ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಜೆಪಿ ಹಾಗೂ ಜೆಡಿಎಸ್ ರ್ಯಾಲಿಗೆ ಸಡ್ಡು ಹೊಡೆಯಲು “ಜನಾಶೀರ್ವಾದ’ ರ್ಯಾಲಿಗೆ ಮುಂದಾಗಿದ್ದಾರೆ.
ಸರಕಾರದ ನಾಲ್ಕೂವರೆ ವರ್ಷಗಳ ಸಾಧನೆಗಳನ್ನು ಜನರ ಮುಂದಿಟ್ಟು ಮತ್ತೂಮ್ಮೆ ಮತದಾರರು ಆಶೀ ರ್ವಾದ ಮಾಡಿ ಎಂದು ಮನವಿ ಮಾಡುವ ಉದ್ದೇಶ ಈ ರ್ಯಾಲಿಯದು ಎನ್ನಲಾಗಿದೆ. ರಾಜ್ಯದ 224 ಕ್ಷೇತ್ರ ಗಳಲ್ಲೂ ರ್ಯಾಲಿ ನಡೆಸಿ ತಮ್ಮ ಶಕ್ತಿ ಪ್ರದರ್ಶಿಸುವುದು ಜನಾಶೀರ್ವಾದ ರ್ಯಾಲಿಯ ಗುರಿ. ಈ ಬಗ್ಗೆ ಆಪ್ತ ಸಚಿವರು ಹಾಗೂ ಶಾಸಕರೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಮಾಲೋಚನೆ ನಡೆಸಿದ್ದು, ರ್ಯಾಲಿಯ ರೂಪುರೇಷೆ ಸಿದ್ಧಪಡಿಸಲಾಗುತ್ತಿದೆ ಎಂದು ತಿಳಿದು ಬಂದಿದೆ.
ಹಿಂದೆ ಎಸ್.ಎಂ. ಕೃಷ್ಣ “ಪಾಂಚ ಜನ್ಯ’ ಯಾತ್ರೆ ನಡೆಸಿದ್ದ ಸಂದರ್ಭದಲ್ಲಿ ಸಿದ್ಧಪಡಿಸಿದ್ದ ಹೊಸ ವಿನ್ಯಾಸದ ಬಸ್ ರ್ಯಾಲಿಗಾಗಿ ಸಿದ್ಧಪಡಿಸುವಂತೆ ಸೂಚಿಸಿದ್ದಾರೆ ಎನ್ನಲಾಗಿದೆ. ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುವಾಗ ನಾವು ಮಾಡಿರುವ ಸಾಧನೆಗಳನ್ನು ಜನರ ಮುಂದಿಟ್ಟು ಮತ್ತೂಮ್ಮೆ ಆಶೀರ್ವಾದ ಮಾಡಿ ಎಂದು ಹೋಗುತ್ತೇವೆ ಎಂದು “ಜನಾಶೀರ್ವಾದ’ ರ್ಯಾಲಿಯ ಬಗ್ಗೆ ಸುಳಿವು ನೀಡಿದರು.
ಬಿಜೆಪಿ ಜತೆ ಜನರಿಲ್ಲ: ಪರಿವರ್ತನ ರ್ಯಾಲಿಗೆ ಬಿಜೆಪಿ ಭಾರೀ ಸಿದ್ಧತೆ ನಡೆಸಿತ್ತು. ಮೂರೂವರೆ ಲಕ್ಷ ಜನ ಸೇರಲಿದ್ದಾರೆ ಎಂದು ಆ ಪಕ್ಷದ ನಾಯಕರು ಹೇಳಿದ್ದರು. ಶೋಭಾ ಕರಂದ್ಲಾಜೆ, ಅಶೋಕ್ ರಾಜ್ಯ ಪ್ರವಾಸ ಮಾಡಿ ಜನರನ್ನು ಸೇರಿಸುವ ಪ್ರಯತ್ನವನ್ನೂ ಮಾಡಿದ್ದರು. ಆದರೆ, ರ್ಯಾಲಿಗೆ ಬಂದದ್ದು ಕಡಿಮೆ ಜನ, ಅವರದು ಪರಿವರ್ತನೆ ಯಾತ್ರೆಯಲ್ಲ, ತೀರ್ಥಯಾತ್ರೆ ಎಂದು ತಿಳಿಸಿದರು.
ಪರಿವರ್ತನ ರ್ಯಾಲಿ ಮೂಲಕ ರಾಜ್ಯದ ಜನ ಬಿಜೆಪಿ ಜತೆ ಇಲ್ಲ ಎಂಬುದು ಗೊತ್ತಾಗಿದೆ. ಬಿಜೆಪಿಯವರು ತಿಪ್ಪರಲಾಗ ಹಾಕಿದರೂ ಜನಬೆಂಬಲ ಸಿಗುವುದಿಲ್ಲ. ಜನ ಕಾಂಗ್ರೆಸ್ ಜತೆಗಿದ್ದಾರೆ ಎಂದರು. ಪರಿವರ್ತನ ರ್ಯಾಲಿಗೆ ಜನ ಬಾರದಂತೆ ಸರಕಾರ ತಡೆದಿದೆ ಎಂದು ಸಂಸದ ಪ್ರಹ್ಲಾದ್ ಜೋಶಿ ಅವರು ಹೇಳಿದ್ದಾರೆ. ಜನರೇ ಬಂದಿಲ್ಲ ಎಂದ ಮೇಲೆ ತಡೆಯುವುದಾದರೂ ಹೇಗೆ ಎಂದು ಪ್ರಶ್ನಿಸಿದರು.
ಬಿಜೆಪಿಯವರು ಈ ಹಿಂದೆ ಮಂಗಳೂರಿಗೆ ಬೈಕ್ ರ್ಯಾಲಿ ಹಮ್ಮಿಕೊಂಡಿದ್ದರು. ಕೋಮು ಭಾವನೆ ಕೆರಳಿಸಲು ಹೋಗುತ್ತಿದ್ದಾರೆ ಎಂಬ ಕಾರಣಕ್ಕೆ ಅನುಮತಿ ನೀಡಿರಲಿಲ್ಲ. ಈಗ ಪಕ್ಷದ ಕೆಲಸಕ್ಕಾಗಿ ಹೋಗುತ್ತಿದ್ದಾರೆ. ರಾಜಕೀಯ ಮಾಡುವುದು ಸರಿಯಲ್ಲ ಎಂದು ಬೈಕ್ ರ್ಯಾಲಿಗೆ ಅನುಮತಿ ಕೊಟ್ಟಿದ್ದೇವೆ ಎಂದರು.
ಅಮಿತ್ ಶಾ ಅವರು ಕೇಂದ್ರ ಸರಕಾರ ಕರ್ನಾಟಕಕ್ಕೆ ಎರಡು ಲಕ್ಷ ಕೋಟಿ ರೂ. ಅನುದಾನ ಕೊಟ್ಟಿದೆ, ಸದ್ಬಳಕೆಯಾಗಿಲ್ಲ ಎಂದು ದೂರಿದ್ದಾರೆ. ಕೇಂದ್ರ ಕೊಟ್ಟಿರುವ ಅನುದಾನದ ಬಗ್ಗೆ ಅಮಿತ್ ಶಾ ಅವರಿಗೆ ಸರಿಯಾಗಿ ಲೆಕ್ಕ ಗೊತ್ತಿಲ್ಲ. ಅಷ್ಟಕ್ಕೂ ಅದು ಅವರ ಕುಟುಂಬದ ಹಣವಲ್ಲ ಎಂದು ಹೇಳಿದರು.
ಕೇಂದ್ರ ಸರಕಾರ ರಾಜ್ಯಕ್ಕೆ ಕೊಡುವ ಅನುದಾನ ಅಮಿತ್ ಶಾ ಅಥವಾ ಅವರ ಪುತ್ರ ಸಂಪಾದನೆ ಮಾಡಿರುವ ಹಣ ಅಲ್ಲ ಎಂದು ಖಾರವಾಗಿ ನುಡಿದರು. ವಿವಿಧ ರೂಪದಲ್ಲಿ ರಾಜ್ಯದಿಂದ ಸಂಗ್ರಹಿಸಿರುವ ತೆರಿಗೆ ಹಣದಲ್ಲಿ ಕೇಂದ್ರ ಸರಕಾರ ನಮಗೆ ಪಾಲು ಕೊಡುತ್ತಿದೆ. ಅದು ಸಂವಿಧಾನ ಬದ್ಧವಾಗಿ ಐದು ವರ್ಷಗಳಿಗೊಮ್ಮೆ ರಚನೆಯಾಗುವ ಹಣಕಾಸು ಆಯೋಗದ ಶಿಪಾರಸಿನ ಅನುಸಾರ
ನೀಡಲಾಗುತ್ತದೆ ಎಂದರು.
Click this button or press Ctrl+G to toggle between Kannada and English