ಮಂಗಳೂರು: ಅತ್ಯಾಚಾರದ ಆರೋಪವನ್ನು ಎದುರಿಸುತ್ತಿರುವ ಕಾಂಗ್ರೆಸ್ ರಾಜ್ಯ ಉಸ್ತುವಾರಿಗಳಾದ ಕೆ.ಸಿ. ವೇಣುಗೋಪಾಲ್ ಹಾಗೂ ವಿಷ್ಣುನಾಥನ್ ರಾಜ್ಯಕ್ಕೆ ಬರುವುದು ಬೇಡ. ಕಾಂಗ್ರೆಸ್ ವರಿಷ್ಠರು ಕೂಡಲೇ ಅವರನ್ನು ವಾಪಸ್ ಕರೆಸಿಕೊಳ್ಳಬೇಕು ಎಂದು ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿ ಆಗ್ರಹಿಸಿದರು.
ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನ್ಯಾ. ಜಿ. ಶಿವಶಂಕರ್ ಆಯೋಗವು ಈಗಾಗಲೇ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ವರದಿ ಸಲ್ಲಿಸಿದೆ. ಇಬ್ಬರೂ ಅತ್ಯಾಚಾರ ನಡೆಸಿರುವುದು ಹಾಗೂ ಸೋಲಾರ್ ಹಗರಣದಲ್ಲಿ ಭಾಗಿಯಾಗಿರುವುದು ವರದಿಯಲ್ಲಿ ಸ್ಪಷ್ಟವಾಗಿದೆ ಎಂದರು.
ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಆರೋಪ ಎದುರಿಸುತ್ತಿರುವ ಸಚಿವ ಕೆ.ಜೆ.ಜಾರ್ಜ್ ಅವರ ರಾಜೀನಾಮೆಗೆ ಒತ್ತಾಯಿಸಿ ಹೋರಾಟ ಮುಂದುವರಿಯಲಿದೆ. ಬೆಳಗಾವಿ ಅಧಿವೇಶನದಲ್ಲಿ ಆರಂಭದ ದಿನದಿಂದಲೇ ಹೋರಾಟ ಮಾಡಲು ಕೋರ್ ಕಮಿಟಿ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಲಿಂಬಾವಳಿ ಮಾಹಿತಿ ನೀಡಿದರು. ಸರಕಾರ ಕೂಡಲೇ ಜಾರ್ಜ್ ಅವರ ರಾಜೀನಾಮೆ ಪಡೆಯಬೇಕು. ಇಲ್ಲದೇ ಹೋದರೆ, ಜಾರ್ಜ್ ರಾಜೀನಾಮೆ ಕೊಡುವವರೆಗೆ ಬಿಜೆಪಿ ಹೋರಾಟ ಮುಂದುವರಿಸಲಿದೆ. ಅಧಿವೇಶನದಲ್ಲಿ ರಾಜ್ಯದ ಸಮಸ್ಯೆಗಳ ಬಗ್ಗೆ ಚರ್ಚಿಸುವ ಉದ್ದೇಶದ ಸರಕಾರಕ್ಕಿದ್ದರೆ ಮುಖ್ಯಮಂತ್ರಿಯವರು ಶೀಘ್ರವೇ ಅವರಿಂದ ರಾಜೀನಾಮೆ ಪಡೆಯಲಿ ಎಂದರು.
ಶಿಕ್ಷಕರ ಕ್ಷೇತ್ರ ಹಾಗೂ ಕ್ಷೇತ್ರಗಳಿಂದ ರಾಜ್ಯ ವಿಧಾನ ಪರಿಷತ್‌ಗೆ ನಡೆಯಲಿರುವ ಚುನಾವಣೆಯ ಅಭ್ಯರ್ಥಿಗಳ ಆಯ್ಕೆ ಮಾಡಲು ಗುರುವಾರ ನಡೆದ ಕೋರ್ ಕಮಿಟಿ ಸಭೆಯಲ್ಲಿ ಸಾಧ್ಯವಾಗಿಲ್ಲ. ಅಭ್ಯರ್ಥಿಗಳ ಆಯ್ಕೆಗಾಗಿ ರಚಿಸಲಾಗಿರುವ ಉಪಸಮಿತಿಗಳ ವರದಿ ಇನ್ನೂ ಸಲ್ಲಿಕೆ ಆಗಬೇಕಿದೆ. ಶೀಘ್ರ ವರದಿ ಸಲ್ಲಿಸಲು ಸೂಚಿಸಲಾಗಿದ್ದು, ನಂತರ ರಾಜ್ಯ ಘಟಕದ ಅಧ್ಯಕ್ಷ ಯಡಿಯೂರಪ್ಪಅವರು, ಪಕ್ಷದ ಉಸ್ತುವಾರಿಗಳಾದ ಮುರಳೀಧರ್ ರಾವ್, ಪ್ರಕಾಶ್ ಜಾವಡೇಕರ್, ಪಿಯೂಷ್ ಗೋಯಲ್‌ರ ಮೂಲಕ ಕೇಂದ್ರ ನಾಯಕರಿಗೆ ಪಟ್ಟಿ ಸಲ್ಲಿಸಲಿದ್ದಾರೆ. ಬಳಿಕ ವರಿಷ್ಠರು ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ಅರವಿಂದ ಲಿಂಬಾವಳಿ ಹೇಳಿದರು.
ಪರಿವರ್ತನಾ ರ್ಯಾಲಿಯ ಬೃಹತ್ ಸಮಾವೇಶ ಡಿಸೆಂಬರ್ 21 ರಂದು ಹುಬ್ಬಳ್ಳಿಯಲ್ಲಿ ನಡೆಯಲಿದೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದು ಅವರು ಮಾಹಿತಿ ನೀಡಿದರು.
Click this button or press Ctrl+G to toggle between Kannada and English