ಉಜಿರೆ: ಸಮಾಜದ ಒಳಿತಿಗಾಗಿ ಧರ್ಮದ ಆಚರಣೆಯ ಅವಶ್ಯಕತೆ ಇದೆ. ನಮ್ಮ ಜೀವನದಲ್ಲಿ ಧರ್ಮವನ್ನು ಬಿಟ್ಟು ಬದುಕಲು ಸಾಧ್ಯವಿಲ್ಲ. ಎಲೆಗೂ, ಮರಕ್ಕೂ ಇರುವ ಅವಿನಾಭಾವ ಸಂಬಂಧ ನಮಗೂ ಧರ್ಮಕ್ಕೂ ಇದೆ. ನಮ್ಮಿಂದ ಧರ್ಮ, ಧರ್ಮದಿಂದ ನಾವು ಎಂಬ ಭಾವನೆ ಇದ್ದಾಗ ಧರ್ಮ ಜಾಗೃತಿಯಾಗುತ್ತದೆ. ಧರ್ಮ ಜಾಗೃತಿ ಮತ್ತು ಧರ್ಮದ ಅನುಷ್ಠಾನದಿಂದ ಆರೋಗ್ಯಪೂರ್ಣ ಸಮಾಜ ನಿರ್ಮಾಣ ವಾಗುತ್ತದೆ ಎಂದು ಸುಬ್ರಹ್ಮಣ್ಯ ಮಠದ ವಿದ್ಯಾ ಪ್ರಸನ್ನತೀರ್ಥ ಸ್ವಾಮೀಜಿ ಹೇಳಿದರು.
ಅವರು ಗುರುವಾರ ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ ಸಂದರ್ಭದಲ್ಲಿ ಆಯೋಜಿಸಲಾದ ಸರ್ವಧರ್ಮ ಸಮ್ಮೇಳನದ ೮೫ನೇ ಅಧವೇಶನವನ್ನು ಉದ್ಘಾಟಿಸಿ ಮಾತನಾಡಿದರು.
ಪರಂಪರಾಗತ ಸಂಸ್ಕೃತಿಯ ರಕ್ಷಣೆಯಿಂದ, ಧರ್ಮದ ಅನುಷ್ಠಾನದಿಂದ ಶಾಂತಿ, ನೆಮ್ಮದಿ ಮತ್ತು ಸಂತೋಷ ಸಿಗುತ್ತದೆ. ನಮ್ಮ ಮಾತು ಮತ್ತು ಕೃತಿಯಲ್ಲಿ ಅಂತರ ಇರಬಾರದು. ಆಚಾರ ಮತ್ತು ವಿಚಾರದಲ್ಲಿ ವ್ಯತ್ಯಾಸವಾಗಬಾರದು. ದೇವರ ಮೇಲಿನ ನಂಬಿಕೆ, ಭಕ್ತಿ ಮತ್ತು ಪ್ರಾರ್ಥನೆಯಿಂದ ಜೀವನ ಪಾವನವಾಗುತ್ತದೆ. ಮನಸ್ಸು ಪವಿತ್ರವಾಗುತ್ತದೆ. ಧರ್ಮಸ್ಥಳದಲ್ಲಿ ನೀಡುವ ಅಭಯ ದಾನ ಶ್ರೇಷ್ಠ ದಾನವಾಗಿದೆ ಎಂದು ಅವರು ಹೇಳಿದರು.
ಜೈನ ಧರ್ಮದಲ್ಲಿ ಸಮನ್ವಯ ಎಂಬ ವಿಷಯದ ಬಗ್ಗೆ ಮಾತನಾಡಿದ ಹಿರಿಯ ಪತ್ರಕರ್ತ ಪದ್ಮರಾಜ ದಂಡಾವತಿ, ಸಕಲ ಜೀವಿಗಳಿಗೆ ಹಿತವನ್ನು ಬಯಸುವ ಜೈನ ಧರ್ಮ ವಿಶ್ವ ಧರ್ಮವಾಗಿದೆ. ಬದುಕು ಮತ್ತು ಬದುಕಲು ಬಿಡು ಎಂಬುದು ಶ್ರೇಷ್ಠ ತತ್ವವಾಗಿದೆ. ಸಾಮಾನ್ಯವಾಗಿ ಕೆಲವರು ಹೇಳುವಂತೆ ಜೈನ ಧರ್ಮವು ಹಿಂದೂ ಧರ್ಮ ಅಥವಾ ಬೌದ್ಧ ಧರ್ಮದ ಭಾಗ ಅಲ್ಲ. ಮಾಹಾವೀರ ಜೈನ ಧರ್ಮದ ಸ್ಥಾಪಕ ಅಲ್ಲ ಎಂದು ಅವರು ಸ್ಪಷ್ಟ ಪಡಿಸಿದರು. ಮಹಾವೀರ ತೀರ್ಥಂಕರರಿಗಿಂತ ಹಿಂದೆ ವೃಷಭ ತೀರ್ಥಂಕರ ಆದಿಯಾಗಿ ೨೩ ಮಂದಿ ತೀರ್ಥಂಕರರು ಜೈನ ಧರ್ಮದ ಬೋಧನೆ ಮಾಡಿದ್ದಾರೆ.
ಜೈನ ಧರ್ಮದ ಉದಾತ್ತ ತತ್ವಗಳಾದ ಅಹಿಂಸೆ, ಅನೇಕಾಂತವಾದ ಮತ್ತು ಅಪರಿಗ್ರಹದಿಂದ ಇಂದಿನ ಎಲ್ಲಾ ಸಮಸ್ಯೆಗಳನ್ನು ಸುಲಭದಲ್ಲಿ ಪರಿಹರಿಸಬಹುದು. ಪಂಚಾಣು ವ್ರತಗಳ ಪಾಲನೆಯಿಂದ ಶಾಂತಿ, ನೆಮ್ಮದಿ ಸಿಗುತ್ತದೆ. ಸಮ್ಯಕ್ ದರ್ಶನ, ಸಮ್ಯಕ್ ಜ್ಞಾನ ಮತ್ತು ಸಮ್ಯಕ್ ಚಾರಿತ್ರ್ಯದಿಂದ ಪ್ರತಿಯೊಬ್ಬರು ಮೋಕ್ಷ ಸಾಧನೆ ಮಾಡಿ ಜಿನ ಆಗಬಹುದು. ಜೈನ ಧರ್ಮದ ಸಮನ್ವಯ ದೃಷ್ಟಿಕೋನ ಆದರ್ಶ ಹಾಗೂ ಅನುಕರಣೀಯವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಉಡುಪಿಯ ಅಕ್ಬರ್ ಅಲಿ ಇಸ್ಲಾಂ ಧರ್ಮದಲ್ಲಿ ಸಮನ್ವಯ ದೃಷ್ಟಿ ಎಂಬ ವಿಷಯದ ಬಗ್ಗೆ ಮಾತನಾಡಿ, ಧರ್ಮಸ್ಥಳದಲ್ಲಿ ಪ್ರತಿ ವರ್ಷ ನಡೆಯುವ ಸರ್ವಧರ್ಮ ಸಮ್ಮೇಳನ ದೇಶಕ್ಕೇ ಮಾದರಿಯಾಗಿದೆ. ಹೃದಯಗಳನ್ನು ಜೋಡಿಸುವುದೇ ಧರ್ಮದ ಗುರಿಯಾಗಿದೆ. ಮಂದಿರ, ಮಸೀದಿಗಳಿಗೆ ಕಲ್ಲು ಹೊಡೆಯುವುದರಿಂದ ಧರ್ಮ ಉಳಿಯುವುದಿಲ್ಲ. ಧರ್ಮ ನಮ್ಮ ಹೃದಯದಲ್ಲಿದೆ. ಹೃದಯ ಶ್ರೀಮಂತಿಕೆಯಿಂದ ಮಾತ್ರ ಶಾಂತಿ, ನೆಮ್ಮದಿಯ ಜೀವನ ನಡೆಸಬಹುದು. ಭಾರತೀಯರು ಶಾಂತಿ ಪ್ರಿಯರಾಗಿದ್ದು ಎಲ್ಲರೂ ಪ್ರೀತಿ-ವಿಶ್ವಾಸದಿಂದ ಸಾಮರಸ್ಯದ ಜೀವನ ನಡೆಸಬೇಕು. ಈ ದಿಸೆಯಲ್ಲಿ ಧರ್ಮಸ್ಥಳ ಎಲ್ಲರಿಗೂ ದಾರಿ ದೀಪವಾಗಿದೆ ಎಂದು ಹೇಳಿದರು.
ಕ್ರೈಸ್ತ ಧರ್ಮದ ಬಗ್ಗೆ ಮಾತನಾಡಿದ ಬೆಂಗಳೂರಿನ ಸ್ವಾಮಿ ಅಂತೋನಿರಾಜ್, ಪ್ರೀತಿ ಮತ್ತು ಸೇವೆಯಿಂದ ನಾವು ದೇವರ ಅನುಗ್ರಹಕ್ಕೆ ಪಾತ್ರರಾಗಬಹುದು. ಎಲ್ಲರೂ ಜಾತಿ, ಮತ ಬೇಧ ಮರೆತು ಸಾಮರಸ್ಯದಿಂದ ನೆಮ್ಮದಿಯ ಜೀವನ ನಡೆಸೋಣ ಎಂದು ಹಾರೈಸಿದರು.
ಅಧ್ಯಕ್ಷತೆ ವಹಿಸಿದ ವೆಲ್ಲೂರಿನ ಶ್ರೀ ನಾರಾಯಣಿ ಪೀಠಂ ನ ಶ್ರೀಶಕ್ತಿ ಅಮ್ಮ ಮಾತನಾಡಿ ಎಲ್ಲಾ ಧರ್ಮಗಳಿಗೂ ಭಕ್ತಿಯೇ ಮೂಲ. ದೇವರ ಮೇಲಿನ ಭಕ್ತಿಯಿಂದ ನಂಬಿಕೆ, ಪ್ರೀತಿ, ಗೌರವ ಮೂಡಿ ಬರುತ್ತದೆ. ಭಯ ಮತ್ತು ಭಕ್ತಿ ಇದ್ದಾಗ ಜೀವನದಲ್ಲಿ ಶಿಸ್ತು, ಸಂಯಮ ಉಂಟಾಗುತ್ತದೆ ಎಂದು ಹೇಳಿದರು. ಆಗ ಮಾತ್ರ ನಾವು ಕೆಟ್ಟ ಕೆಲಸಗಳಿಂದ ದೂರವಿದ್ದು ಸತ್ಕಾರ್ಯಗಳನ್ನು ಮಾಡುತ್ತೇವೆ. ದೇವರ ಭಕ್ತಿಯಿಂದ ನಾವು ಸದಾಚಾರ ಸಂಪನ್ನರಾಗಿ ಜೀವನದಲ್ಲಿ ಸುಖ, ಶಾಂತಿ ಮತ್ತು ನೆಮ್ಮದಿ ಪಡೆಯಬಹುದು.
ಧರ್ಮಸ್ಥಳದ ಸೇವಾ ಕಾರ್ಯಗಳನ್ನು ಶ್ಲಾಘಿಸಿದ ಅವರು ಹೆಗ್ಗಡೆಯವರು ವೆಲ್ಲೂರಿಗೆ ಬಂದು ಅನ್ನದಾನಕ್ಕೆ ಚಾಲನೆ ನೀಡಿರುವುದನ್ನು ಕೃತಜ್ಞತೆಯಿಂದ ಸ್ಮರಿಸಿದರು.
ಸರ್ವಧರ್ಮಗಳ ಸಾರ: ಮಾನವ ಹಿತ ಹಾಗೂ ಲೋಕ ಕಲ್ಯಾಣ
ಆರಂಭದಲ್ಲಿ ಸ್ವಾಗತಿಸಿದ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಪ್ರಾಸ್ತಾವಿಕವಾಗಿ ಮಾತನಾಡಿ, ಮಾನವ ಹಿತ ಹಾಗೂ ಲೋಕಕಲ್ಯಾಣವೇ ಸರ್ವಧರ್ಮಗಳ ಸಾರವಾಗಿದೆ. ಧರ್ಮದಲ್ಲಿ ಸತ್ವವಿದೆ. ಸತ್ಕಾರ್ಯಕ್ಕೆ ಪ್ರೇರಣೆ ಇದೆ. ಧಾರ್ಮಿಕ ತಳಹದಿಯಲ್ಲಿ ಮಾಡುವ ಎಲ್ಲಾ ಕಾರ್ಯಗಳು ಸತ್ಪರಿಣಾಮವನ್ನುಂಟು ಮಾಡುತ್ತವೆ. ಸಕಲ ಜೀವಿಗಳೊಂದಿಗೆ ಪ್ರೀತ-ಸ್ನೇಹದ ಸಂಬಂಧ ಇಟ್ಟುಕೊಂಡಾಗ ಮಾತ್ರ ಮನುಷ್ಯ ಶ್ರೇಷ್ಠನಾಗಲು ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟರು.
ಮಾತೃ ಭೂಮಿ ರಕ್ಷಿಸಿ ಅಭಿಯಾನ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಮೂಲಕ ಮಾತೃ ಭೂಮಿ ರಕ್ಷಿಸಿ ಅಭಿಯಾನವನ್ನು ಹಮ್ಮಿಕೊಂಡು ಸುಂದರ ಪ್ರಕೃತಿ – ಪರಿಸರವನ್ನು ಮುಂದಿನ ಪೀಳಿಗೆಗೆ ಸುಸ್ಥಿತಿಯಲ್ಲಿ ಉಳಿಸಿ, ಬೆಳೆಸಿ ನೀಡುವ ಬಗ್ಗೆ ಅರಿವು, ಜಾಗೃತಿ ಮೂಡಿಸಲಾಗುವುದು ಎಂದು ಹೆಗ್ಗಡೆಯವರು ಪ್ರಕಟಿಸಿದರು.
ಮುನುಷ್ಯನ ಸ್ವಾರ್ಥ ಹೆಚ್ಚಾದಂತೆ ಮಿತ ಬಳಕೆ ಅತಿ ಬಳಕೆಯಾಗುತ್ತಾ ಬಂದು ಈಗ ಎಲ್ಲಾ ಪ್ರಾಕೃತಿಕ ಸಂಪನ್ಮೂಲಗಳು ಬರಿದಾಗುತ್ತವೆ. ಪ್ರಕೃತಿಯನ್ನು ಜೀವಿಸಲು ಯೋಗ್ಯವಾಗಿರುವಂತೆ ನಮ್ಮ ಮುಂದಿನ ಪೀಳಿಗೆಗೆ ಹಸ್ತಾಂತರಿಸುವರ ಹೊಣೆಗಾರಿಕೆಯನ್ನು ನಾವು ಮರೆಯಬಾರದು ಎಂದು ಅವರು ಸಲಹೇ ನೀಡಿದರು.
ಧರ್ಮಸ್ಥಳ ಗ್ರಾಮ ಪಂಚಾಯಿತಿ ಅಧ್ಯಕ್ಷ ಚಂದನ್ ಕಾಮತ್ ಧನ್ಯವಾದವಿತ್ತರು. ಉಜಿರೆ ಎಸ್.ಡಿ.ಎಂ. ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಬಿ.ಪಿ. ಸಂಪತ್ ಕುಮಾರ್ ಮತ್ತು ಪ್ರೊ. ಬಿ.ಎ. ಕುಮಾರ ಹೆಗ್ಡೆ ಕಾರ್ಯಕ್ರಮ ನಿರ್ವಹಿಸಿದರು.
ರಾತ್ರಿ ಕಂಚಿಮಾರು ಕಟ್ಟೆ ಉತ್ಸವ ನಡೆಯಿತು.
Click this button or press Ctrl+G to toggle between Kannada and English