ಈದುಲ್‌ ಫಿತರ್‌ ಹಬ್ಬವನ್ನು ಸಂಭ್ರಮೋಲ್ಲಾಸದಿಂದ ಆಚರಿಸಿದ ಮುಸ್ಲಿಮರು

12:52 PM, Thursday, September 1st, 2011
Share
1 Star2 Stars3 Stars4 Stars5 Stars
(3 rating, 1 votes)
Loading...

Edga Ground

ಮಂಗಳೂರು : ದಕ್ಷಿಣ ಕನ್ನಡ ಸೇರಿದಂತೆ ಉಡುಪಿ, ಕಾಸರಗೋಡು ಜಿಲ್ಲೆಗಳಲ್ಲಿ ಬುಧವಾರ ಮುಸ್ಲಿಮರು ತಮ್ಮ ಪವಿತ್ರ ಈದುಲ್‌ ಫಿತರ್‌ ಹಬ್ಬವನ್ನು ಸಂಭ್ರಮೋಲ್ಲಾಸದಿಂದ ಆಚರಿಸಿದರು. ಮುಸ್ಲೀಮರು ಬೆಳಗ್ಗಿನಿಂದಲೇ ಮೆರವಣಿಗೆ, ಕುತುಬ್ ಪಾರಾಯಣ ಮತ್ತು ನಮಾಜಿನಲ್ಲಿ ಪಾಲ್ಗೊಂಡರು.

ಒಂದು ತಿಂಗಳ ಉಪವಾಸವನ್ನು ಪೂರೈಸುವ ಮುಸ್ಲಿಮರು ಹಬ್ಬದಂದು ಹಬ್ಬದಂದು ಬೆಳಗ್ಗೆ ಬಿಳಿ ವಸ್ತ್ರವನ್ನು ಧರಿಸಿ, ಸಮೀಪದ ಮಸೀದಿಯಲ್ಲಿ ನಮಾಝ್ ಮಾಡಿ, ನಂತರ ಪರಿವಾರ ಸಮೇತ ಹತ್ತಿರದ ಬಂಧುಗಳ ಮನೆಗೆ ಭೇಟಿ, ಶುಭಾಶಯ ವಿನಿಮಯ ಮಾಡಿಕೊಳ್ಳವುದು ಈ ಹಬ್ಬದ ವಿಶೇಷತೆ. ಮುಸ್ಲಿಂ ಯುವಕರು ಹಬ್ಬದ ಹಿಂದಿನ ದಿನ ವಿದ್ಯುತ್‌ ದೀಪದ ಮೂಲಕ ವಿಶೇಷ ಅಲಂಕಾರ ನಡೆಸಿ. ಬಣ್ಣದ ಕಾಗದ, ಬ್ಯಾನರು ಕಟ್ಟಿ ಹಬ್ಬದ ಸಿದ್ದತೆ ನಡೆಸುತ್ತಾರೆ. ಹಬ್ಬದ ದಿನ ಸಾರ್ವಜನಿಕರಿಗೆ ಸಿಹಿ ತಿಂಡಿ ಹಂಚಿ. ಪರಸ್ಪರ ಆಲಿಂಗನದ ಮೂಲಕ ಪ್ರೀತಿಯನ್ನು ಅಭಿವ್ಯಕ್ತಪಡಿಸುವುದು ಈ ಸಂದರ್ಭದಲ್ಲಿ ಸಾಮಾನ್ಯ ವಾಗಿರುತ್ತದೆ.

ನಗರದ ಬಾವುಟಗುಡ್ಡೆ ಈದ್ಗಾ ಪ್ರಾರ್ಥನಾ ಮಂದಿರದಲ್ಲಿ ಬೆಳಗ್ಗೆ ಸಾಮೂಹಿಕ ಈದ್‌ ಪ್ರಾರ್ಥನೆ ನಡೆಯಿತು. ದ. ಕ. ಜಿಲ್ಲಾ ಖಾಝಿ ತ್ವಾಕಾ ಅಹ್ಮದ್‌ ಮುಸ್ಲಿಯಾರ್‌ ಅವರು ಬಡವರಿಗೆ ಹಾಗೂ ಅಗತ್ಯವಿರುವವರಿಗೆ ಸಾಧ್ಯವಿರುವಷ್ಟು ನೆರವು ನೀಡುವ ಮೂಲಕ ಅಲ್ಲಾಹುವಿನ ಕೃಪೆಗೆ ಪಾತ್ರರಾಗುವಂತೆ ಅವರು ಸಂದೇಶ ನೀಡಿದರು. ಶಾಂತಿ- ಸಾಮರಸ್ಯದಿಂದ ಸಹಬಾಳ್ವೆ ನಡೆಸಲು ಈದುಲ್‌ ಫಿತರ್‌ ಪ್ರೇರಣೆ ನೀಡಲಿ ಎಂದು ಹಾರೈಸಿದರು.

ಪೊಲೀಸ್‌ ಕಮೀಶನರ್‌ ಸೀಮಂತ್‌ ಕುಮಾರ್‌ ಸಿಂಗ್‌ ಅವರು ಬಾವುಟಗುಡ್ಡೆಯಲ್ಲಿ ಮುಸ್ಲಿಂ ಸಮುದಾಯದ ಮುಖಂಡರನ್ನು ಭೇಟಿ ಮಾಡಿ ಶುಭ ಹಾರೈಸಿದರು. ಝೀನತ್‌ ಬಕ್ಷ್ ಮಸೀದಿ ಅಧ್ಯಕ್ಷ ಯೇನಪೊಯ ಅಬ್ದುಲ್ಲ ಕುಂಞಿ ಅವರು ಶುಭಾಶಯ ನೀಡಿದರು.

ಪಂಪ್‌ವೆಲ್‌ ಸಮೀಪ ವಿರುವ ತಕ್ವಾ ಮಸೀದಿಯಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಯಿತು. ಉಳ್ಳಾಲ ಸಯ್ಯದ್ ಮದನಿ ದರ್ಗಾದಲ್ಲಿ ಬೆಳಗ್ಗೆ ಸಾಮೂಹಿಕ ಈದ್‌ ನಮಾಝ್ ಮತ್ತು ಕುತುಬು ಪಾರಾಯಣ ನಡೆಯಿತು.

ಬೆಳಗ್ಗೆ ಬಾವುಟಗುಡ್ಡೆಯಲ್ಲಿ ವಾಹನ ಸಂಚಾರವನ್ನು ಪರಿವರ್ತಿಸಲಾಗಿತ್ತು. ಹಬ್ಬದ ಪ್ರಯುಕ್ತ ಮುಸ್ಲಿಂ ಸಮುದಾಯದ ಎಲ್ಲಾ ವ್ಯವಹಾರ ಕೇಂದ್ರಗಳು ಮುಚ್ಚಿದ್ದವು. ಹಬ್ಬದ  ಪ್ರಯುಕ್ತ ಸಂಜೆಯ ವೇಳೆಗೆ ಸಮುದ್ರ ಕಿನಾರೆ, ನಗರದ ವಿವಿಧ ಮಾಲ್‌ಗ‌ಳಲ್ಲಿ ಜನ ಸಂಚಾರ ಅಧಿಕವಿತ್ತು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English