ಅನಿಲ ಭಾಗ್ಯ: ಜಿಲ್ಲೆಯಲ್ಲಿ 49618 ಮನೆಗೆ ಉಚಿತ ಗ್ಯಾಸ್ ಸಂಪರ್ಕ

4:29 PM, Saturday, November 11th, 2017
Share
1 Star2 Stars3 Stars4 Stars5 Stars
(5 rating, 1 votes)
Loading...

anila bhagyaಮ೦ಗಳೂರು: ಮುಖ್ಯಮಂತ್ರಿ ಅನಿಲಭಾಗ್ಯ ಯೋಜನೆಯಡಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗ್ಯಾಸ್ ಸಂಪರ್ಕ ಇಲ್ಲದಿರುವ 49618 ಫಲಾನುಭವಿಗಳಿಗೆ ಉಚಿತವಾಗಿ ಸಂಪರ್ಕ ನೀಡಲಾಗುವುದು ಎಂದು ಅರಣ್ಯ ಪರಿಸರ ಹಾಗೂ ಜೀವಿಶಾಸ್ತ್ರ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ತಿಳಿಸಿದ್ದಾರೆ.

ಅವರು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮುಖ್ಯಮಂತ್ರಿ ಅನಿಲಭಾಗ್ಯ ಯೋಜನೆ ಅನುಷ್ಠಾನ ಕುರಿತು ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲೆಯಲ್ಲಿ ಈಗಾಗಲೇ ಗ್ಯಾಸ್ ಸಂಪರ್ಕ ಪಡೆದಿರುವ ಮನೆಗಳನ್ನು ಹೊರತುಪಡಿಸಿ, ಇನ್ನೂ 49618 ಮನೆಗಳಿಗೆ ಗ್ಯಾಸ್ ಸಂಪರ್ಕ ಪಡೆಯಲು ಬಾಕಿ ಇದೆ. ಈಗಾಗಲೇ ಸಮೀಕ್ಷೆ ನಡೆಸಿ ನಿಖರ ಮಾಹಿತಿ ಪಡೆಯಲಾಗಿದೆ. ಜಿಲ್ಲೆಯ ಎಲ್ಲಾ 8 ವಿಧಾನಸಭಾ ಕ್ಷೇತ್ರದ 320 ನ್ಯಾಯಬೆಲೆ ಅಂಗಡಿಗಳ ವ್ಯಾಪ್ತಿಯಲ್ಲಿ ಈ ಫಲಾನುಭವಿಗಳಿದ್ದು, ಮೊದಲ ಹಂತದಲ್ಲಿ 15888 ಫಲಾನುಭವಿಗಳಿಗೆ ಶೀಘ್ರವೇ ಗ್ಯಾಸ್ ಸಂಪರ್ಕ ಒದಗಿಸಲಾಗುವುದು ಎಂದು ಸಚಿವರು ತಿಳಿಸಿದರು.

ಆಹಾರ ಸಚಿವ ಯು.ಟಿ. ಖಾದರ್ ಸಭೆಯಲ್ಲಿ ಮಾತನಾಡಿ, ಕಾರ್ಮಿಕರು, ಬಿಪಿಎಲ್ ವರ್ಗದವರು ಸೇರಿದಂತೆ ಎಲ್ಲಾ ವರ್ಗದ ಫಲಾನುಭವಿಗಳನ್ನು ಆದ್ಯತೆಯಲ್ಲಿ ಶಾಸಕರ ನೇತೃತ್ವದ ಸಮಿತಿಯ ಮೂಲಕ ಈ ಯೋಜನೆಗೆ ಆಯ್ಕೆ ಮಾಡಲಾಗುವುದು. ಆಧಾರ್ ಆಧಾರದಲ್ಲಿ ಅವರಿಗೆ ಈಗಾಗಲೇ ಗ್ಯಾಸ್ ಸಂಪರ್ಕ ಇಲ್ಲದಿರುವುದನ್ನು ಖಾತರಿಪಡಿಸಿ ಆಯ್ಕೆ ಮಾಡಲಾಗುವುದು. ಬಳಿಕ ಫಲಾನುಭವಿಗೆ ಗ್ಯಾಸ್ ಕನೆಕ್ಷನ್ ಪಡೆಯಲು ಒಟ್ಟು ಮೊತ್ತದ ಡಿಡಿ ನೀಡಲಾಗುವುದು. ಈ ಡಿಡಿಯನ್ನು ಫಲಾನುಭವಿ ತನ್ನ ಇಚ್ಚಯೆ ಯಾವುದೇ ಗ್ಯಾಸ್ ಏಜನ್ಸಿಗೆ ನೀಡಿ ಸಂಪರ್ಕ ಪಡೆಯಬಹುದು ಎಂದರು.

ಮುಖ್ಯಮಂತ್ರಿ ಅನಿಲ ಭಾಗ್ಯ ಯೋಜನೆಯಲ್ಲಿ ಗ್ಯಾಸ್ ಸ್ಟವ್ ಕೂಡ ಉಚಿತವಾಗಿ ನೀಡಲಾಗುವುದು. ಸಿಲಿಂಡರ್ ಭದ್ರತಾ ಠೇವಣಿ- ರೂ. 1450, ರೆಗ್ಯುಲೇಟರ್- ರೂ.150, ಸುರಕ್ಷಾ ಹೋಸ್-ರೂ.190, ಪುಸ್ತಕ- ರೂ.50, ಜೋಡಣಾ ವೆಚ್ಚ- ರೂ. 100, ಎರಡು ಬರ್ನರ್ ಗ್ಯಾಸ್ ಸ್ಟವ್- ರೂ.1000 ಹಾಗೂ ಎರಡು ಭರ್ತಿಗೊಂಡ ಗ್ಯಾಸ್ ಸಿಲಿಂಡರ್- ರೂ. 1000 ಸೇರಿದಂತೆ ಪ್ರತೀ ಫಲಾನುಭವಿಗೆ ರಾಜ್ಯ ಸರಕಾರ ಒಟ್ಟು ರೂ.4040 ವೆಚ್ಚ ಮಾಡಲಿದೆ. ಫಲಾನುಭವಿಗಳಿಗೆ ಇದು ಸಂಪೂರ್ಣ ಉಚಿತವಾಗಿ ನೀಡಲಾಗುವುದು. ಅರಣ್ಯ ಇಲಾಖೆ, ಆಹಾರ ಇಲಾಖೆ, ಕಾರ್ಮಿಕ ಇಲಾಖೆ ಮತ್ತು ಸಮಾಜ ಕಲ್ಯಾಣ ಇಲಾಖೆಯ ಮೂಲಕ ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಸಚಿವ ಯು.ಟಿ. ಖಾದರ್ ವಿವರಿಸಿದರು.

ಯೋಜನೆಯ ಅನುಷ್ಠಾನಕ್ಕೆ ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದೆ. ಮುಂದಿನ ಒಂದು ವಾರದೊಳಗೆ ಜಿಲ್ಲೆಯ ಫಲಾನುಭವಿಗಳ ಆಯ್ಕೆ ಪಟ್ಟಿ ಸಿದ್ದಗೊಳಿಸಿ ಸಲ್ಲಿಸಲು ಸಚಿವರು ಆಹಾರ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು. ಅರ್ಹ ಫಲಾನುಭವಿಗಳು ಕಣ್ತಪ್ಪಿನಿಂದ ಕೈಬಿಟ್ಟು ಹೋಗಿದ್ದರೆ ಮುಂದಿನ ಹಂತದಲ್ಲಿ ಅವರನ್ನು ಸೇರಿಸಿಕೊಳ್ಳಲಾಗುವುದು ಎಂದು ಸಚಿವರು ವಿವರಿಸಿದರು.

ಸಭೆಯಲ್ಲಿ ಮಂಗಳೂರು ಉತ್ತರ ಶಾಸಕ ಬಿ.ಎ. ಮೊಹಿದೀನ್ ಬಾವಾ, ಜಿಲ್ಲಾಧಿಕಾರಿ ಸಸಿಕುಮಾರ್ ಸೆಂಥಿಲ್, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಎಂ.ಆರ್. ರವಿ, ಆಹಾರ ಇಲಾಕೆ ಉಪನಿರ್ದೇಶಕ ಜಯಪ್ಪ, ತೈಲ ಕಂಪೆನಿಗಳ ಅಧಿಕಾರಿಗಳು ಇದ್ದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English