‘ನಾಡಿಗೆ ನಮಸ್ಕಾರ’ ಗ್ರಂಥಮಾಲೆಯ ನೂತನ ಹೊತ್ತಗೆಗಳ ಅನಾವರಣ ಕಾರ್ಯಕ್ರಮ

3:40 PM, Friday, November 3rd, 2017
Share
1 Star2 Stars3 Stars4 Stars5 Stars
(5 rating, 1 votes)
Loading...

nadige namaskaraಮಂಗಳೂರು: ಕಾಂತಾವರ ಕನ್ನಡ ಸಂಘದಲ್ಲಿ ಕಾಂತಾವರ ಉತ್ಸವದ ಅಂಗವಾಗಿ ಗುರುವಾರ ನಡೆದ ‘ನಾಡಿಗೆ ನಮಸ್ಕಾರ’ ಗ್ರಂಥಮಾಲೆಯ ನೂತನ ಹೊತ್ತಗೆಗಳ ಅನಾವರಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಸಂಸದ ಎಂ. ವೀರಪ್ಪ ಮೊಯಿಲಿ ಮಾತನಾಡಿದರು. ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ಸಿಕ್ಕಿದರೂ ನಂತರದ ದಿನಗಳಲ್ಲಿ ಕನ್ನಡ ಸಾಹಿತಿಗಳು, ಕನ್ನಡಪರ ಸಂಘಟನೆಗಳು, ರಾಜ್ಯ ಸರ್ಕಾರ ತೋರಿದ ಸ್ಪಂದನೆ ಸಾಲುತ್ತಿಲ್ಲ. ಹೀಗಾಗಿ ನಮ್ಮ ಭಾಷೆಗೆ ಸಿಕ್ಕ ಶಾಸ್ತ್ರೀಯ ಸ್ಥಾನಮಾನದ ಲಾಭ ಪಡೆಯಲು ನಾವು ಹಿಂದೆ ಬಿದ್ದಿದ್ದೇವೆ ಎಂದು ಸಂಸದ ಎಂ. ವೀರಪ್ಪ ಮೊಯಿಲಿ ಹೇಳಿದರು.

‘ಮನೆಯಲ್ಲಿ ಮಕ್ಕಳಿಗೆ ಕನ್ನಡಾ ಭಿಮಾನ ಬೆಳೆಸುವ ಕಾರ್ಯ ಹೆತ್ತವರು ಮಾಡಿದರೆ, ಕನ್ನಡದ ರುಚಿಯನ್ನು ಉಣಿಸುವ ಕೆಲಸ ಶಾಲೆಯಲ್ಲಿ ಶಿಕ್ಷಕರು ಮಾಡಬೇಕು. ಹೀಗಾದಲ್ಲಿ ಮಾತ್ರ ಕನ್ನಡ ಭಾಷೆ ಬೆಳೆಸಬಹುದು ಎಂದು ಅವರು ಹೇಳಿದರು. ಒಂದರಿಂದ ನಾಲ್ಕನೇ ತರಗತಿವರೆಗೆ ಮಾತೃಭಾಷೆಯಲ್ಲಿ ಶಿಕ್ಷಣ ಇರಬೇಕೆಂಬ ನಿಯಮವಿದ್ದರೂ ನಮ್ಮಲ್ಲಿ ಅಭಿಮಾನಶೂರತೆ ಕಡಿಮೆ ಯಾಗಿರುವುದರಿಂದ ಈ ನಿಯಮ ಸರಿಯಾಗಿ ಪಾಲನೆಯಾಗುತ್ತಿಲ್ಲ’ ಎಂದರು.

ಕನ್ನಡದ ಅನೇಕ ಕಾವ್ಯಗಳು ಹುಟ್ಟಿದ್ದು ಕಾಡಿನಲ್ಲೆ. ಪಾಂಡವರ ವೀರ ಯಾತ್ರೆ ನಡೆದದ್ದು ಕಾಡಿನಲ್ಲಿ. ನಾನು ಬಾಹುಬಲಿ ಕುರಿತು ಪುಸ್ತಕ ಬರೆಯುತ್ತಿದ್ದು ಅದರಲ್ಲೂ ಅನೇಕ ವಿಚಾರಗಳು ಕಾಡಿಗೆ ಸಂಬಂಧಿಸಿದ್ದಾಗಿವೆ. ಕಾಡಿನಲ್ಲಿರುವ ಕಾಂತಾವರ ಎಂಬ ಪುಟ್ಟ ಗ್ರಾಮದಲ್ಲಿ ಕನ್ನಡ ಪರ ಚಟುವಟಿಕೆಗಳಿಂದಾಗಿ ದೇಶ, ವಿದೇಶದ ಗಮನ ಸೆಳೆಯುತ್ತಿದೆ. ಕಾಡು ಎಂದರೆ ನಿರ್ಲಕ್ಷ್ಯ ಪಡುವಂತದಲ್ಲ ಎಂದರು.

ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಮಾತನಾಡಿದರು. ನಾಡಿಗೆ ನಮಸ್ಕಾರ ಗ್ರಂಥಮಾಲೆಯ ಸಂಪಾಕರಾದ ಡಾ. ಬಿ ಜನಾರ್ಧನ ಭಟ್ ಸಹಿತ ಕೃತಿಕಾರರು, ಲೇಖಕಕರು ಹಾಗೂ ಪ್ರಾಯೋಜಕರನ್ನು ಗೌರವಿಸಲಾಯಿತು.

ಕಾಂತಾವರ ಕನ್ನಡ ಸಂಘದ ಬಗ್ಗೆ ಸರ್ಕಾರ ತೋರುತ್ತಿರುವ ಅಸಹಕಾರದ ಬಗ್ಗೆ ಡಾ.ನಾ ಮೊಗಸಾಲೆ ಅವರ ಮಾತಿಗೆ ಪ್ರತಿಕ್ರಿಯಿಸಿದ ವೀರಪ್ಪ ಮೊಯಿಲಿ, ‘ಕನ್ನಡ ಸಂಘಕ್ಕೆ ಅನುದಾನ ನೀಡಬೇಕೆಂದು ನಾನು, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸರ್ಕಾರಕ್ಕೆ ಅನೇಕ ಶಿಫಾರಸುಗಳನ್ನು ಮಾಡಿದರೂ ಕಡೇ ಘಳಿಗೆಯಲ್ಲಿ ಏನಾಗುತ್ತದೊ ಗೊತ್ತಾಗುವುದಿಲ್ಲ. ಸರ್ಕಾರದ ಜಾತಕ ಹಾಗೂ ಮೊಗಸಾಲೆಯವರ ಜಾತಕಕ್ಕೂ ಕೂಡಿ ಬಾರದಿರುವುದರಿಂದ ಹೀಗಾಗಿರಬಹುದೇನೊ ಎಂದು ಹಾಸ್ಯ ಶೈಲಿಯಲ್ಲಿ ಉತ್ತರಿಸಿದರು.

ಕನ್ನಡ ಸಂಘದ ಕಾರ್ಯಾಧ್ಯಕ್ಷ ಡಾ.ನಾ ಮೊಗಸಾಲೆ ಪ್ರಾಸ್ತಾವಿಕ ಮಾತನಾಡಿದರು. ಸರೋಜಿನಿ ನಾಪ್ಪಯ್ಯ ಮತ್ತು ವಿಠಲ ಬೇಲಾಡಿ ನಿರೂಪಿಸಿದರು. ಸದಾನಂದ ನಾರಾವಿ ಸ್ವಾಗತಿಸಿದರು. ಬಾಬು ಶೆಟ್ಟಿ ನಾರಾವಿ ವಂದಿಸಿದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English