ವಿಜಯಾ ಬ್ಯಾಂಕ್‌ ನಿಂದ ಮೀನುಗಾರಿಕಾ ಮಹಿಳೆಯರಿಗೆ ಸಾಲ ಪತ್ರ ವಿತರಣೆ

12:25 PM, Sunday, September 4th, 2011
Share
1 Star2 Stars3 Stars4 Stars5 Stars
(3 rating, 1 votes)
Loading...

Vijaya Bank/ವಿಜಯಾ ಬ್ಯಾಂಕ್‌

ಮಂಗಳೂರು: ವಿಜಯಾ ಬ್ಯಾಂಕ್‌ ವತಿಯಿಂದ ಸರಕಾರದ ನೂತನ ಯೋಜನೆಯಿಂದ ಮೀನುಗಾರಿಕಾ ಮಹಿಳೆಯರಿಗೆ ಜಂಟಿ ಬಾಧ್ಯತಾ ಗುಂಪು ಯೋಜನೆಯನ್ವಯ ಸಾಲ ಮಂಜೂರಾತಿ ಪತ್ರವನ್ನು ಶನಿವಾರ ನಗರದ ವುಡ್ ಲ್ಯಾಂಡ್ಸ್ ಹೋಟೇಲಿನಲ್ಲಿ ವಿತರಿಸಲಾಯಿತು.

ಮೀನುಗಾರ ಮಹಿಳೆಯರನ್ನು ಆರ್ಥಿಕ ಸದೃಢರಾಗಿಸುವ ಉದ್ದೇಶದಿಂದ ರಾಜ್ಯ ಸರಕಾರ ವಿಜಯಾ ಬ್ಯಾಂಕ್‌ ಮೂಲಕ ಪ್ರತಿ ಗುಂಪಿಗೆ ತಲಾ 50 ಸಾವಿರ ರೂ. ಜಾಮೀನು ರಹಿತ ಸಾಲ ನೀಡುತ್ತಿದೆ. ಈ ಪೈಕಿ ಶೇ. 9ರಷ್ಟು ಸರಕಾರ ಸಬ್ಸಿಡಿ ನೀಡುತ್ತಿದೆ. ಮೀನು ಖರೀದಿ, ವ್ಯಾಪಾರ ಚಟುವಟಿಕೆಗಳಿಗೆ ಇದನ್ನು ಬಳಸಿಕೊಳ್ಳಬಹುದು ಎಂದು ಬ್ಯಾಂಕ್‌ನ ಅಧ್ಯಕ್ಷ ಎಚ್‌.ಎಸ್‌. ಉಪೇಂದ್ರ ಕಾಮತ್‌ ತಿಳಿಸಿದರು.

ವಿಜಯಾ ಬ್ಯಾಂಕ್‌ ಇದುವರೆಗೆ ಮೀನುಗಾರ ಮಹಿಳೆಯರ 169 ಗುಂಪುಗಳ ಮೂಲಕ 1,700 ಜನರಿಗೆ ಶೇ.3 ರ ಬಡ್ಡಿ ದರದಲ್ಲಿ ಒಟ್ಟು 8.2 ಕೋ. ರೂ. ಸಾಲ ವಿತರಿಸಿದೆ ಎಂದು ಅವರು ತಿಳಿಸಿದರು.

ಬ್ಯಾಂಕ್‌ ಮತ್ತು ಸಾಲಗಾರರ ನಡುವಿನ ಪರಸ್ಪರ ನಂಬಿಕೆ ಮತ್ತು ಹೊಂದಾಣಿಕೆ ಸಾಲ ಪಡೆಯಲು ಇರುವ ಮುಖ್ಯ ಮಾನದಂಡ. ಲೇವಾದೇವಿಗಾರರಿಂದ ಮುಕ್ತಿ ಪಡೆದು ವ್ಯವಹಾರ ನಡೆಸಲು ಈ ಸಾಲ ಪೂರಕವಾಗಲಿದೆ ಎಂದು ಅವರು ಹೇಳಿದರು.

ಮೀನುಗಾರಿಕಾ ನಿಗಮದ ಮಾಜಿ ಅಧ್ಯಕ್ಷ ರಾಮಚಂದ್ರ ಬೈಕಂಪಾಡಿ ಅವರು, ಮೀನುಗಾರ ಮಹಿಳೆಯರ ಶ್ರೇಯೋಭಿವೃದ್ಧಿಗೆ ಸರಕಾರ ಹಮ್ಮಿಕೊಂಡ ಅತ್ಯುತ್ತಮ ಸಾಲ ಯೋಜನೆ ಇದಾಗಿದ್ದು, ಇದನ್ನು ಸದ್ಭಳಕೆ ಮಾಡಿಕೊಂಡು ಸಕಾಲಕ್ಕೆ ಬ್ಯಾಂಕ್‌ಗೆ ಮರುಪಾವತಿ ಮಾಡುವ ಹೊಣೆ ಸಾಲಗಾರರದ್ದಾಗಿದೆ ಎಂದರು.

ಈ ಸಂದರ್ಭ ಮೀನುಗಾರ ಮಹಿಳೆಯರು ಎಚ್‌.ಎಸ್‌. ಉಪೇಂದ್ರ ಕಾಮತ್‌ ಅವರನ್ನು ಸಮ್ಮಾನಿಸಿದರು. ಬ್ಯಾಂಕಿನ ಪ್ರಾದೇಶಿಕ ಕಚೇರಿಯ ಉಪಮಹಾಪ್ರಬಂಧಕ ಸುಧಾಕರ ಶೆಟ್ಟಿ ಸ್ವಾಗತಿಸಿದರು. ದೀಪಕ್‌ ಎಂ. ವಂದಿಸಿದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English