ಮಂಗಳೂರು:ವಿದ್ಯಾರ್ಥಿಗಳು ತಮ್ಮ ಪದವಿಯೊಂದಿಗೆ ಮಾನವೀಯತೆ ಹಾಗೂ ಸಾಮಾಜಿಕ ಕಳಕಳಿಯನ್ನು ಹೊಂದಬೇಕು.ಸಮಾಜದಲ್ಲಿ ಎಲ್ಲರೊಂದಿಗೂ ಪರಸ್ಪರ ಬೆರೆಯುವ ಸಹಕಾರ ಮನೋಭಾವ ಮನಸ್ಸಿಗೆ ನೆಮ್ಮದಿಯನ್ನು ನೀಡುತ್ತದೆಯೇ ಹೊರತು ಪದವಿ ಮತ್ತು ಅಧಿಕಾರಗಳಲ್ಲ ಎಂದು ಕರಾವಳಿ ಕಾಲೇಜುಗಳ ಸಮೂಹದ ಆಡಳಿತ ಮಂಡಳಿ, ಜಿ.ಆರ್.ಎಜುಕೇಶನ್ ಟ್ರಸ್ಟ್ ಸ್ಥಾಪಕಾಧ್ಯಕ್ಷ ಎಸ್. ಗಣೇಶ್ ರಾವ್ ಹೇಳಿದರು.
ಕರಾವಳಿ ಫಾರ್ಮಸಿ ಕಾಲೇಜಿನಲ್ಲಿ ರಾಷ್ಟ್ರೀಯ ಫಾರ್ಮಸಿ ಸಪ್ತಾಹದ ಅಂಗವಾಗಿ ಫಾದರ್ ಮುಲ್ಲರ್ ಆಸ್ಪತ್ರೆ ರಕ್ತನಿಧಿ ಇದರ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಲಾದ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರಕ್ತದಾನವು ದೇವರು ಮೆಚ್ಚುವ ಶ್ರೇಷ್ಠ ದಾನವಾಗಿದ್ದು,ದೇವರಿಗೆ ಪೂಜೆ ಮಾಡುವುದಕ್ಕೆ ಸಮಾನವಾಗಿದೆ. ವೈದ್ಯೋ ನಾರಾಯಣೋ ಹರಿ ಎಂಬಂತೆ ವೈದ್ಯಕೀಯ ವೃತ್ತಿಯು ಪುಣ್ಯದಾಯಕವಾಗಿದ್ದು,ವೈದ್ಯರು ಪ್ರಾಮಾಣಿಕತೆಯಿಂದ ಜನ ಸೇವೆಯ ಮನೋಭಾವದೊಂದಿಗೆ ತಮ್ಮ ಕರ್ತವ್ಯಗಳನ್ನು ನೆರವೇರಿಸಬೇಕು. ರಕ್ತಕ್ಕೆ ಯಾವುದೇ ಜಾತಿ ಮತ ಭೇದವಿಲ್ಲ.ರಕ್ತ ದಾನವು ದೇಶದ ಅಖಂಡತೆ, ಏಕತೆ ಹಾಗೂ ಸೌಹಾರ್ದವನ್ನು ಎತ್ತಿ ಹಿಡಿದಂತಾಗುತ್ತದೆ ಎಂದು ಅವರು ತಿಳಿಸಿದರು.
ರಕ್ತ ದಾನ ಪುಣ್ಯದ ಕೆಲಸ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿನ ವೈಸ್ ಡೀನ್ ಡಾ|ಪದ್ಮಜಾ ಉದಯಕುಮಾರ್ ಮಾತನಾಡಿ, ಹಿಂದೆ ಹಣ ಗಳಿಸುವ ಉದ್ದೇಶದೊಂದಿಗೆ ರಕ್ತದಾನವನ್ನು ಮಾಡಲಾಗುತ್ತಿತ್ತು.ಇಂದು ಸ್ವಯಂ ಪ್ರೇರಿತರಾಗಿ ಸೇವಾ ಮನೋಭಾವದೊಂದಿಗೆ ರಕ್ತದಾನ ಮಾಡಲಾಗುತ್ತದೆ.ಯಾವುದೇ ಪ್ರತಿಫಲ ಬಯಸದೆ ರಕ್ತದಾನ ಮಾಡುವುದು ನಿಜವಾಗಿಯೂ ಪುಣ್ಯದ ಕೆಲಸ ಎಂದರು.
ಫಾದರ್ ಮುಲ್ಲರ್ ಆಸ್ಪತ್ರೆಯ ರಕ್ತನಿಧಿ ಅಧಿಕಾರಿ ಡಾ|ಚಾರುಗೋಸ್ಲ ಹಾಗೂ ಕರಾವಳಿ ಫಾರ್ಮಸಿ ಕಾಲೇಜಿನ ಪ್ರಾಂಶುಪಾಲ ಡಾ ನಾರಾಯಣ ಸ್ವಾಮಿ ಉಪಸ್ಥಿತರಿದ್ದರು. ರಿಹಾಮ್ ಸ್ವಾಗತಿಸಿದರು. ಟ್ರೇಸಾ ಎಲಿಜಬೆತ್ ನಿರೂಪಿಸಿದರು.ಸಮೀನಾ ವಂದಿಸಿದರು.
Click this button or press Ctrl+G to toggle between Kannada and English