ಮಂಗಳೂರು : ಮಹಿಳಾ ಕಾಂಗ್ರೆಸ್ ಘಟಕದ ವತಿಯಿಂದ ದೇಶದ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ 100ನೆ ಹುಟ್ಟುಹಬ್ಬದ ಪ್ರಯುಕ್ತ ನ.18ರ ರಾತ್ರಿಯಿಂದ ನ.19ರ ಸಂಜೆಯವರೆಗೆ ರಾಜ್ಯಾದ್ಯಂತ ಗ್ರಾಮ ವಾಸ್ತವ್ಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ದ.ಕ. ಜಿಲ್ಲೆಯ 12 ಬ್ಲಾಕ್‌ಗಳಲ್ಲಿ ಈ ಕಾರ್ಯಕ್ರಮವನ್ನು ನಡೆಸಲಾಗುವುದು ಎಂದು ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾಲೆಟ್ ಪಿಂಟೋ ತಿಳಿಸಿದರು.
ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 12 ಬ್ಲಾಕ್‌ಗಳಲ್ಲಿಯೂ ಬಡ, ಹಿಂದುಳಿದ ಮಹಿಳೆಯನ್ನು ಹೊಂದಿದ ಮನೆಗಳಲ್ಲಿ ಈ ಗ್ರಾಮ ವಾಸ್ತವ್ಯವನ್ನು ನಡೆಸಲಾಗುತ್ತಿದ್ದು, ಈಗಾಗಲೇ ಆಯಾ ಬ್ಲಾಕ್‌ಗಳಲ್ಲಿಗ್ರಾಮ ವಾಸ್ತವ್ಯ ಮಾಡಲಾಗುವ ಮನೆಳನ್ನು ಗುರುತಿಸಲಾಗಿದೆ ಎಂದರು.
ನ. 18ರಂದು ಸಂಜೆ 4 ಗಂಟೆಗೆ ಸ್ಥಳೀಯ ಬ್ಲಾಕ್‌ಗಳ ಮಹಿಳೆಯರು ಆಯ್ಕೆ ಮಾಡಿದ ಮಹಿಳೆಯ ಮನೆಗೆ ತೆರಳಿ ಅಲ್ಲಿ ರಾತ್ರಿಯ ಅಡುಗೆಯನ್ನು ತಯಾರಿಸಿ ಆ ಮನೆಯವರ ಜತೆ ಊಟ ಮಾಡಿ, ಅವರ ಬೇಡಿಕೆಗಳನ್ನು ಅರಿತುಕೊಂಡು ಅಗತ್ಯ ನೆರವನ್ನು ನೀಡಲಿದ್ದಾರೆ. ಸಂಬಂಧಪಟ್ಟ ಕಾಲನಿಯಲ್ಲಿನ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಕೂಡಾ ಮಹಿಳಾ ಘಟಕ ಮುಂದಿನ ಒಂದು ವರ್ಷದ ಅವಧಿಯಲ್ಲಿ ಶ್ರಮಿಸಲಿದೆ. ಹಾಗಾಗಿ ಈ ಕಾರ್ಯಕ್ರಮ ಒಂದು ದಿನದ ವಾಸ್ತವ್ಯ ಮಾತ್ರ ಆಗಿರದೆ, ವರ್ಷ ಪೂರ್ತಿ ಆ ಕುಟುಂಬದ ಜತೆ ನಿರಂತರ ಸಂಪರ್ಕ ಬೆಳೆಸಿ ಆ ಮಹಿಳೆಯರಿಗೆ ಮಾನಸಿಕ ಸ್ಥೈಯ ತುಂಬುವ ಜತೆಗೆ ತಮ್ಮಿಂದಾದ ನೆರವನ್ನು ಒದಗಿಸುವ ಕಾರ್ಯಕ್ರಮವೂ ಆಗಿದೆ ಎಂದವರು ಹೇಳಿದರು.
Click this button or press Ctrl+G to toggle between Kannada and English