ಬದುಕನ್ನು ಪ್ರೀತಿಸಿ, ಹೃದಯ ಶ್ರೀಮಂತಿಕೆಯೊಂದಿಗೆ ಉತ್ತಮ ಸಂಸ್ಕಾರ ಬೆಳೆಸಿಕೊಳ್ಳಬೇಕು : ವೀರೇಂದ್ರ ಹೆಗ್ಗಡೆ

12:13 PM, Wednesday, November 15th, 2017
Share
1 Star2 Stars3 Stars4 Stars5 Stars
(No Ratings Yet)
Loading...

deepotsavaಉಜಿರೆ: ಬದುಕನ್ನು ಪ್ರೀತಿಸಿ, ಹೃದಯ ಶ್ರೀಮಂತಿಕೆಯೊಂದಿಗೆ ಉತ್ತಮ ಆಚಾರ-ವಿಚಾರ, ಸಾತ್ವಿಕತೆ, ಪ್ರೀತಿ-ವಿಶ್ವಾಸ ಮತ್ತು ಮಾನವೀಯತೆಯನ್ನು ಬೆಳೆಸಿಕೊಳ್ಳಬೇಕು. ಸತ್ಯ, ಧರ್ಮ, ನ್ಯಾಯದ ಹಾದಿಯಲ್ಲಿ ನಡೆದು ಸಜ್ಜನರಾಗಿ ಸಾರ್ಥಕ ಬದುಕನ್ನು ನಡೆಸಬೇಕು ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು.

ಧರ್ಮಸ್ಥಳದಲ್ಲಿ ಲಕ್ಷ ದೀಪೋತ್ಸವ ಪ್ರಾರಂಭದ ದಿನವಾದ ಸೋಮವಾರ ಉಜಿರೆಯಿಂದ ಧರ್ಮಸ್ಥಳಕ್ಕೆ ಪಾದಯಾತ್ರೆಯಲ್ಲಿ ಬಂದ ಭಕ್ತರು ಮತ್ತು ಅಭಿಮಾನಿಗಳನ್ನು ಉದ್ದೇಶಿಸಿ ಅಮೃತವರ್ಷಿಣಿ ಸಭಾಭವನದಲ್ಲಿ ಅವರು ಮಾತನಾಡಿದರು.
ಸುಂದರ ಪ್ರಕೃತಿ-ಪರಿಸರ ಮತ್ತು ಭೂಮಿಯನ್ನು ರಕ್ಷಣೆ ಮಾಡಿ ಸುಸ್ಥಿತಿಯಲ್ಲಿ ಮುಂದಿನ ಜನಾಂಗಕ್ಕೆ ನೀಡುವುದು ನಮ್ಮೆಲ್ಲರ ಹೊಣೆಗಾರಿಕೆಯಾಗಿದೆ.

deepotsava ಧರ್ಮಸ್ಥಳ ತನ್ನ ಧರ್ಮ ಭೂಮಿಯಾದರೆ, ಉಜಿರೆ ಕರ್ಮ ಭೂಮಿಯಾಗಿದೆ. ಉಜಿರೆಗೂ, ಧರ್ಮಸ್ಥಳಕ್ಕೂ ಅವಿನಾಭಾವ ಸಂಬಂಧವಿದೆ. ಯಾರಲ್ಲಿ ಹೆಚ್ಚು ಸಂಪತ್ತು ಇದೆಯೋ ಅವರು ದಾನ ಮಾಡುವುದಿಲ್ಲ. ಕಡಿಮೆ ಸಂಪತ್ತು ಹೊಂದಿದವರು ಹೃದಯ ಶ್ರೀಮಂತಿಕೆಯಿಂದ ಉತ್ತಮ ದಾನ ಮಾಡುತ್ತಾರೆ ಎಂದು ಅವರು ಅಭಿಪ್ರಾಯ ಪಟ್ಟರು. ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆ, ಉಚಿತ ಸಾಮೂಹಿಕ ವಿವಾಹ, ಸ್ವ-ಉದ್ಯೋಗ ತರಬೇತಿ, ಮಹಿಳಾ ಸಬಲೀಕರಣ ಮೊದಲಾದ ಎಲ್ಲಾ ಯೋಜನೆಗಳಲ್ಲೂ, ಸೇವಾ ಕಾರ್ಯಗಳಲ್ಲಿ ಬುದ್ಧಿ ಮತ್ತು ಹೃದಯಕ್ಕೆ ಉತ್ತಮ ಸಂಸ್ಕಾರ ನೀಡಿ, ಮಾನವೀಯತೆ ಮತ್ತು ಪ್ರೀತಿ-ವಿಶ್ವಾಸ ಮೂಡಿಸುವ ಕೆಲಸ ಮಾಡಲಾಗುತ್ತಿದೆ. ಜನಸಾಮಾನ್ಯರ ಪ್ರಗತಿಗಾಗಿ ಸಮಾಜಮುಖಿಯಾಗಿ ಸೇವಾ ಕಾರ್ಯಗಳನ್ನು ರೂಪಿಸಲಾಗುತ್ತದೆ. ತಾನು ವಿದೇಶಕ್ಕೆ ಹೋಗಿ ವೈಭವೀಕರಣ ಮಾಡಿಕೊಳ್ಳಲು ಇಚ್ಛಿಸುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಸದಾ ನಗು ನಗುತ್ತಾ ಸವಾಲುಗಳನ್ನು ಆತ್ಮವಿಶ್ವಾಸದಿಂದ ಸ್ವೀಕರಿಸಿ. ದೇವರ ಅನುಗ್ರಹದಿಂದ ಎಲ್ಲವೂ ಸುಲಲಿತವಾಗಿ ಪರಿಹಾರವಾಗುತ್ತದೆ ಎಂದರು.

ಇತರ ಗಣ್ಯ ವ್ಯಕ್ತಿಗಳಂತೆ ತನಗೆ ಪೊಲೀಸ್ ರಕ್ಷಣೆ ಬೇಕಾಗಿಲ್ಲ. ತಾನು ಒಬ್ಬನೇ ಕಾರಿನಲ್ಲಿ ಪ್ರಯಾಣಿಸುತ್ತೇನೆ. ಹಿಂದೆ-ಮುಂದೆ ಪೊಲೀಸರು ಇರುವುದಿಲ್ಲ. ತನ್ನ ಭಕ್ತರು, ಶಿಷ್ಯರು ಮತ್ತು ಅಭಿಮಾನಿಗಳ ಪ್ರೀತಿ-ವಿಶ್ವಾಸ, ಭಕ್ತಿಯೇ ತನಗೆ ಶ್ರೀರಕ್ಷೆಯಾಗಿದೆ ಎಂದು ಹೆಗ್ಗಡೆಯವರು ಅಭಿಮಾನದಿಂದ ಹೇಳಿದರು.

deepotsava ಪಟ್ಟಾಭಿಷೇಕದ ಸುವರ್ಣ ಮಹೋತ್ಸವ ಆಚರಣೆ ಸಂದರ್ಭದಲ್ಲಿ ತನಗೆ ಸಿ.ಎಂ., ಪಿ.ಎಂ. ಹಾಗೂ ಮೈಸೂರಿನ ರಾಜರಿಂದ ರಾಜ ಮರ್ಯಾದೆ, ಗೌರವ ಲಭಿಸಿದೆ. ಅಭಿಮಾನಿಗಳು ಪ್ರೀತಿ-ವಿಶ್ವಾಸ ಮತ್ತು ಭಕ್ತಿಯ ಮಹಾಪೂರವನ್ನೇ ಹರಿಸಿದ್ದಾರೆ. ಇದು ತನಗೆ ಅತೀವ ಸಂತೋಷ ಹಾಗೂ ನೆಮ್ಮದಿ ನೀಡಿದೆ ಎಂದು ಹೆಗ್ಗಡೆಯವರು ಹೇಳಿದರು.

ಪ್ರಧಾನಿಯವರು ಧರ್ಮಸ್ಥಳಕ್ಕೆ ಬಂದಾಗ ಇಡೀ ದೇಶದಲ್ಲಿ ಪ್ರೀತಿ-ವಿಶ್ವಾಸ, ಶಾಂತಿ, ನೆಮ್ಮದಿ, ಸುಭಿಕ್ಷೆ ನೆಲೆಸಲಿ. ಶತ್ರುತ್ವ ದೂರವಾಗಿ ಮಿತ್ರತ್ವ ಬೆಳೆಯಲಿ ಎಂದು ದೇವಸ್ಥಾನದಲ್ಲಿ ಪ್ರಧಾನಿಯವರ ಹೆಸರಿನಲ್ಲಿ ಸಂಕಲ್ಪ ಮಾಡಿ ಶತ ರುದ್ರಾಭಿಷೇಕ ಸೇವೆ ಸಲ್ಲಿಸಿ ಲೋಕ ಕಲ್ಯಾಣಕ್ಕಾಗಿ ಪ್ರಾರ್ಥನೆ ಸಲ್ಲಿಸಲಾಗಿದೆ ಎಂದು ಅವರು ತಿಳಿಸಿದರು.

ಸರ್ವರ ವತಿಯಿಂದ ಹೆಗ್ಗಡೆಯವರನ್ನು ಗೌರವಿಸಿ ಸನ್ಮಾನಿಸಲಾಯಿತು.

ವಿಜಯರಾಘವ ಪಡ್ವೆಟ್ನಾಯ ಪ್ರಾಸ್ತಾವಿಕವಾಗಿ ಮಾತನಾಡಿದರು. ವಕೀಲ ಪ್ರತಾಪಸಿಂಹ ನಾಯಕ್ ಸ್ವಾಗತಿಸಿ ಕೊನೆಯಲ್ಲಿ ಧನ್ಯವಾದವಿತ್ತರು.

ಹೇಮಾವತಿ ವೀ. ಹೆಗ್ಗಡೆ, ಡಿ. ಹರ್ಷೇಂದ್ರ ಕುಮಾರ್, ಸುಪ್ರಿಯಾ ಹರ್ಷೇಂದ್ರ ಕುಮಾರ್ ಮತ್ತು ಡಾ. ಬಿ. ಯಶೋವರ್ಮ ಉಪಸ್ಥಿತರಿದ್ದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English