ಉಡುಪಿ : ಕೇವಲ ಅಲ್ಪಸಂಖ್ಯಾತರು ಹಾಗೂ ಬಹುಸಂಖ್ಯಾತರ ನಡುವೆ ಇರುವ ತಾರತಮ್ಯವನ್ನು ತೊಡೆದು ಹಾಕಲು ಸಂವಿಧಾನದ ತಿದ್ದುಪಡಿ ಮಾಡುವಂತೆ ಸೂಚಿಸಿದ್ದೇನೆಯೇ ಹೊರತು ಸಂವಿಧಾನವನ್ನು ಬದಲಾಯಿಸುವಂತೆ ಕರೆ ನೀಡಿಲ್ಲ ಎಂದು ಪರ್ಯಾಯ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಧರ್ಮ ಸಂಸದ್‌ನಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಟಪಡಿಸಿದ್ದಾರೆ.
ಅಲ್ಪಸಂಖ್ಯಾತರಿಗೆ ಹಾಗೂ ಬಹುಸಂಖ್ಯಾತರಿಗೆ ಬೇರೆ ಬೇರೆ ನಿಯಮಗಳಿರುವುದನ್ನು ಟೀಕಿಸಿ, ಅಲ್ಪಸಂಖ್ಯಾತರಿಗೆ ಸಿಗುವ ಎಲ್ಲಾ ಸೌಲಭ್ಯಗಳು ಬಹುಸಂಖ್ಯಾತರಿಗೂ ಸಿಗುವಂತಾಗಬೇಕು. ಇದಕ್ಕಾಗಿ ಸಂವಿಧಾನದಲ್ಲಿ ಬದಲಾವಣೆಯಾಗಬೇಕು ಎಂದು ಉಡುಪಿಯಲ್ಲಿ ನಡೆದಿರುವ ಧರ್ಮ ಸಂಸದ್‌ನ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡುವ ವೇಳೆ ಕರೆನೀಡಿದ್ದರು.
ಭಾರತದ ಸಂವಿಧಾನಕ್ಕೆ ಈವರೆಗೆ ನೂರಾರು ತಿದ್ದುಪಡಿಗಳನ್ನು ಮಾಡಲಾಗಿವೆ. ಸಂವಿಧಾನವನ್ನು ಅಂಬೇಡ್ಕರ್ ಒಬ್ಬರೇ ಮಾಡಿದ್ದಲ್ಲ. ಹಲವು ತಜ್ಞರು ಅದರಲ್ಲಿದ್ದರು ಹಾಗೂ ಹಲವು ತಿದ್ದುಪಡಿ ಮಾಡಲಾಗಿದೆ. ಧರ್ಮದ ಆಧಾರದಲ್ಲಿ ಭೇದ ಬೇಡ ಎಂಬುದು ನನ್ನ ಮಾತಿನ ಆಶಯವಾಗಿತ್ತು. ನನ್ನ ಮಾತಿನಿಂದ ಅಂಬೇಡ್ಕರ್‌ಗೆ ಹೇಗೆ ಅವಮಾನವಾಗುತ್ತದೆ ಎಂದು ಅವರು ಪ್ರಶ್ನಿಸಿದರು.
1977ರಲ್ಲಿ ಅಸ್ಪೃಶ್ಯತಾ ನಿವಾರಣೆಯ ಮೊದಲ ಹೆಜ್ಜೆಯಾಗಿ ನಾನು ದಲಿತರ ಕೇರಿಗೆ ಹೋದಾಗ ಸಂತರು, ಬ್ರಾಹ್ಮಣರು ಎಲ್ಲರೂ ನನ್ನನ್ನು ವಿರೋಧಿಸಿದ್ದರು. ಆದರೆ ಇಂದು ಅಸ್ಪೃಶ್ಯತೆಯ ಪ್ರಮಾಣ ಬಹಳಷ್ಟು ಕಡಿಮೆಯಾಗಿದೆ. ಈಗ ಜನರ, ಮಠಾಧಿಪತಿಗಳ ಮನೋಧರ್ಮದಲ್ಲಿ ಬದಲಾವಣೆಯಾಗಿದೆ ಎಂದರು.
ಒಟ್ಟಾರೆ ಶೇ.50ರಷ್ಟು ಮೀಸಲಾತಿ ನೀಡುವುದನ್ನು ನಾನೆಂದೂ ವಿರೋಧಿಸಿಲ್ಲ. ದಲಿತರಿಗೆ ಮೀಸಲಾತಿ ಬೇಕು ಎಂದು ನಾನು ಮೊದಲಿನಿಂದಲೂ ಪ್ರತಿಪಾದಿಸಿದ್ದೇನೆ ಎಂದವರು ಹೇಳಿದರು.
ಕೆಲವು ರಾಜಕೀಯ ಪಕ್ಷಗಳು ಹಾಗೂ ಜಾತ್ಯತೀತವಾದಿಗಳು ಸಂಘ ಪರಿವಾರವನ್ನು ಮನುವಾದಿ- ಬ್ರಾಹ್ಮಣವಾದಿಗಳಂತೆ ಚಿತ್ರಿಸುತ್ತಾರೆ. ದಲಿತರ ವಿರೋಧಿಗಳಂತೆ ಬಿಂಬಿಸುತಿದ್ದಾರೆ. ಆದರೆ ಮನುವಾದಕ್ಕೂ ವಿಎಚ್‌ಪಿ ಸಂಬಂಧವಿಲ್ಲ. ಜಾತಿ ಪದ್ಧತಿಗೆ ವಿರೋಧ ಸಂಘದಿಂದಲೇ ಪ್ರಾರಂಭವಾಗಿತ್ತು ಎಂದು ಸ್ವಾಮೀಜಿ ಹೇಳಿದರು.
ಉಡುಪಿ ಶ್ರೀಕೃಷ್ಣ ಮಠದಲ್ಲಿ ಬ್ರಾಹ್ಮಣರು, ದಲಿತರು, ಬಂಟರು, ಬಿಲ್ಲವರು ಹಾಗೂ ಇತರ ಜಾತಿಗಳವರು ಎಲ್ಲರೂ ಸೇರಿ ಊಟ ಮಾಡುತಿದ್ದಾರೆ. ಇಲ್ಲಿ ಪಂಕ್ತಿ ಭೇದದ ಆಚರಣೆ ನಡೆಯುತ್ತಿಲ್ಲ. ಹೆಚ್ಚಿನ ಮಠಗಳಲ್ಲಿ ಕ್ತಿ ಭೇದದ ಆಚರಣೆ ಬದಲಾವಣೆ ಆಗುತ್ತಿದೆ ಎಂದು ಸ್ವಾಮೀಜಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ವಿಚಾರ ಕೋರ್ಟ್‌ನ ಹೊರಗೆ ಆದರೂ, ಕೋರ್ಟ್ ಮೂಲಕವಾದರೂ ಸಂತೋಷ. ಒಟ್ಟಿನಲ್ಲಿ ಅಲ್ಲಿ ರಾಮಮಂದಿರ ನಿರ್ಮಾಣಗೊಳ್ಳಬೇಕು ಎಂದರು.
Click this button or press Ctrl+G to toggle between Kannada and English