ಮಂಗಳೂರು : ವಿಧಾನ ಸಭಾ ಉಪ ಸಭಾಧ್ಯಕ್ಷ ಎನ್.ಯೋಗೀಶ್ ಭಟ್ ಅವರನ್ನು ನಗರದ ರಥಬೀದಿ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸೇವಾಂಜಲಿ ಚಾರಿಟೆಬಲ್ ಟ್ರಸ್ಟ್ ವತಿಯಿಂದ ಸೇವಾಂಜಲಿ ವರ್ಷದ ವ್ಯಕ್ತಿ -2011 ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಪ್ರಶಸ್ತಿ ಸ್ವೀಕರಿಸಿದ ಬಳಿಕ ಮಾತನಾಡಿದ ಅವರು ಮಂಗಳೂರು ನಗರದ ಅಭಿವೃದ್ದಿಗೆ 150ಕೋ.ರೂ.ಅನುದಾನವನ್ನು ಒದಗಿಸು ವಂತೆ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರಿಗೆ ಮನವಿ ಸಲ್ಲಿಸಲಾಗಿದೆ. ಮುಂದಿನ ಒಂದೂವರೆ ವರ್ಷದ ಕಾಲದಲ್ಲಿ ಬಿಜೆಪಿ ಸರಕಾರ ರಾಜ್ಯದಲ್ಲಿ ಉತ್ತಮ ಆಡಳಿತವನ್ನು ನೀಡಲಿದೆ.ಈ ಅವಧಿಯಲ್ಲಿ ಮಂಗಳೂರು ನಗರದಲ್ಲಿ ಮೂಲಸೌಕರ್ಯ,ಆರೋಗ್ಯ,ಪ್ರವಾಸೋದ್ಯಮ,ಶಿಕ್ಷಣ ಹಾಗೂ ಇನ್ನಿತರ ಕ್ಷೇತ್ರಗಳ ಅಭಿವೃದ್ದಿಗೆ ಹೆಚ್ಚಿನ ಒತ್ತು ನೀಡಲಾಗುವುದು ಎಂದರು.
ಕುಡಿಯುವ ನೀರಿನ ಸಮಸ್ಯೆಯನ್ನು ಈಗಾಗಲೇ ಬಗೆಹರಿಸಲಾಗಿದೆ.ನಗರದ ರಸ್ತೆಗಳನ್ನು ಅಭಿವೃದ್ದಿ ಪಡಿಸಲು ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಮುಂದಿನ ದಿನಗಳಲ್ಲಿ ಇನ್ನಿತರ ಸಮಸ್ಯೆಗಳ ಬಗ್ಗೆ ಗಮನ ಹರಿಸಲಾಗುವುದು ಎಂದು ಹೇಳಿದರು.
ನಗರದ ವೆನ್‌ಲಾಕ್ ಆಸ್ಪತ್ರೆ ಹಾಗೂ ಪ್ರಾದೇಶಿಕ ಮಕ್ಕಳ ಆಸ್ಪತ್ರೆಗೆ ಇನ್ಫೋಸಿಸ್ ಹಾಗೂ ಇತರ ಖಾಸಗಿ ಸಂಸ್ಥೆಗಳು ನೀಡಿದ ಉದಾರ ನೆರವಿನಿಂದ ಅತ್ಯಾಧುನಿಕ ಯಂತ್ರೋಪಕರಣ ಗಳನ್ನು ಅಳವಡಿಸಲಾಗಿದೆ.ಇದರಿಂದ ನವಜಾತ ಶಿಶುಗಳ ಸಾವಿನ ಪ್ರಮಾಣ ಗರಿಷ್ಠ ಮಟ್ಟದಲ್ಲಿ ಇಳಿಮುಖವಾಗಿದೆ ಎಂದು ನುಡಿದರು.
ಶ್ರೀ ವೆಂಕಟರಮಣ ದೇವಸ್ಥಾನದ ಟ್ರಸ್ಟಿ ಸಿ.ಎಲ್.ಶೆಣೈ ಅವರು ಯೋಗೀಶ್ ಭಟ್ ಅವರಿಗೆ ಸೇವಾಂಜಲಿ ವರ್ಷದ ವ್ಯಕ್ತಿ ಪ್ರಶಸ್ತಿ ನೀಡಿ ಗೌರವಿಸಿದರು.
ಕಾರ್ಪೋರೇಶನ್ ಬ್ಯಾಂಕ್‌ನ ಜನರಲ್ ಮೆನೇಜರ್ ಬಿ.ಆರ್.ಭಟ್ ಅತಿಥಿಯಾಗಿದ್ದರು. ದೇವಸ್ಥಾನದ ಟ್ರಸ್ಟಿ ಮಾಧವ ಕಾಮತ್,ಉದ್ಯಮಿ ರಾಮದಾಸ್ ಕಾಮತ್,ಟ್ರಸ್ಟ್‌ನ ಅಧ್ಯಕ್ಷ ಡಿ.ವೇದವ್ಯಾಸ ಕಾಮತ್ ಉಪಸ್ಥಿತರಿದ್ದರು. ಎಸ್.ಉಮೇಶ್ ಮಲ್ಯ ಸನ್ಮಾನ ಪತ್ರ ವಾಚಿಸಿದರು. ಬಿ.ಎಂ.ಶೆಣೈ ಕಾರ್ಯಕ್ರಮ ನಿರೂಪಿಸಿದರು.
Click this button or press Ctrl+G to toggle between Kannada and English