

jeppu-bappalಮಂಗಳೂರು: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಜೆಪ್ಪು-ಬಪ್ಪಾಲ್ ಎನ್ನುವ ವಾರ‍್ಡಿನಲ್ಲಿರುವ ಜನರು ಅದೇಗೆ ದಿನ ಕಳೆಯುತ್ತಾರೋ ಎನ್ನುವುದು ದೇವರಿಗೆ ಗೊತ್ತು. ಒಂದು ಕ್ಷಣ ಅಲ್ಲಿರುವ ವಠಾರದಲ್ಲಿರುವ ಮನೆಗಳನ್ನು ಭೇಟಿ ಮಾಡಿದರೆ ಅವರು ಅನುಭವಿಸುವ ಕಷ್ಟ ಗೊತ್ತಾಗುತ್ತದೆ. ಒಳಚರಂಡಿಗಳು ಗಬ್ಬೆದು ಜನ ಮೂಗಿಗೆ ಕೈ ಹಿಡಿದು ದಿನ ದೂಡುವಂತಹ ಪರಿಸ್ಥಿತಿ ಇದೆ.

ಪಾಲಿಕೆಯ ಹಿರಿಯ ಕಾರ‍್ಪೋರೇಟರ್ ಅಪ್ಪಿಯವರು ಪ್ರತಿನಿಧಿಸುವ ವಾರ‍್ಡಿನ ಒಳಚರಂಡಿ ಪರಿಸ್ಥಿತಿಯ ಬಗ್ಗೆ ಅಲ್ಲಿನ ಸ್ಥಳೀಯರು ಪಾಲಿಕೆಯ ಕಮೀಷನರ್ ಅವರಿಗೆ ದೂರು ನೀಡಲು ನಿರ‍್ಧರಿಸಿದ್ದಾರೆ. ಯಾಕೆಂದರೆ ಅಲ್ಲಿರುವ ಒಳಚರಂಡಿಯಿಂದ ಉತ್ಪತ್ತಿಯಾಗುವ ಸೊಳ್ಳೆಗಳಿಂದ ವಿವಿಧ ರೋಗಗಳು ನಿತ್ಯ ಬಾಧಿಸುತ್ತಿದ್ದು ಅದರಿಂದ ಅಲ್ಲಿ ಬದುಕುವುದೇ ಕಷ್ಟಕರವಾಗಿದೆ ಎಂದು ಅಲ್ಲಿನ ಮಹಿಳೆಯರು ತಮ್ಮ ನೋವನ್ನು ತೋಡಿಕೊಳ್ಳುತ್ತಿದ್ದಾರೆ. ಕಾರ‍್ಪೋರೇಟರ್ ಅಪ್ಪಿಯವರನ್ನು ಕೇಳಿದರೆ ನನ್ನ ವಾರ‍್ಡಿನಲ್ಲಿ ಕಾಂಗ್ರೆಸ್ಸಿಗೆ ಮತ ಹಾಕಿದವರಿಗೆ ಮಾತ್ರ ತಾನು ಸಹಾಯ ಮಾಡುತ್ತೇನೆ, ಉಳಿದವರು ಹಾಗೆ ಕಷ್ಟ ಅನುಭವಿಸಲಿ ಎಂದು ಹೇಳುತ್ತಿದ್ದಾರೆ ಎನ್ನುವುದು ಸ್ಥಳೀಯರ ಅಭಿಪ್ರಾಯ. ಅನೇಕ ಸಂದರ‍್ಭದಲ್ಲಿ ಡ್ರೈನೇಜ್ ನೀರು ರಸ್ತೆಗೆ ಬಂದು ಮನೆಯ ಒಳಗೆ ಗಲೀಜು ಬರುವ ಪರಿಸ್ಥಿತಿ ಇದೆ. ವಾರ‍್ಡಿನಲ್ಲಿ ತೆರೆದ ಒಳಚರಂಡಿ ಇದ್ದ ಕಾರಣ ಇಲ್ಲಿ ವಾಸಿಸುವುದು ಎಂದರೆ ನರಕಕ್ಕೆ ಹೋಗುವುದಕ್ಕೆ ಸಮ ಎನ್ನುವುದು ಅಲ್ಲಿನ ಹೆಂಗಸರ ಅಭಿಮತ.

jeppu-bappalಈ ಬಗ್ಗೆ ಮಾತನಾಡಿದ ಸ್ಥಳೀಯ ಮುಂದಾಳು ಭರತ್ ಅವರು ಒಂದು ವೇಳೆ ಕಾರ‍್ಪೋರೇಟರ್ ಅಪ್ಪಿಯವರಿಗೆ ತಮ್ಮ ವಾರ‍್ಡನ್ನು ನೋಡಲು ಸಾಧ್ಯವಾಗದಿದ್ದರೆ ರಾಜೀನಾಮೆ ಕೊಡಲಿ. ನಾವು ನೋಡಿಕೊಳ್ಳುತ್ತೇವೆ. ನಾವು ತೆರಿಗೆ ಕಟ್ಟಿ ಮಂಗಳೂರಿನ ನಾಗರಿಕರ ಜವಾಬ್ದಾರಿ ಮಾಡಿದ್ದೇವೆ. ಈಗ ಕಾರ‍್ಪೋರೇಟರ್ ಅವರು ತಮ್ಮ ಕರ‍್ತವ್ಯ ಮಾಡಲಿ ಎಂದು ಹೇಳಿದ್ದಾರೆ. ವಾರ‍್ಡಿಗೆ ಭೇಟಿಕೊಟ್ಟು ಅಲ್ಲಿನ ನಾಗರಿಕರೊಂದಿಗೆ ಮಾತನಾಡಿದ ಬಿಜೆಪಿ ಮಂಗಳೂರು ನಗರ ದಕ್ಷಿಣ ಅಧ್ಯಕ್ಷ ವೇದವ್ಯಾಸ ಕಾಮತ್ ಅವರು, ಶಾಸಕರು ಮತ್ತು ಕಾರ‍್ಪೋರೇಟರ್ ತಮಗೆ ಬೇಕಾದ ಕಡೆ ಕೆಲಸ ಮಾಡುವುದು ಸರಿಯಲ್ಲ. ಜನರಿಗೆ ಎಲ್ಲಿ ಅಗತ್ಯ ಇದೆಯೋ ಅಂತಹ ಕಾಮಗಾರಿ ಮಾಡಬೇಕು. ತನಗೆ ವೋಟ್ ಕೊಟ್ಟವರಿಗೆ ಮಾತ್ರ ಕೆಲಸ ಮಾಡುತ್ತೇನೆ ಎಂದು ಅಪ್ಪಿಯವರು ಹೇಳಿದ್ದು ಖಂಡನೀಯ. ಹಾಗಾದರೆ ಉಳಿದವರು ನಾವು ಟ್ಯಾಕ್ಸ್ ಕಟ್ಟಲ್ಲ, ನಿಮಗೆ ವೋಟ್ ಕೊಟ್ಟವರಿಂದ ಮಾತ್ರ ಟ್ಯಾಕ್ಸ್ ಕಟ್ಟಿಸಿಕೊಳ್ಳಿ ಎಂದು ಹೇಳಿದರೆ ಆಗುತ್ತಾ” ಎಂದು ಪ್ರಶ್ನಿಸಿದರು.

ಈ ಕುರಿತು ಸ್ಥಳೀಯರು ನಡೆಸುವ ಯಾವುದೇ ಹೋರಾಟಕ್ಕೆ ತಮ್ಮ ಬೆಂಬಲ ಇದೆ ಮತ್ತು ಜಿಲ್ಲಾಧಿಕಾರಿ ಹಾಗೂ ಕಮೀಷನರ್ ಅವರ ಮೇಲೆ ಒತ್ತಡ ಹಾಕಿ ಆದಷ್ಟು ಶೀಘ್ರದಲ್ಲಿ ಇಲ್ಲಿನ ಜನರ ಸಮಸ್ಯೆ ಪರಿಹರಿಸಲು ಪ್ರಾಮಾಣಿಕ ಹೋರಾಟ ನಡೆಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English