ಮಂಗಳೂರು : ಗುಜರಿ ಹೆಕ್ಕುವ ನೆಪದಲ್ಲಿ ಒಂಟಿ ಮನೆಗಳ ಬಾಗಿಲಿನ ಬೀಗವನ್ನು ಒಡೆದು ಬೆಲೆಬಾಳುವ ಸೊತ್ತುಗಳನ್ನು ದೋಚುತ್ತಿದ್ದ ಕಳ್ಳರ ಜಾಲವನ್ನು ಪತ್ತೆ ಹಚ್ಚುವಲ್ಲಿ ಮಂಗಳೂರು ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ. ನಗರ ವ್ಯಾಪ್ತಿಯಲ್ಲಿ ಒಂಟಿ ಮನೆಗಳನ್ನು ಹಾಡು ಹಗಲೇ ಬೀಗ ಮುರಿದು ಕಳ್ಳತನ ನಡೆಸಿದ ಹಲವಾರು ಪ್ರಕರಣಗಳು ಬೆಳಕಿಗೆ ಬಂದಿತ್ತು.
ಈ ಹಿನ್ನೆಲೆಯಲ್ಲಿ ತನಿಖೆ ಆರಂಭಿಸಿದ ಸಿಸಿಬಿ ಪೊಲೀಸರು ಇಬ್ಬರು ಮಹಿಳೆಯರನ್ನು ಬಂಧಿಸಿ ಕಳ್ಳತನ ಮಾಡಿದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ಬಂಧಿತರನ್ನು ಕುಂಜತ್ತ್ ಬೈಲ್ ನಿವಾಸಿಗಳಾದ ಪಾರ್ವತಿ(29), ಜಯಲಕ್ಷ್ಮಿ (27) ಎಂದು ಗುರುತಿಸಲಾಗಿದೆ.
ಬಂಧಿತ ಆರೋಪಿಗಳು ನಗರದಲ್ಲಿ ಒಂಟಿ ಮನೆಗಳನ್ನು ಗುರುತಿಸಿ ಹಗಲು ಹೊತ್ತಿನಲ್ಲಿ ಮನೆಯ ಬಾಗಿಲಿನ ಬೀಗ ಮುರಿದು ಕಳ್ಳತನ ಮಾಡುತಿದ್ದರು ಎಂದು ಹೇಳಲಾಗಿದೆ.
ಆರೋಪಿಗಳು ಗುಂಪಾಗಿ ಗುಜರಿ ಹೆಕ್ಕುವ ನೆಪದಲ್ಲಿ ಸುತ್ತಾಡಿಕೊಂಡು ನಂತರ ವಾಸ್ತವ್ಯವಿಲ್ಲದ ಮನೆಗಳನ್ನು ಗುರುತಿಸಿ ಕೃತ್ಯ ಎಸಗುತ್ತಿದ್ದರು . ಕಳವುಗೈದ ಚಿನ್ನಾಭರಣಗಳನ್ನು ಹಣಕಾಸು ಸಂಸ್ಥೆಗಳಲ್ಲಿ ಅಡವು ಇರಿಸಿ ಹಣವನ್ನು ಪಡೆದುಕೊಂಡು ಶೋಕಿ ಜೀವನ ನಡೆಸುತ್ತಿದ್ದರು ಎಂದು ಹೇಳಲಾಗಿದೆ.
ಬಂಧಿತ ಆರೋಪಿಗಳಿಂದ ಒಟ್ಟು 91.23ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದ್ದು ಅದರ ಒಟ್ಟು ಮೌಲ್ಯ ರೂ. 2,46,321 ರೂಪಾಯಿ ಎಂದು ಅಂದಾಜಿಸಲಾಗಿದೆ.
Click this button or press Ctrl+G to toggle between Kannada and English