ಮಂಗಳೂರು: ಜನತೆಗೆ ಸಂಕಷ್ಠ ತರುವ ಯೋಜನೆಗಳು ಜಾರಿಗೆ ಬಾರದಂತೆ ತಡೆಯಲು ಶ್ರಮಿಸುತ್ತೇನೆ. ಮೊದಲು ಜನರು ನಂತರ ಪರಿಸರ ಎಂಬ ಧ್ಯೇಯವಾಗಬೇಕು. ಯಾರು ಕೂಡಾ ಆತಂಕ ಪಡಬೇಕಾಗಿಲ್ಲ. ಅಂತಃಕರಣ ಸಾಕ್ಷಿಯಾಗಿ ಈ ಯೋಜನೆ ಆಗದಂತೆ ತಡೆಯಲು ಶ್ರಮಿಸುತ್ತೇನೆ. ಊರಿನ ಉದ್ದಾರ ರಾಜಕಾರಣಿಗಳು ಅಥವಾ ಅಧಿಕಾರಿಗಳಿಂದ ಆಗುವುದಿಲ್ಲ ಬದಲಾಗಿ ಜನತೆಯಿಂದ ಊರಿನ ಪ್ರಗತಿಯಾಗುತ್ತದೆ. ಆದುದರಿಂದ ಜನತೆಗೆ ಬಂದ ಈ ಸಂಕಷ್ಠವನ್ನು ದೂರೀಕರಿಸಲು ಶತ ಪ್ರಯತ್ನ ಮಾಡುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಹೇಳಿದರು.
ಪರಿಸರ ಸೂಕ್ಷ್ಮ ವಲಯಕ್ಕೆ ಸೇರ್ಪಡೆ ವಿರೋಧಿಸಿ ಹರಿಹರ-ಪಲ್ಲತ್ತಡ್ಕ ಮತ್ತು ಕೊಲ್ಲಮೊಗ್ರು ಗ್ರಾ.ಪಂ ವ್ಯಾಪ್ತಿಯ ಐದು ಗ್ರಾಮದ ಗ್ರಾಮಸ್ಥರ ಹೋರಾಟದ ಸಭೆಯಲ್ಲಿ ಅವರು ಮಾತನಾಡಿದರು. ರೈತಾಪಿ ವರ್ಗದಿಂದ ಬಂದ ನಾನು ರೈತರ ಸಂಕಷ್ಠವನ್ನು ಬಗೆ ಹರಿಸಲು ಈ ಹಿಂದಿನಿಂದಲೇ ಶ್ರಮ ವಹಿಸಿದ್ದೇನೆ. ಈ ಹಿಂದೆ ಕಸ್ತೂರಿ ರಂಗನ್ ವರದಿ ಜಾರಿಗೆ ಬಂದಾಗ ಇದರಿಂದ ಸಂತ್ರಸ್ಥರಾಗುತ್ತಿದ್ದ ರೈತರ ಪರ ನಿಂತು ಅವರ ಸಂಕಷ್ಠ ಪರಿಹಾರಕ್ಕೆ ಹೆಚ್ಚಿನ ಶ್ರಮ ವಹಿಸಿದ್ದೆನು. ಇದೀಗ ಮತ್ತೆ ಸೂಕ್ಷ್ಮ ವಲಯ ಮೂಲಕ ಈ ಭಾಗದ ರೈತರು ಮತ್ತೆ ಸಂಕಷ್ಠದಲ್ಲಿ ಸಿಲುಕಿದ್ದಾರೆ. ರೈತರ ಪ್ರತಿನಿಧಿಯಾಗಿ ಸಹಸ್ರಾರು ವರ್ಷಗಳಿಂದ ಅರಣ್ಯ ಸಂರಕ್ಷಣೆ ಮಾಡಿ ಬದುಕು ಕಟ್ಟಿಕೊಂಡು ಬಂದ ರೈತರಿಗೆ ತೊಂದರೆ ಆಗದಂತೆ ಹೆಚ್ಚಿನ ವಹಿಸಲು ನಾನು ಸಿದ್ಧನಿದ್ದೇನೆ ಎಂದರು.
ಕೇಂದ್ರದ ಅರಣ್ಯ ಸಚಿವರಲ್ಲಿಗೆ ಈ ಭಾಗದ ಪ್ರಮುಖರ ನಿಯೋಗವನ್ನು ಕರೆಸಿಕೊಂಡು ಅವರ ಎದುರು ಇಲ್ಲಿನ ರೈತರು ತಮ್ಮ ಕಷ್ಟವನ್ನು ಹೇಳುವಂತೆ ಮಾಡಿ ಈ ಯೋಜನೆಯಲ್ಲಿ ಮಾರ್ಪಡು ಮಾಡುವಂತೆ ಮಾಡಲು ಶ್ರಮ ವಹಿಸುತ್ತೇನೆ. ಚಾಮರಾಜನಗರದಿಂದ ಹಿಡಿದು ಬೆಳಗಾಂ ತನಕ ಸುಮಾರು1400 ಗ್ರಾಮಗಳು ಈ ಸೂಕ್ಷಮ ವಲಯದ ಮೂರನೇ ಅಧಿ ಸೂಚನೆಯಲ್ಲಿ ಸೇರ್ಪಡೆಯಾಗಿದೆ. ಗುಜರಾತ್‌ನಿಂದ ತಮಿಳುನಾಡು ತನಕದ ಎಲ್ಲಾ ರಾಜ್ಯಗಳಲ್ಲಿ ಈ ಸೂಕ್ಷ್ಮ ವಲಯ ಬರುತ್ತಿದೆ. ಈ ಭಾಗದ ಯಾವುದೇ ಜನರಿಗೆ ತೊಂದರೆ ಆಗದಂತೆ ಕ್ರಮ ಜರುಗಿಸಲು ಕೇಂದ್ರದ ಅರಣ್ಯ ಸಚಿವರಲ್ಲಿ ವಿನಂತಿಸುತ್ತೇನೆ ಎಂದು ಡಿ.ವಿ.ಹೇಳಿದರು.
ಪ್ರಜಾತಾಂತ್ರಿಕ ವ್ಯವಸ್ಥೆಯಲ್ಲಿ ರಾಜ್ಯ ಹಾಗೂ ಕೇಂದ್ರ ಸರಕಾರಗಳು ಉತ್ತಮ ಭಾಂದವ್ಯದಿಂದ ಕೆಲಸ ನಿರ್ವಹಿಸಿದರೆ ಪ್ರಗತಿ ಸಾಧ್ಯವಾಗುತ್ತದೆ. ಅಲ್ಲದೆ ಸಮಸ್ಯೆ ಪರಿಹಾರವಾಗುತ್ತದೆ. ರಾಜ್ಯ ಮತ್ತು ಕೇಂದ್ರ ಸರಕಾರಗಳು ಪ್ರತಿಯೊಂದನ್ನು ರಾಜಕೀಯವಾಗಿ ನೋಡಿದರೆ ಜನ ಬೀದಿಗಿಳಿದು ತಮ್ಮ ಹಕ್ಕಿಗಾಗಿ ಹೋರಾಡಬೇಕಾಗುತ್ತದೆ. ಪರಸ್ಪರ ಸೌಹಾರ್ಧಯುತವಾದ ಸಂಬಂಧ ಬೆಳೆದರೆ ಪ್ರಜೆಗಳ ಹಿತ ಕಾಪಾಡಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಕೇಂದ್ರದ ಅರಣ್ಯ ಮಂತ್ರಾಲಯದಿಂದ ಇದಕ್ಕೆ ಬೇರೆ ಯಾವುದಾದರೂ ಹಂತವನ್ನು ಉಪಯೋಗಿಸಿಕೊಂಡು ಜನತೆಗೆ ಯಾವುದೇ ತೊಂದರೆ ಆಗದಂತೆ ಯೋಜನೆ ರೂಪಿಸಲು ಶ್ರಮಿಸುತ್ತೇನೆ. ಈ ಭಾಗದಲ್ಲಿ ಅರಣ್ಯವನ್ನು ರಕ್ಷಣೆ ಮಾಡಿದ್ದರೆ ಅದು ಸರಕಾರ ಅಲ್ಲ ಅರಣ್ಯ ಅಧಿಕಾರಿಗಳಲ್ಲ ಬದಲಾಗಿ ಇಲ್ಲಿ ಬದುಕು ಕಟ್ಟಿಕೊಂಡ ರೈತರು ಇವರ ಬದುಕಿಗೆ ಯಾವುದೇ ತೊಂದರೆ ಆಗದಂತೆ ಶ್ರಮ ವಹಿಸುವುದು ನನ್ನ ಗುರಿಯಾಗಿದೆ. ಈ ವಿಚಾರದಲ್ಲಿ ರಾಜಕೀಯ ಮಾಡುವುದಿಲ್ಲ. ಅಲ್ಲದೆ ಈ ಯೋಜನೆಯ ಅಂತಿಮ ನೋಟಿಫಿಕೇಶನ್ ಆಗದಂತೆ ತಡೆಯಲು ಶ್ರಮ ವಹಿಸುತ್ತೇನೆ ಎಂದು ಸಚಿವರು ನುಡಿದರು.
ಸಭೆಯ ಅಧ್ಯಕ್ಷತೆಯನ್ನು ಹರಿಹರ ಪಲ್ಲತ್ತಡ್ಕ ಗ್ರಾ.ಪಂ.ಅಧ್ಯಕ್ಷ ಹಿಮ್ಮತ್ ಕೆ.ಸಿ ವಹಿಸಿದ್ದರು. ಶಾಸಕ ಎಸ್.ಅಂಗಾರ, ತಾ.ಪಂ.ಅಧ್ಯಕ್ಷ ಚನಿಯ ಕಲ್ತಡ್ಕ, ಸ್ಥಾಯಿ ಸಮಿತಿ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು, ಹರಿಹರೇಶ್ವರ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಾಮಕೃಷ್ಣ, ಮಾಜಿ ಎಪಿಎಂಸಿ ಅಧ್ಯಕ್ಷ ಸತೀಶ್ ಕೂಜುಗೋಡು, ಹರಿಹರ-ಕೊಲ್ಲಮೊಗ್ರು ಸೇವಾ ಸಹಕಾರಿ ಸಂಘದ ಅಧ್ಯಕ್ಷ ಹರ್ಷಕುಮಾರ್ ದೇವಜನ, ಪ್ರಮುಖರಾದ ಜಯಂತ್ ಕಟ್ಟೆಮನೆ ಮುಖ್ಯಅತಿಥಿಗಳಾಗಿದ್ದರು. ಸಭೆಯ ಆರಂಭದಲ್ಲಿ ಐನೆಕಿದು ಗ್ರಾಮದಿಂದ ಕೋಟೆ ಸೋಮಸುಂದರ್, ಹರಿಹರದಿಂದ ದುರ್ಗಾದಾಸ್ ಮಲ್ಲಾರ, ಬಾಳುಗೋಡು ಗ್ರಾಮದಿಂದ ವಸಂತ ಕಿರಿಭಾಗ, ಕೊಲ್ಲಮೊಗ್ರು ಗ್ರಾಮದಿಂದ ಹಮೀದ್ ಇಡ್ನೂರ್ ಹಾಗೂ ಕಲ್ಮಕಾರ್ ಗ್ರಾಮದಿಂದ ಡಾ.ಸೋಮಶೇಖರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಐದು ಗ್ರಾಮಗಳ ಗ್ರಾಮಸ್ಥರು, ಜನಪ್ರತಿನಿಧಿಗಳು ಉಪಸ್ಥಿತರಿದ್ದರು. ಬಳಿಕ ಸಚಿವ ಡಿ.ವಿ.ಸದಾನಂದ ಗೌಡರು ಶ್ರೀ ಹರಿಹರೇಶ್ವರ ದೇವಳಕ್ಕೆ ಭೇಟಿ ನೀಡಿದರು. ಅಲ್ಲದೆ ಶ್ರೀ ದೇವಳದ ಅರ್ಚಕರು ಸಚಿವರಿಗೆ ಪ್ರಸಾದ ನೀಡಿ ಹರಸಿದರು.
Click this button or press Ctrl+G to toggle between Kannada and English