ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶುಕ್ರವಾರ ಯಾತ್ರೆ ಸಂಚಾರ ನಡೆಸುತ್ತಿದೆ, ಒಂದು ದಿನದ ವಿಶ್ರಾಂತಿ ಬಳಿಕ ಬಿಜೆಪಿ ನಾಯಕರು ಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ. ಬಿಜೆಪಿಯ ನವ ಕರ್ನಾಟಕ ನಿರ್ಮಾಣ ಪರಿವರ್ತನಾ ಯಾತ್ರೆ 7ನೇ ದಿನಕ್ಕೆ ಕಾಲಿಟ್ಟಿದೆ. ಶುಕ್ರವಾರ ಬೆಳಗ್ಗೆ ಕರ್ನಾಟಕ ಬಿಜೆಪಿಯ ನವ ಕರ್ನಾಟಕ ನಿರ್ಮಾಣ ಪರಿವರ್ತನಾ ಯಾತ್ರೆಯ ಬಸ್ಸಿಗೆ ಕುಕ್ಕೆ ಸುಬ್ರಮಣ್ಯ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ನಂತರ 7ನೇ ದಿನದ ಯಾತ್ರೆ ಆರಂಭವಾಯಿತು.
ಕರ್ನಾಟಕ ಬಿಜೆಪಿ ಅಧ್ಯಕ್ಷ, 2018ರ ಚುನಾವಣೆ ಮುಖ್ಯಮಂತ್ರಿ ಅಭ್ಯರ್ಥಿ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಯಾತ್ರೆ ಆರಂಭವಾಯಿತು. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ, ಪುತ್ತೂರು, ಬೆಳ್ತಂಗಡಿಯಲ್ಲಿ ಶುಕ್ರವಾರ ಯಾತ್ರೆ ಸಂಚಾರ ನಡೆಸಲಿದೆ. ಬಿಜೆಪಿ ಪರಿವರ್ತನಾ ಯಾತ್ರೆ, ಬಿಎಸ್‌ವೈ ಆಪ್ತರಾದ ನಾಯಕರು ಎಲ್ಲಿ? ನವ ಕರ್ನಾಟಕ ನಿರ್ಮಾಣ ಪರಿವರ್ತನಾ ಯಾತ್ರೆ ಮೂಲಕ ಕರ್ನಾಟಕ ಬಿಜೆಪಿ 2018ರ ಚುನಾವಣೆ ಪ್ರಚಾರ ನಡೆಸುತ್ತಿದೆ. ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ, ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ, ದಕ್ಷಿಣ ಕನ್ನಡ ಸಂಸದ ನಳೀನ್ ಕುಮಾರ್ ಕಟೀಲ್ ಅವರು ಯಡಿಯೂರಪ್ಪ ಜೊತೆ ಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ.
10 ಸಾವಿರಕ್ಕೂ ಅಧಿಕ ಜನರು ಭಾಗಿ ಶುಕ್ರವಾರ ಸುಳ್ಯದಲ್ಲಿ ನಡೆದ ಬಿಜೆಪಿ ಪರಿವರ್ತನಾ ಯಾತ್ರೆಗೆ ಭಾರೀ ಬೆಂಬಲ ವ್ಯಕ್ತವಾಯಿತು. 10 ಸಾವಿರಕ್ಕೂ ಅಧಿಕ ಜನರು ಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ಯಾತ್ರೆ ಹಿನ್ನಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಅನ್ನು ಮಾಡಲಾಗಿತ್ತು.
ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಬರಲಿದೆ ಯಾತ್ರೆಯಲ್ಲಿ ಮಾತನಾಡಿದ ಬಿ.ಎಸ್.ಯಡಿಯೂರಪ್ಪ ‘ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಯಾತ್ರೆ ಬಂದಿರುವುದು ಶಕ್ತಿಯನ್ನು ಇಮ್ಮಡಿಗೊಳಿಸಿದೆ. ನಾನು ಮುಖ್ಯಮಂತ್ರಿಯಾದರೆ ಎಲ್ಲಾ ಭರವಸೆ ಗಳನ್ನು ಈಡೇರಿಸುತ್ತೇನೆ. ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಬರುವುದು ಸೂರ್ಯ-ಚಂದ್ರ ಇರುವಷ್ಟು ಸತ್ಯ’ ಎಂದರು.
ಹಿಟ್ಲರ್ ಜಯಂತಿ ಮಾಡೋದು ಒಂದೇ ‘ಟಿಪ್ಪು ಜಯಂತಿ ಮಾಡುವುದು ಒಂದೇ ಹಿಟ್ಲರ್ ಜಯಂತಿ ಮಾಡುವುದೂ ಒಂದೇ. ಮತಾಂತರ ಆಗಿಲ್ಲ ಎಂದು ಚರ್ಚುಗಳನ್ನು ಧ್ವಂಸ ಮಾಡಿದವನು ಟಿಪ್ಪು ಸುಲ್ತಾನ್. ಚಿತ್ರದುರ್ಗ, ಮೇಲುಕೋಟೆಯಲ್ಲಿ ಟಿಪ್ಪು ಕ್ರೌರ್ಯ ಮೆರೆದಿದ್ದಾನೆ. ಕೊಡಗು ಮತ್ತು ದಕ್ಷಿಣ ಕನ್ನಡ ಜಿಲ್ಲೆಯನ್ನು ಮಲಪ್ಪುರಂ ಮಾಡೋಕೆ ರಾಜ್ಯ ಸರ್ಕಾರ ಹೊರಟಿದೆ’ ಎಂದು ಯಡಿಯೂರಪ್ಪ ವಾಗ್ದಾಳಿ ನಡೆಸಿದರು.
ಇಸ್ಲಾಮಿಕ್ ಟೆರರಿಸಂ ‘PFI ಮತ್ತು SDPI ಸಂಘಟನೆಗಳು ಕರ್ನಾಟಕದಲ್ಲಿ ಇಸ್ಲಾಮಿಕ್ ಭಯೋತ್ಪಾದನೆ ಮಾಡಲು ಹೊರಟಿವೆ’ ಎಂದು ಸುಳ್ಯದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಆರೋಪಿಸಿದರು. ಸಿದ್ದರಾಮಯ್ಯಗೆ ನಾಚಿಗೆ ಆಗಬೇಕು ‘ಕರ್ನಾಟಕದಲ್ಲಿ ಟಿಪ್ಪು ಜಯಂತಿ ಆಚರಿಸಲಾಗುತ್ತಿದೆ. ಸಿಎಂ ಸಿದ್ದರಾಮಯ್ಯಗೆ ನಾಚಿಗೆ ಆಗಬೇಕು. ಯಾವ ಸೀಮೆಯ ಮುಖ್ಯಮಂತ್ರಿ ಸಿದ್ದರಾಮಯ್ಯ?. ರಾಜ್ಯದ ಖಜಾನೆ ಕೊಳ್ಳೆ ಹೊಡೆಯುವ ಮುಖ್ಯಮಂತ್ರಿ’ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ವಾಗ್ದಾಳಿ ನಡೆಸಿದರು.
‘ಯಡಿಯೂರಪ್ಪ ಅಧಿಕಾರ ಹಿಡಿಯಬೇಕು’ ‘ಯಡಿಯೂರಪ್ಪ ಅವರು ರಾಜ್ಯದ ಅಧಿಕಾರದ ಚುಕ್ಕಾಣಿ ಹಿಡಿಯುವ ಅಗತ್ಯವಿದೆ. ದೇಶದಲ್ಲಿ ರಾಜಕೀಯ ಪರಿವರ್ತನೆಯಾಗುತ್ತಿದೆ. ನೆಹರೂ ರಾಜಕಾರಣ ಬಿಟ್ಟರೆ ಕಾಂಗ್ರೆಸ್ ಪಕ್ಷಕ್ಕೆ ಬೇರೆ ರಾಜಕಾರಣ ಗೊತ್ತಿಲ್ಲ’ ಎಂದು ಡಿ.ವಿ.ಸದಾನಂದ ಗೌಡ ಹೇಳಿದರು. ನಮ್ಮ ತೆರಿಗೆ ಹಣದಲ್ಲಿ ಟಿಪ್ಪು ಜಯಂತಿ ಮಾಡುತ್ತಿದೆ ‘ಕರ್ನಾಟಕ ಸರ್ಕಾರ ನಮ್ಮ ತೆರಿಗೆ ಹಣದಲ್ಲಿ ಟಿಪ್ಪು ಜಯಂತಿ ಆಚರಣೆ ಮಾಡುತ್ತಿದೆ. ಮಂಗಳೂರಿನ ಕ್ರೈಸ್ತರು ಟಿಪ್ಪು ಜಯಂತಿಯನ್ನು ವಿರೋಧ ಮಾಡುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ ಮುಸಲ್ಮಾನರ ಮೂಗಿಗೆ ತುಪ್ಪ ಹಚ್ಚುವ ಕೆಲಸ ಮಾಡುತ್ತಿದ್ದಾರೆ’ ಎಂದು ಶೋಭಾ ಕರಂದ್ಲಾಜೆ ವಾಗ್ದಾಳಿ ನಡೆಸಿದರು.
ಪೊಲೀಸರಿಂದ ಒಂದು ನ್ಯಾಯ ‘ಟಿಪ್ಪು ಜಯಂತಿಗೆ ಹಿಂದೂ ಕಾರ್ಯಕರ್ತರಿಗೆ 10 ಲಕ್ಷ ಬಾಂಡ್ ಪಡೆದುಕೊಳ್ಳಲಾಗಿದೆ. ಪೊಲೀಸರಿಂದ ಒಂದೊಂದು ನ್ಯಾಯ ಅನುಸರಿಸಲಾಗಿತ್ತುದೆ. ಹಿಂದೂ ಕಾರ್ಯಕರ್ತರನ್ನು ಮುಟ್ಟಿದರೆ ಉಗ್ರ ಹೋರಾಟ ಮಾಡುತ್ತೇವೆ’ ಎಂದು ಶೋಭಾ ಕರಂದ್ಲಾಜೆ ಎಚ್ಚರಿಕೆ ನೀಡಿದರು.
Click this button or press Ctrl+G to toggle between Kannada and English