ಮಂಗಳೂರು : ಮಂಗಳವಾರ ಮಂಗಳೂರು ಮಹಾನಗರ ಪಾಲಿಕೆ ಕಚೇರಿಯಲ್ಲಿ ಬಾಂಬ್ ಇಡಲಾಗಿದೆ ಎಂಬ ಅನಾಮಧೇಯ ಪತ್ರವೊಂದು ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರ ಕಚೇರಿಗೆ ತಲುಪಿದ ಹಿನ್ನಲೆಯಲ್ಲಿ ಪೊಲೀಸರು ಪಾಲಿಕೆಯ ಕಟ್ಟಡ ವನ್ನು ತೀವ್ರ ಶೋಧ ನಡೆಸಿದರು.
ಪೊಲೀಸ್ ಆಯುಕ್ತರಿಗೆ ಸಿಕ್ಕಿದ ಪತ್ರದಲ್ಲಿ ಪಾಲಿಕೆಯ ಕಚೇರಿಗೆ ಬಾಂಬ್ ಇಟ್ಟು ಸ್ಫೋಟಿಸುವುದಾಗಿ ಬರೆಯಲಾಗಿತ್ತು. ಪಾಲಿಕೆಯ ಸಾಮಾನ್ಯ ಸಭೆ ಮಧ್ಯಾಹ್ನ 3 ಗಂಟೆಗೆ ನಿಗದಿಯಾಗಿತ್ತು. ಕೂಡಲೇ ಜಾಗೃತರಾದ ಪೊಲೀಸರು ಪಾಲಿಕೆ
ಕಚೇರಿ ಹಾಗೂ ಸುತ್ತಮುತ್ತ ತೀವ್ರ ತಪಾಸಣೆ ನಡೆಸಿದರು. ಬಾಂಬ್ ಶೋಧ ಪರಿಕರ ಹಾಗೂ ಶ್ವಾನದಳ ಕಚೇರಿಯ ಒಳಗೆ ವ್ಯಾಪಕ ತಪಾಸಣೆ ನಡೆಸಿದರೂ ಯಾವುದೇ ಸ್ಫೋಟಕ ವಸ್ತುಗಳು ಪತ್ತೆಯಾಗಲಿಲ್ಲ.
ಬಾಂಬ್ ಬೆದರಿಕೆ ಹಿನ್ನೆಲೆಯಲ್ಲಿ ಪಾಲಿಕೆ ಸಾಮಾನ್ಯ ಸಭೆಯ ನಡೆಯುವ ಸಭಾಂಗಣದಲ್ಲಿ ಸಂದರ್ಶಕರ ಗ್ಯಾಲರಿಯನ್ನು ಭದ್ರತೆಗಾಗಿ ಮುಚ್ಚಲಾಗಿತ್ತು.
ಮಾಜಿ ಮೇಯರ್ ಶಂಕರ ಭಟ್ ಪಾಲಿಕೆಯ ಕಚೇರಿಯಲ್ಲಿ ಪೊಲೀಸರು ಬಂದು ತಪಾಸಣೆ ನಡೆಸಿರುವ ವಿಚಾರವನ್ನು ಸಭೆಯಲ್ಲಿ ಪ್ರಸ್ತಾವಿಸಿ, ಪಾಲಿಕೆಯಲ್ಲಿ ಭದ್ರತೆಯನ್ನು ಹೆಚ್ಚಿಸುವ ಅಗತ್ಯವಿದೆ. ಸಿಸಿಟಿವಿ ಆಳವಡಿಸುವುದು ಸೂಕ್ತ ಎಂದು ಸೂಚಿಸಿದರು.
ರಂಜಾನ್ ಹಾಗೂ ಗಣೇಶ ಚತುರ್ಥಿ ಹಬ್ಬಗಳ ಹಿನ್ನೆಲೆಯಲ್ಲಿ ನಗರದಲ್ಲಿ ವ್ಯಾಪಕ ಬಂದೋಬಸ್ತು ಕೈಗೊಳ್ಳಲಾಗಿದೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಗಸ್ತುಕಾರ್ಯವನ್ನು ಹೆಚ್ಚಿಸಲಾಗಿದ್ದು ರಾತ್ರಿ ಅಲ್ಲಲ್ಲಿ ನಾಕಾ ಬಂದಿ ಆಯೋಜಿಸಲಾಗಿದೆ. ಆಯಕಟ್ಟಿನ ಜಾಗಗಳಲ್ಲಿ ಗೃಹರಕ್ಷಕ ದಳವು ಸೇರಿದಂತೆ ಪೊಲೀಸರನ್ನು ನಿಯೋಜಿಸಲಾಗಿದೆ.
Click this button or press Ctrl+G to toggle between Kannada and English