ಮಂಗಳಮುಖಿಯರ ಅಭಿವೃದ್ದಿಗಾಗಿ ಸರಕಾರ ಬದ್ದ ; ಶಾಸಕ ಜೆ.ಆರ್.ಲೋಬೊ

10:09 PM, Saturday, December 2nd, 2017
Share
1 Star2 Stars3 Stars4 Stars5 Stars
(No Ratings Yet)
Loading...

Mangala Mukhiಮಂಗಳೂರು: ಮಂಗಳಮುಖಿಯರ ಅಭಿವೃದ್ದಿಗಾಗಿ ಸರಕಾರ ಸಂಪೂರ್ಣ ಬದ್ಧವಾಗಿದ್ದು, ಅವರಿಗಾಗಿ ಸರಕಾರದಿಂದ ಕೊಡಮಾಡುವ ವಿವಿಧ ಯೋಜನೆಗಳನ್ನು ತಲುಪಿಸಲು ಸದಾಬದ್ದವಾಗಿರುವುದಾಗಿ ಮಂಗಳೂರು ದಕ್ಷಿಣ ಶಾಸಕ ಜೆ ಆರ್ ಲೋಬೊ ಹೇಳಿದರು.

ಅವರು ಶನಿವಾರ ಪರಿವರ್ತನಾ ಚಾರೀಟೇಬಲ್ ಟ್ರಸ್ಟ್ ಮತ್ತು ಸಮಾಜ ಕಾರ್ಯವಿಭಾಗ ಸ್ಕೂಲ್ ಆಫ್ ರೋಶನಿ ನಿಲಯ ಮಂಗಳೂರು ಇವರುಗಳ ಜಂಟಿ ಆಶ್ರಯದಲ್ಲಿ ಕಾಲೇಜಿನ ಸಭಾಂಗಣದಲ್ಲಿ  ಪ್ರಥಮ ಬಾರಿಗೆ ಆಯೋಜಿಸಿದ ಕ್ರಿಸ್ಮಸ್ ಆಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಮಂಗಳಮುಖಿಯರೊಂದಿಗೆ ಕ್ರಿಸ್ಮಸ್ ಸಂಭ್ರಮವನ್ನು ಹಂಚಿಕೊಳ್ಳುವ ವಿನೂತನ ಕಾರ್ಯಕ್ರಮವನ್ನು ಆಯೋಜಿಸಿದ ಟ್ರಸ್ಟಿಗೆ ಅಭಿನಂದಿಸಿದ ಲೋಬೊ ಅವರು, ಕ್ರಿಸ್ಮಸ್ ಹಬ್ಬ ಜಗತ್ತಿನ ಎಲ್ಲಾ ಜನರು ಜಾತಿ ಮತ ಬೇಧವಿಲ್ಲದೆ ಆಚರಿಸುವುದಾಗಿದೆ. ಈ ಹಬ್ಬದ ಸಂದರ್ಭದಲ್ಲಿ ನಮ್ಮ ಸಂತೋಷವನ್ನು ಇತರರೊಂದಿಗೆ ಆಚರಸಿ ಅವರುಗಳ ಮೊಗದಲ್ಲಿ ಸಂತೋಷ ಅರಳಿಸುವುದರೊಂದಿಗೆ ಅವರ ನೆರವಿಗೆ ಬರುವುದು ವಾಡಿಕೆ. ಅದರಂತೆ ಪರಿವರ್ತನಾ ಟ್ರಸ್ಟ್ ಒಂದು ಉತ್ತಮ ಸಂಸ್ಕಾರವನ್ನು ಸಮಾಜಕ್ಕೆ ತೋರಿಸಿದ್ದು, ಸಂಸ್ಥಾಪಕಿ ವಾಯ್ಲೆಟ್ ಪಿರೇರಾ ಹಾಗೂ ಅವರ ತಂಡ ಮಂಗಳ ಮುಖಿಯರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಪಡುತ್ತಿರುವ ಶ್ರಮ ನಿಜಕ್ಕೂ ಶ್ಲಾಘನೀಯವಾದುದು.

ಮಾನವರಾಗಿ ಅವರು ಕೂಡ ನಮ್ಮಂತೆ ಬಾಳಲು ಪ್ರಯತ್ನಿಸುತ್ತಿರುವಾಗ ಅವರನ್ನು ತಿರಸ್ಕರಿಸದೆ ಅವರನ್ನು ಸ್ವೀಕರಿಸುವ ಮಾನವೀಯ ಗುಣ ಪ್ರತಿಯೊಬ್ಬರಲ್ಲಿ ಬರಬೇಕು. ಟ್ರಸ್ಟ್ ಮಂಗಳಮುಖಿಯರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಅತ್ಯುತ್ತಮವಾಗಿ ಶ್ರಮಿಸುತ್ತಿದ್ದು ತನ್ನಿಂದ ಅಗತ್ಯವಿರುವ ಎಲ್ಲಾ ರೀತಿಯ ಸಹಕಾರ ಹಾಗೂ ಸರಕಾರದ ಸಹಕಾರ ನೀಡಲು ಸದಾಬದ್ದವಿರುವುದಾಗಿ ಹೇಳಿದರು.

Mangala Mukhiಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಮಂಗಳೂರು ಉತ್ತರ ಶಾಸಕರಾದ ಮೊಯ್ದಿನ್ ಬಾವಾ ಅವರು ಮಂಗಳ ಮುಖಿಯರೊಂದಿಗೆ ಕ್ರಿಸ್ಮಸ್ ಆಚರಿಸುವುದರೊಂದಿಗೆ ಒಂದು ಆರ್ಥಪೂರ್ಣವಾದ ಕಾರ್ಯಕ್ರಮವನ್ನು ಟ್ರಸ್ಟ್ ಹಮ್ಮಿಕೊಂಡಿದ್ದು ಸಮಾಜದಲ್ಲಿ ನೊಂದವರಿಗೆ ನ್ಯಾಯ ನೀಡುವ ಉತ್ತಮ ಕಾರ್ಯ ಇದಾಗಿದೆ. ಹುಟ್ಟು ಆಕಸ್ಮಿಕ ಸಾವು ಖಚಿತ ಎಂಬಂತೆ ಹುಟ್ಟಿದ ಮೇಲೆ ಯಾವುದೋ ನ್ಯೂನತೆಗಳಿಂದಾಗಿ ಸಮಾಜದಲ್ಲಿ ಕೆಲವೊಂದು ವ್ಯಕ್ತಿಗಳು ತಿರಸ್ಕರಿಸಲ್ಪಡುತ್ತಾರೆ. ಅಂತಹ ವ್ಯಕ್ತಿಗಳನ್ನು ಮೇಲೆತ್ತುವ ಕಾರ್ಯದಲ್ಲಿ ಪ್ರತಿಯೊಬ್ಬರು ಕೈಜೋಡಿಸಿದಾಗ ನಿಜವಾದ ಜೀವನದ ಸಾರ್ಥಕತೆ ಸಾಧ್ಯವಿದೆ. ಮಂಗಳಮುಖಿಯರ ಅಭಿವೃದ್ದಿಗಾಗಿ ತಮ್ಮ ಸಿದ್ದರಾಮಯ್ಯ ನೇತ್ವತ್ವದ ಸರಕಾರ ಈಗಾಗಲೇ ಮೈತ್ರಿ ಯೋಜನೆಯನ್ನು ಜಾರಿಗೆ ಗೊಳಿಸಿದ್ದು, ಮುಂದಿನ ದಿನಗಳಲ್ಲಿ ಮಂಗಳಮುಖಿಯರ ಅಭಿವೃದ್ದಿಗೆ ತನ್ನಿಂದ ಬೇಕಾಗುವ ಎಲ್ಲಾ ಸಹಾಯ ನೀಡಲು ಸಿದ್ದ. ಯಾವುದೇ ಸಮಯದಲ್ಲಿ ಮಂಗಳಮುಖಿಯರಿಗೆ ಸಮಾಜದಲ್ಲಿ ತೊಂದರೆಗಳು ಉಂಟಾದಲ್ಲಿ ಅವರಿಗೆ ನ್ಯಾಯ ಒದಗಿಸಲು ತಾನು ಸದಾ ಸಿದ್ದವಿರುವುದಾಗಿ ಹೇಳಿದರು.

ಸಾಂಸ್ಕೃತಿಕ ಕಾರ್ಯಕ್ರಮ ವೇಳೆ ಬಂದು ಸೇರಿದ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಅವರು ಮಂಗಳಮುಖಿಯರ ಅಭಿವೃದ್ದಿಗೆ ಜಿಲ್ಲಾಡಳಿತ ಹಾಗೂ ರಾಜ್ಯ ಸರಕಾರ ಸದಾ ಸಿದ್ದವಿದ್ದು, ಮಂಗಳ ಮುಖಿಯರಿಗೆ ಅಗತ್ಯವಿರುವ ನಿವೇಶನದ ಸಮಸ್ಯೆಯನ್ನು ತಾನು ಮನಗಂಡಿದ್ದು ಹಿಂದಿನ ಜಿಲ್ಲಾಧಿಕಾರಿ ಈ ಕುರಿತು ಪಟ್ಟಿಯನ್ನು ಕೂಡ ಸಿದ್ದಪಡಿಸಿದ್ದರು ಕಾರಣಾಂತರದಿಂದ ಅದು ಕಾರ್ಯರೂಪಕ್ಕೆ ಬಂದಿರಲಿಲ್ಲ. ಆದರೆ ಮತ್ತೆ ಪುನಃ ನಾನೇ ಸ್ವತಃ ಹೊಸ ಜಿಲ್ಲಾಧಿಕಾರಿಯವರ ಬಳಿ ಚರ್ಚಿಸಿ ಸಮಸ್ಯೆಯನ್ನು ಪರಿಹರಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಸುವುದಾಗಿ ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಮಾಜಿ ಪ್ರಾಂಶುಪಾಲರಾದ ಡಾ|ಜಸಿಂತಾ ಡಿಸೋಜಾ ಮಾತನಾಡಿ ಮಂಗಳಮುಖಿಯರೊಂದಿಗೆ ಹಮ್ಮಿಕೊಂಡಿರುವ ಕ್ರಿಸ್ಮಸ್ ಆಚರಣೆ ನಿಜಕ್ಕೂ ಅರ್ಥಪೂರ್ಣವಾಗಿದ್ದು, ಯೇಸು ಸ್ವಾಮಿಯ ನಿಜವಾದ ಸಂದೇಶವನ್ನು ಸಾರ್ಥಕಗೊಳಿಸುವ ಪ್ರಯತ್ನ ಇದಾಗಿದೆ ಎಂದರು.

ಕಾರ್ಯಕ್ರಮ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದ ಟ್ರಿಸ್ಟಿನ ಮ್ಯಾನೇಜಿಂಗ್ ಟ್ರಸ್ಟಿ ಹಾಗೂ ಸಂಸ್ಥಾಪಕಿ ವಾಯ್ಲೆಟ್ ಪಿರೇರಾ ಅವರು ಕಾರ್ಯಕ್ರಮದ ಉದ್ದೇಶವನ್ನು ವಿವರಿಸಿ ಮಂಗಳಮುಖಿಯರನ್ನು ಸಮಾಜವು ತಿರಸ್ಕರಿಸದೆ ಗೌರವಯುತವಾಗಿ ಕಾಣುವುದರೊಂದಿಗೆ ಅವರಿಗೂ ಕೂಡ ನೆಮ್ಮದಿಯ ಜೀವನ ನೀಡುವತ್ತಾ ಸಮಾಜ ಮುಂದೆ ಬರಬೇಕು ಎಂದರು,

ಮಂಗಳಮುಖಿಯರಿಗೆ ಅಗತ್ಯವಾಗಿರುವ ಪಡಿತರ ಚೀಟಿ, ಆಧಾರ್ ಕಾರ್ಡ್, ಲಿಂಗತ್ವ ಪ್ರಮಾಣಪತ್ರ, ಮತದಾರರ ಚೀಟಿ, ಮನೆ ನಿವೇಶನ ಸಂಬಂಧಿತ ಅಗತ್ಯತೆಗಳ ಕುರಿತಾದ ಮನವಿಯನ್ನು ಟ್ರಿಸ್ಟಿನ ಮ್ಯಾನೇಜಿಂಗ್ ಟ್ರಸ್ಟಿ ಹಾಗೂ ಸಂಸ್ಥಾಪಕಿ ವಾಯ್ಲೆಟ್ ಪಿರೇರಾ ಅವರು ಸಚಿವರು ಮತ್ತು ಶಾಸಕರುಗಳಿಗೆ ಹಸ್ತಾಂತರಿಸಿದರು.

ಇದೇ ಸಂದರ್ಭದಲ್ಲಿ ಸಾಧನೆ ತೋರಿದ ಟ್ರಸ್ಟಿನ ಮಂಗಳಮುಖಿ ಸಾಧಕರಾದ ಸಂಜನಾ, ಶ್ರೀನಿಧಿ ಮತ್ತು ಚಂದ್ರಕಲಾ ಅವರನ್ನು ಗುರುತಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ರೋಶನಿ ನಿಲಯದ ವಿದ್ಯಾರ್ಥಿಗಳು ಮತ್ತು ಮಂಗಳಮುಖಿಯರಿಂದ ಸಾಂಸ್ಕøತಿಕ ಕಾರ್ಯಕ್ರಮಗಳು ಕೂಡ ಜರುಗಿದವು.

ಕಾರ್ಯಕ್ರಮದಲ್ಲಿ ಗ್ಲೋಬ್ ಟ್ರಾವೆಲ್ಸ್ ಇದರ ವಿಲ್ಯಮ್ ಡಿಸೋಜಾ, ಟ್ರಸ್ಟಿ ಆಶಾ ನಾಯಕ್, ಕಾಲೇಜಿನ ವಿದ್ಯಾರ್ಥಿ ಸಂಯೋಜಕರಾದ ಅಜ್ಮೀರಾ ಶಹಜೀನ್ ಉಪಸ್ಥಿತರಿದ್ದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English