ಮಂಗಳೂರು : ಕರ್ನಾಟಕ ಅಲ್ಪಸಂಖ್ಯಾಕರ ಅಭಿವೃದ್ಧಿ ನಿಗಮದ ವತಿಯಿಂದ ಸೋಮವಾರ ಮಂಗಳೂರಿನಲ್ಲಿ ಜರಗಿದ ಸಮಾರಂಭದಲ್ಲಿ 2011-12ನೇ ಸಾಲಿನ ವಿವಿಧ ಸಾಲ ಯೋಜನೆಗಳಡಿ ಮಂಗಳೂರು ಉತ್ತರ, ದಕ್ಷಿಣ ಮತ್ತು ಮೂಡಬಿದಿರೆ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯ 1,194 ಫಲಾನುಭವಿಗಳಿಗೆ 34.98 ಲಕ್ಷ ರೂ. ಸಹಾಯಧನ ಸೇರಿ ಒಟ್ಟು 1,45,10,000 ರೂ. ಮೊತ್ತದ ಚೆಕ್‌ಗಳನ್ನು ವಿತರಿಸಿಸಲಾಯಿತು.
ಫಲಾನುಭವಿಗಳಿಗೆ ಚೆಕ್ ವಿತರಿಸಿದ ಬಳಿಕ ಮಾತನಾಡಿದ ಸಚಿವರು ಬಡ ಅಲ್ಪಸಂಖ್ಯಾಕರಿಗೆ ಭೂ ಖರೀದಿ ಹಾಗೂ ಮನೆ ನಿರ್ಮಿಸಲು ಅನುಕೂಲವಾಗುವ ಹೊಸ ಯೋಜನೆಯ ಪ್ರಸ್ತಾವ ಸರಕಾರದ ಪರಿಶೀಲನೆಯಲ್ಲಿದ್ದು, ಆರ್ಥಿಕ ವಿಭಾಗದ ವರದಿಗಾಗಿ ಕಾಯಲಾಗುತ್ತಿದೆ ಎಂದು ಹೇಳಿದರು.
ರಾಜ್ಯ ಸರಕಾರ ಅಲ್ಪಸಂಖ್ಯಾಕರ ಅಭಿವೃದ್ಧಿಗಾಗಿ ಅತೀ ಹೆಚ್ಚು ಅನುದಾನ ಬಿಡುಗಡೆ ಮಾಡಿದ್ದು. ಪ್ರಶಕ್ತ ಸರಕಾರ ಬಜೆಟ್‌ನಲ್ಲಿ ಅಲ್ಪಸಂಖ್ಯಾಕರ ಇಲಾಖೆಗೆ 397 ಕೋಟಿ ರೂ. ಅನುದಾನ ಮೀಸಲಿರಿಸಿದೆ ಎಂದರು.
ಸರಕಾರ ಕಳೆದ 3 ವರ್ಷ ಹಾಗೂ 3 ತಿಂಗಳಲ್ಲಿ ಒಟ್ಟು 1,22,217 ಫಲಾನುಭವಿಗಳಿಗೆ 185.75 ಕೋಟಿ ರೂ. ಯೋಜನೆ ಅನುಷ್ಠಾನಗೊಳಿಸಿದೆ. ಈ ಅವಧಿಯಲ್ಲಿ ಅರಿವು ಯೋಜನೆಯಲ್ಲಿ 2 ಶೇ. ಬಡ್ಡಿಯಲ್ಲಿ ಒಟ್ಟು 33,599 ವಿದ್ಯಾರ್ಥಿಗಳಿಗೆ 56.20 ಕೋಟಿ ರೂ. ಸಾಲ ಒದಗಿಸಲಾಗಿದೆ. ಮೈಕ್ರೋ ಸಹಾಯಧನ ಸಾಲ ಯೋಜನೆಯಡಿ 4 ಶೇ. ಬಡ್ಡಿ ಹಾಗೂ 25 ಶೇ. ಸಬ್ಸಿಡಿಯಲ್ಲಿ ಒಟ್ಟು 2,794 ಮಹಿಳಾ ಸ್ವಸಹಾಯ ಸಂಘಗಳ 40,732 ಫಲಾನುಭವಿಗಳಿಗೆ 36.46 ಕೋಟಿ ರೂ. ಒದಗಿಸಲಾಗಿದೆ ಎಂದು ಕರ್ನಾಟಕ ಅಲ್ಪಸಂಖ್ಯಾಕರ ಅಭಿವೃದ್ಧಿ ನಿಗಮದ ಅಧ್ಯಕ್ಷ ಎನ್.ಬಿ. ಅಬೂಬಕ್ಕರ್ ವಿವರಿಸಿದರು.
ಕರ್ನಾಟಕ ವಿಧಾನಸಭೆ ಉಪ ಸಭಾಧ್ಯಕ್ಷ ಎನ್. ಯೋಗೀಶ್ ಭಟ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಕೆ. ಟಿ. ಶೈಲಜಾ ಭಟ್, ಶಾಸಕರಾದ ಅಭಯಚಂದ್ರ ಜೈನ್, ಯು.ಟಿ. ಖಾದರ್, ರಾಜ್ಯ ಅಲ್ಪಸಂಖ್ಯಾಕರ ಆಯೋಗದ ಅಧ್ಯಕ್ಷ ಅನ್ವರ್ ಮಾಣಿಪ್ಪಾಡಿ, ಜಿ. ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ| ಕೆ.ಎನ್. ವಿಜಯ ಪ್ರಕಾಶ, ಮನಪಾ ಸ್ಥಾಯೀ ಸಮಿತಿ ಅಧ್ಯಕ್ಷ ಸುಧೀರ್ ಶೆಟ್ಟಿ ಮುಖ್ಯ ಅತಿಥಿಗಳಾಗಿದ್ದರು.
ನಿಗಮದ ಜಿಲ್ಲಾ ವ್ಯವಸ್ಥಾಪಕ ಎಸ್.ಡಿ. ಸೋಮಪ್ಪ ಸ್ವಾಗತಿಸಿದರು. ಶ್ರೀಧರ ಭಂಡಾರಿ ವಂದಿಸಿದರು. ಮೊಹಮ್ಮದ್ ರಫಿ ಕಾರ್ಯಕ್ರಮ ನಿರ್ವಹಿಸಿದರು.
Click this button or press Ctrl+G to toggle between Kannada and English