ಕಾಸರಗೋಡು ಕರ್ನಾಟಕಕ್ಕೆ ಸೇರಬೇಕು – ಮುರುಳೀಧರ ಬಳ್ಳಕ್ಕುರಾಯ

8:40 PM, Sunday, December 3rd, 2017
Share
1 Star2 Stars3 Stars4 Stars5 Stars
(No Ratings Yet)
Loading...

Alvas ಮೂಡಬಿದಿರೆ  : ಕಾಸರಗೋಡಿನಲ್ಲಿ ಕನ್ನಡ, ತುಳು, ಮಲೆಯಾಳಂ ಸೇರಿದಂತೆ ಬೇರೆ ಬೇರೆ ಭಾಷೆಯನ್ನಾಡುವ ಜನರಿದ್ದರೂ ಅವರ ಕರುಳಬಳ್ಳಿ ಕರ್ನಾಟಕವೇ ಆಗಿದೆ. ಅಪ್ಪಟ ಕನ್ನಡ ಪ್ರದೇಶವಾದ ಕಾಸರಗೋಡು ಕರ್ನಾಟಕಕ್ಕೆ ಸೇರಬೇಕು ಎಂದು ಮಂಗಳೂರು ಎಸ್.ಡಿ.ಎಂ ಕಾನೂನು ಮಹಾವಿದ್ಯಾಲಯದ ಉಪನ್ಯಾಸಕ ಮುರುಳೀಧರ ಬಳ್ಳಕ್ಕುರಾಯ ಕಾಸರಗೋಡು ಹೇಳಿದರು.

ಆಳ್ವಾಸ್ ನುಡಿಸಿರಿ-2017 ರ ಪ್ರಯುಕ್ತ ರತ್ನಾಕರವರ್ಣಿ ವೇದಿಕೆಯಲ್ಲಿ ಆಯೋಜಿಸಿದ್ದ ವಿಶೇಷೋಪನ್ಯಾಸ ಕಾರ್ಯಕ್ರಮದಲ್ಲಿ ಕಾಸರಗೋಡಿನ ಕನ್ನಡ ಅಲ್ಪಸಂಖ್ಯಾತರ ಸಮಸ್ಯೆಗಳ ಬಗ್ಗೆ ಮಾತನಾಡಿದರು.

1956 ರಲ್ಲಿ ಭಾಷಾವಾರು ಪ್ರಾಂತ್ಯಗಳ ವಿಂಗಡಣೆಯಾದಾಗ ಕರ್ನಾಟಕದಲ್ಲಿದ್ದ ಕಾಸರಗೋಡು ಕೇರಳಕ್ಕೆ ಸೇರಿತು. ಅಲ್ಲಿಂದ ಶುರುವಾದ ಕಾಸರಗೋಡಿನ ಸಮಸ್ಯೆ ಇಂದಿಗೂ ನಿಂತಿಲ್ಲ. ಕಾಸರಗೋಡು ಕರ್ನಾಟಕಕ್ಕೆ ಸೇರಬೇಕು ಎಂಬ ಹೋರಾಟದ ಕೂಗಿಗೆ ಇನ್ನೂ ಪರಿಹಾರ ಸಿಕ್ಕಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.
ಹೆಚ್ಚಾಗಿ ನಮ್ಮ ಸಮಸ್ಯೆಯನ್ನು ವಲಸಿಗರ ಸಮಸ್ಯೆಯ ಜೊತೆ ಸಮೀಕರಿಸುತ್ತಾರೆ. ಆದ್ರೆ ವಲಸಿಗರು ಉದ್ಯೋಗವನ್ನರಸಿಕೊಂಡು ಬೇರೆ ಪ್ರದೇಶಗಳಿಗೆ ಬರುತ್ತಾರೆ. ಅವರ ಆಯ್ಕೆಯ ಪ್ರದೇಶದ ಪ್ರಾದೇಶಿಕ ಭಾಷೆಯ ಜೊತೆ ಅವರಿಗೆ ಸಮಸ್ಯೆ ಇದೆ ಎಂದಾದರೆ ಅವರ ಸಮಸ್ಯೆಯ ಸ್ವರೂಪವೇ ಬೇರೆ. ಆದ್ರೆ ಕರ್ನಾಟಕದಲ್ಲಿ ಹುಟ್ಟಿ ಬೆಳೆದು ಈಗ ಬೇರೊಂದು ಸಂಸ್ಕೃತಿಯನ್ನು ಅಳವಡಿಸಿಕೊಳ್ಳಬೇಕಾದ ಅನಿವಾರ್ಯತೆ ಇರುವ ನಮ್ಮ ಸಮಸ್ಯೆಯೇ ಬೇರೆ. ಇದನ್ನು ಸಮೀಕರಿಸಿಕೊಂಡು ನಮ್ಮ ಸಮಸ್ಯೆಯನ್ನು ಹಗುರವಾಗಿ ಕಾಣುತ್ತಿರುವುದು ದುರ್ವಿಧಿ ಎಂದರು.

ರಾಜ್ಯವಾರು ವಿಂಗಡಣೆಯ ನಂತರ ಹೋರಾಟಗಳು ಹೆಚ್ಚಾದಾಗ ಕಾಸರಗೋಡು ಗಡಿ ಪ್ರದೇಶದ ಸಮಸ್ಯೆಯ ನಿವಾರಣೆಗಾಗಿ ಮಹಾಜನ್ ಆಯೋಗ ನೇಮಕವಾಯಿತು. ಗಡಿಗಳ ವಿಂಗಡಣೆಯಲ್ಲಿ ಆದ ತಪ್ಪುಗಳನ್ನು ಕೂಲಂಕುಷವಾಗಿ ಗಮನಿಸಿ, ಚರ್ಚಿಸಿ, ಸಾಕ್ಷಿ ಪುರಾವೆಗಳನ್ನು ಸಂಗ್ರಹಿಸಿ ಕಾಸರಗೋಡು ಕರ್ನಾಟಕಕ್ಕೆ ಸೇರಬೇಕು ಎಂದು ಸಂಸತ್ತಿನಲ್ಲಿ ವರದಿಯನ್ನು ಮಂಡಿಸಿತು. ಆದರೆ ವರದಿಯು ಅನುಷ್ಠಾನಕ್ಕೆ ಬರಲಿಲ್ಲ. ಅನುಷ್ಠಾನಕ್ಕೆ ಬರದ ಈ ರೀತಿಯ ಆಯೋಗಗಳ ರಚನೆಯೇಕೆ? ಎಂದು ಪ್ರಶ್ನಿಸಿದರು.

ಕಾಸರಗೋಡು ಕರ್ನಾಟಕಕ್ಕೆ ಸೇರಬೇಕಾದರೆ, ಅಲ್ಲಿನ ಕನ್ನಡಿಗರು ಕನ್ನಡಿಗರಾಗಿಯೇ ಉಳಿಯಬೇಕಾದರೆ ರಾಜಕೀಯ ಪ್ರತಿನಿಧಿಗಳು, ಸಾಹಿತಿಗಳು, ಕರ್ನಾಟಕ ಸರ್ಕಾರ ನಮ್ಮ ಜೊತೆ ಇರಬೇಕು. ನಮ್ಮನ್ನು ಪ್ರತ್ಯೇಕವಾಗಿ ಕಾಣದೆ ಇತರ ಕನ್ನಡಿಗರಂತೆ ನೋಡಬೇಕಿದೆ. ನಾವು ಭೌಗೋಳಿಕವಾಗಿ ಕೇರಳ ರಾಜ್ಯಕ್ಕೆ ಸೇರಿದರೂ, ಸಾಂಸ್ಕೃತಿಕವಾಗಿ ನಾವೆಲ್ಲ ಕನ್ನಡಿಗರು ಎಂದು ಭಾವನಾತ್ಮಕವಾಗಿ ಹೇಳಿದರು.

ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿ ೭೧ ವರ್ಷಗಳಾದರೂ ನಮಗಿನ್ನ್ನೂ ಸ್ವತಂತ್ರವಾಗಿ ಬದುಕುವ ಹಕ್ಕು ಸಿಕ್ಕಿಲ್ಲ. ಹುಟ್ಟು ಕನ್ನಡಿಗರಾದರೂ ನಾವು ಪರಕೀಯರಂತೆ ಬಾಳುತ್ತಿದ್ದೇವೆ. ಕೇರಳ ಸರ್ಕಾರದ ದಬ್ಬಾಳಿಕೆಗೆ ಒಳಗಾಗಿದ್ದೇವೆ. ಕಾಸರಗೋಡಿನ ಕನ್ನಡ ಭಾಷಾ ಅಲ್ಪಸಂಖ್ಯಾತರಿಗೆ ಸಂವಿಧಾನಾತ್ಮಕವಾಗಿ ನೀಡಿದ ಶೈಕ್ಷಣಿಕ, ಭಾಷಿಕ ಹಾಗೂ ಔದ್ಯೋಗಿಕ ಸವಲತ್ತುಗಳನ್ನು ಕೇರಳ ಸರ್ಕಾರ ಅನೇಕ ರಾಜಕೀಯ ತಂತ್ರಗಳನ್ನು ಉಪಯೋಗಿಸುತ್ತಾ ಹತ್ತಿಕ್ಕುತ್ತಾ ಬಂದಿದೆ ಎಂದರು.

ಕೇರಳದಲ್ಲಿ ಕನ್ನಡ ಶಾಲೆಗಳು ನಡೆಯುತ್ತಿದ್ದರೂ ಕೇರಳ ಸರ್ಕಾರ ಕನ್ನಡ ವಿದ್ಯಾರ್ಥಿಗಳ ಬಗ್ಗೆ ಮಲತಾಯಿ ಧೋರಣೆಯನ್ನು ತೋರುತ್ತಿದೆ. ಅಂಗನವಾಡಿಯಲ್ಲಿ ಶಿಕ್ಷಕರಿಗೆ ಮಲೆಯಾಳಂ ಭಾಷೆಯ ಕೈಪಿಡಿಯನ್ನು ನೀಡುತ್ತಿದೆ. ಈ ಬಗ್ಗೆ ಪ್ರಶ್ನಿಸಿದರೆ ಜಾಣ ಕಿವುಡುತನ ತೋರುತ್ತದೆ. ಪ್ರಾಥಮಿಕ ಶಾಲೆಗಳಲ್ಲಿ ಶಿಕ್ಷಕರನ್ನು ನೇಮಿಸುವಾಗ ಕನ್ನಡ ಅರಿಯದ ಶಿಕ್ಷರನ್ನು ನೇಮಿಸುತ್ತಿದೆ.ಇತ್ತೀಚೆಗೆ ಕೇರಳ ಸರ್ಕಾರ ಸುಗ್ರೀವಾಜ್ಞೆಯೊಂದನ್ನು ಹೊರಡಿಸಿತು. ಇದರ ಪ್ರಕಾರ ಕೇರಳದ ಎಲ್ಲಾ ಶಾಲೆಗಳಲ್ಲೂ ಒಂದರಿಂದ ಹತ್ತನೇವರೆಗೂ ಮಲೆಯಾಳಂ ಅನ್ನು ಭಾಷಾ ವಿಷಯವಾಗಿ ಕಲಿಯುವುದು ಅನಿವಾರ್ಯ. ಇದು ಕಾಸರಗೋಡಿನ ಕನ್ನಡ ವಿದ್ಯಾರ್ಥಿಗಳಿಗೆ ಹೊರೆಯಾಗಿ ಪರಿಣಮಿಸಿದೆ. ಇದು ಕನ್ನಡವನ್ನು ನಾಶ ಮಾಡುವ ಹುನ್ನಾರವಲ್ಲದೆ ಮತ್ತೇನು ಅಲ್ಲ ಎಂದು ಖಂಡಿಸಿದರು.

ಉದ್ಯೋಗ ಕ್ಷೇತ್ರದಲ್ಲೂ ಕನ್ನಡಿಗರ ಬಗ್ಗೆ ನಿರ್ಲಕ್ಷ್ಯ ಧೋರಣೆ ಇದೆ. ಕನ್ನಡಿಗ ಅಭ್ಯರ್ಥಿಗಳಿಗೆ ಉದ್ಯೋಗಾವಕಾಶಗಳಲ್ಲಿ ತಾರತಮ್ಯ ಎಗ್ಗಿಲ್ಲದೆ ನಡೆಯುತ್ತದೆ. ಉನ್ನತ ಉದ್ಯೋಗಗಳು ಕನ್ನಡಿಗರ ಪಾಲಾಗದಂತೆ ಕೇರಳ ಸರ್ಕಾರ ಮುತುವರ್ಜಿ ವಹಿಸುತ್ತಿರುವುದು ವಿಷಾದನೀಯ. ನಮ್ಮ ಸಮಸ್ಯೆಗಳಿಗೆ ಕರ್ನಾಟಕ ಸ್ಪಂದಿಸಬೇಕಿದೆ. ನಮ್ಮ ಹೋರಾಟಗಳಿಗೆ ನಮ್ಮ ಜೊತೆ ಸರ್ಕಾರ ಧ್ವನಿಗೂಡಿಸಬೇಕು. ಕರ್ನಾಟಕದ ಪ್ರತಿನಿಧಿಗಳು ಸಂಸತ್ತಿನಲ್ಲಿ ಕಾಸರಗೋಡಿನ ಪರವಾಗಿ ವಕಾಲತ್ತು ವಹಿಸಬೇಕಿದೆ. ಆಗಮಾತ್ರ ನಮ್ಮ ಹೋರಾಟಕ್ಕೆ ಜಯಸಿಗುತ್ತದೆ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಸಮ್ಮೇಳನಾಧ್ಯಕ್ಷ್ಯ ಡಾ. ನಾಗತಿಹಳ್ಳಿ ಚಂದ್ರಶೇಖರ್, ಸ್ವಾಗತ ನಮಿತಿ ಉಪಾಧ್ಯಧ್ಯಕ್ಷ ಜಯಪ್ರಕಾಶ್ ಮಾವಿನಕುಳಿ, ಡಾ. ನಾ. ದಾಮೋದರ ಶೆಟ್ಟಿ ಉಪಸ್ಥಿತರಿದ್ದರು.

ವರದಿ : ಪವಿತ್ರ ದೇರ್ಲಕ್ಕಿ

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English