ನೆಹರೂ ಮೈದಾನದಲ್ಲಿ 4 ಹಾಗೂ 5ರಂದು ಇಂಡಿಯನ್‌ ಕರಾಟೆ ಚಾಂಪಿಯನ್‌ಶಿಪ್‌

11:57 AM, Friday, November 3rd, 2017
Share
1 Star2 Stars3 Stars4 Stars5 Stars
(5 rating, 1 votes)
Loading...

karateಮಂಗಳೂರು: ಇಂಡಿಯನ್‌ ಕರಾಟೆ ಚಾಂಪಿಯನ್‌ಶಿಪ್‌ ನಗರದ ನೆಹರೂ ಮೈದಾನದಲ್ಲಿ ಈ ತಿಂಗಳ 4 ಹಾಗೂ 5ರಂದು ನಡೆಯಲಿದೆ. ಕರಾಟೆ ಚಾಂಪಿಯನ್‌ಶಿಪ್‌ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ  ಚಾಲನೆ ನೀಡಲಿದ್ದಾರೆ.

ದೇಶದ ವಿವಿಧ ರಾಜ್ಯಗಳಿಂದ 2 ಸಾವಿರಕ್ಕೂ ಹೆಚ್ಚು ಸ್ಪರ್ಧಾಳುಗಳು ಇದರಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. ಇದು ಕರಾಟೆಯ ರೋಚಕ ಅನುಭವ ನೀಡುವ ಜತೆಗೆ ಉತ್ಸಾಹಿ ತರುಣರಿಗೆ ಸ್ಫೂರ್ತಿಯಾಗಲಿದೆ. ಈ ನಿಟ್ಟಿನಲ್ಲಿ ಕರಾವಳಿ ಮಣ್ಣಿನಲ್ಲಿ ಅರಳಿದ ಕರಾಟೆಯ ಕುರಿತ ಡೀಟೈಲ್ ಸ್ಟೋರಿ ಇಲ್ಲಿದೆ.

ಕರಾಟೆ ಅತ್ಯಂತ ಪ್ರಾಚೀನ ಸಮರಕಲೆಗಳಲ್ಲೊಂದು. ಭಾರತದಲ್ಲಿ ಕೂಡಾ ಪ್ರಾಚೀನ ಕಾಲದಿಂದಲೂ ಆತ್ಮರಕ್ಷಣೆಗೆ ಇದನ್ನು ಬಳಸುತ್ತಿದ್ದ ಬಗ್ಗೆ ಉಲ್ಲೇಖಗಳು ಸಿಗುತ್ತವೆ. ಈ ಕಲೆಯನ್ನು ಸಿದ್ಧಿಸಿಕೊಂಡ ಅನೇಕ ಮಂದಿ ನಮ್ಮ ಕರಾವಳಿ ಭಾಗದಲ್ಲೂ ಇದ್ದಾರೆ. ಕರಾವಳಿಗೆ ಈ ಅಪೂರ್ವ ಯುದ್ಧಕೌಶಲ ಬಂದ ಹಿಂದೆ ಕುತೂಹಲದ ಕಥೆ ಇದೆ.

ಕರಾಟೆಯಲ್ಲಿ ವೈವಿಧ್ಯಮಯ ಪ್ರಕಾರಗಳಿವೆ. ಬುಡಕಾನ್, ಶೊಟಕಾನ್, ಶಿಟಿರಿಯಾ, ಮಲೇಷ್ಯನ್ ಬುಡಕಾನ್, ಆಸ್ಟ್ರೇಲಿಯನ್ ಬುಡಕಾನ್, ಥೈಕಂಡೊ, ಮುಥಾಯಿ… ಹೀಗೆ ಹಲವು ಶಾಖೆಗಳಿದ್ದರೂ, ಭಾರತೀಯ ಕರಾಟೆ ಅಥವಾ ಇಂಡಿಯನ್‌ ಕರಾಟೆಗೆ ವಿಶಿಷ್ಟ ಸ್ಥಾನವಿದೆ. ಅತ್ಯಂತ ಕಠಿಣ ಪರಿಶ್ರಮ ಮತ್ತು ಬದ್ಧತೆಯನ್ನು ಬೇಡುವ ಇಂಡಿಯನ್‌ ಕರಾಟೆಯಲ್ಲಿ ಪ್ರಾವೀಣ್ಯ ಸಾಧಿಸುವುದು ಸುಲಭದ ಮಾತಲ್ಲ.

ನಮ್ಮ ಜಿಲ್ಲೆಯ ಕರಾಟೆ ಕ್ಷೇತ್ರವನ್ನು ತೆಗೆದುಕೊಂಡರೆ ಇತರ ಪ್ರಕಾರಗಳಲ್ಲಿ ಬ್ಲ್ಯಾಕ್‌ಬೆಲ್ಟ್‌ ಪಡೆದವರು ಸಾವಿರಾರು ಮಂದಿ ಇದ್ದರೆ, ಇಂಡಿಯನ್‌ ಕರಾಟೆಯಲ್ಲಿ ಈ ಗೌರವಕ್ಕೆ ಪಾತ್ರರಾಗಿರುವವರು ಎರಡು ಡಜನ್ ಮಂದಿ ಮಾತ್ರ. ಬದ್ಧತೆ, ಅರ್ಪಣಾ ಮನೋಭಾವ ಹಾಗೂ ಕಠಿಣ ಪರಿಶ್ರಮದಿಂದ ಇಂಡಿಯನ್‌ ಕರಾಟೆ ಕಲಿತರೆ ಬ್ಲ್ಯಾಕ್‌ಬೆಲ್ಟ್‌ ಗೌರವ ಸಂಪಾದಿಸಬೇಕಾದರೆ ಕನಿಷ್ಠ ಎಂಟರಿಂದ ಹತ್ತು ವರ್ಷ ಬೇಕಾಗುತ್ತದೆ. ಇತರ ಪ್ರಕಾರಗಳಲ್ಲಿ 3-4 ವರ್ಷಕ್ಕೂ ಬ್ಲ್ಯಾಕ್‌ಬೆಲ್ಟ್‌ ಸಿಗುತ್ತದೆ. ಜಿಲ್ಲೆಯಲ್ಲಿ ಇತರ ಪ್ರಕಾರಗಳ ಕರಾಟೆ ಬೋಧಿಸುತ್ತಿರುವವರು ಕೂಡಾ ಒಂದಲ್ಲ ಒಂದು ಕಾಲದಲ್ಲಿ ಇಂಡಿಯನ್‌ ಕರಾಟೆಯ ಹಿನ್ನೆಲೆಯಿಂದಲೇ ಬಂದವರು ಎನ್ನುವುದು ಈ ಕರಾಟೆಯ ಶ್ರೇಷ್ಠತೆಗೆ ಸಾಕ್ಷಿ.

ಇಂಡಿಯನ್‌ ಕರಾಟೆಯ ಗ್ರಾಂಡ್‌ಮಾಸ್ಟರ್ ಮಾರ್ಗದರ್ಶನದಲ್ಲಿ 1976-77ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೆ ಈ ಕಲೆ ಕಾಲಿಟ್ಟಿತು. ಕ್ವಾಲಿಟಿ ಹೋಟೆಲ್‌ ಮೇಲೆ ಮೊಟ್ಟಮೊದಲ ಕರಾಟೆ ತರಬೇತಿ ಆರಂಭವಾಯಿತು. ಸದಾನಂದ ಶೆಟ್ಟಿ ಸೆಲ್ಫ್ ಡಿಫೆನ್ಸ್ ಸ್ಕೂಲ್ ಆಫ್ ಇಂಡಿಯನ್ ಕರಾಟೆ ಮಂಗಳೂರು ಡೋಜೊ (ರಿ) ಸಂಸ್ಥಾಪಕ ಅಧ್ಯಕ್ಷರಾಗಿ ಅಂದಿನಿಂದ ಇಂದಿನವರೆಗೂ ಜಿಲ್ಲೆಯಲ್ಲಿ ಕರಾಟೆ ಕಾರ್ಯ ಚಟುವಟಿಕೆಗಳಿಗೆ ಉತ್ತೇಜನ ನೀಡುತ್ತಾ ಬಂದಿದ್ದಾರೆ.

ಮೋಹನ್, ಅಂಥೋನಿ ಪಾಲ್, ಜನಾರ್ದನ ನಾಯಕ್ ಅವರು ಆರಂಭಿಕ ವರ್ಷಗಳಲ್ಲಿ ಜಿಲ್ಲೆಯಲ್ಲಿ ಇಂಡಿಯನ್ ಕರಾಟೆ ಜನಪ್ರಿಯಗೊಳಿಸಲು ಶ್ರಮಿಸಿದರು. ಇವರ ಗರಡಿಯಲ್ಲಿ ಪಳಗಿದ ರಂಜನ್ ಪೂಂಜಾ, ಅರುಣ್‌‌ ನಾಯಕ್, ತೇಜೋಮಯಿ, ಡಾ.ದೇವಿಪ್ರಸಾದ್ ಶೆಟ್ಟಿಯವರಂಥ ಅಪೂರ್ವ ಕರಾಟೆಪಟುಗಳು ರಾಷ್ಟ್ರಮಟ್ಟದಲ್ಲಿ ಜಿಲ್ಲೆಯ ಕೀರ್ತಿ ಪತಾಕೆ ಹಾರಿಸಿದರು. ಬೆಂಗಳೂರಿನಲ್ಲಿ ಇಂಡಿಯನ್‌ ಕರಾಟೆ ತರಬೇತಿ ಪಡೆದ, ಮೂಲತಃ ಜಿಲ್ಲೆಯ ಅರುಣ್ ಭಂಡಾರಿ ಸತತ 10 ವರ್ಷ ಕಾಲ ರಾಷ್ಟ್ರೀಯ ಚಾಂಪಿಯನ್ ಆಗಿದ್ದರು ಎನ್ನುವುದು ಜಿಲ್ಲೆಗೆ ಹೆಮ್ಮೆಯ ವಿಷಯ.

1980ರ ದಶಕದಲ್ಲಿ ಜಿಲ್ಲೆಯಲ್ಲಿ ಕರಾಟೆ ಪಟುಗಳ ದೊಡ್ಡ ಪಡೆಯೇ ನಿರ್ಮಾಣವಾಯಿತು. ಸುರೇಂದ್ರ ಅವರ ಮಾರ್ಗದರ್ಶನದಲ್ಲಿ ಸುರೇಶ್, ಈಶ್ವರ ಕಟೀಲ್, ಕವಿತಾ ಸನಿಲ್, ಕಿಶೋರ್ ಶೆಟ್ಟಿ, ರಾಜೇಶ್ ಆಚಾರ್, ಸೌರಭ್, ನಿಹಾರ ಹೀಗೆ… ಸಂಸ್ಥೆಯಲ್ಲಿ ತರಬೇತಿ ಪಡೆದ ಪ್ರತಿಯೊಬ್ಬರೂ ರಾಷ್ಟ್ರಮಟ್ಟದ ಕೂಟಗಳಲ್ಲಿ ಮಿಂಚಿದರು. ಕವಿತಾ ಸನಿಲ್ ಅವರಂತೂ ಅಂತಾರಾಷ್ಟ್ರೀಯ ಮಟ್ಟದಲ್ಲೂ ಪ್ರಶಸ್ತಿ ಗೆದ್ದು, ಕಡಲತಡಿಯ ಕೀರ್ತಿ ಪತಾಕೆಯನ್ನು ವಿದೇಶಗಳಲ್ಲೂ ಹಾರಿಸಿದ ಗೌರವಕ್ಕೆ ಪಾತ್ರರಾಗಿದ್ದಾರೆ.

ಇಂಡಿಯನ್‌ ಕರಾಟೆಯಲ್ಲಿ ಬ್ಲ್ಯಾಕ್‌ಬೆಲ್ಟ್‌ ಪಡೆದ ಜಿಲ್ಲೆಯ ಗಣ್ಯರೆಂದರೆ, ಸುರೇಂದ್ರ, ಸುರೇಶ್ ಶೆಟ್ಟಿ, ಈಶ್ವರ್ ಕಟೀಲ್, ಕಿಶೋರ್ ಶೆಟ್ಟಿ, ರಾಜೇಶ್ ಆಚಾರ್, ಸುಧೀರ್ ಕೂಳೂರು, ರಾಜೇಶ್ ನೆತ್ತರ್, ಸೌರಭ್ ಚಿಪ್ಳೂಣ್ಕರ್, ಬಿಪಿನ್ರಾಜ್ ರೈ, ಸಚಿನ್ರಾಜ್ ರೈ, ಮನೀಶ್ ಆಚಾರ್, ಪ್ರದ್ಯುತ್ ದನುಷ್, ನಿಹಾರಾ, ಕವಿತಾ ಸನಿಲ್, ರವಿರಾಜ್ ಆಚಾರ್, ಕೃಷ್ಣಪ್ರಸಾದ್ ಖಂಡಿಗೆ, ಕೇಶವ್, ದಿನೇಶ್, ಜಯಪ್ರಕಾಶ್, ಜಯಾ, ಸೂರಜ್, ಧೀರಜ್ ಹಾಗೂ ಮತ್ತಿತರರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English