ಮಂಗಳೂರು: ಒಬ್ಬ ಕಾರ್ಮಿಕನಾಗಿ ಜನರ ಮುಂದೆ ಹೋಗುತ್ತಿದ್ದೇನೆ. ನನ್ನ ಯೋಚನೆಗಳನ್ನು ಮುಂದಿಟ್ಟು ಅವರೊಂದಿಗೆ ಮಾತನಾಡುತ್ತಿದ್ದೇನೆ. ಸಮಾಜದಲ್ಲಿನ ಪ್ರಜ್ಞಾವಂತರು ಪಕ್ಷಕ್ಕೆ ಬನ್ನಿ ಎಂದು ಕೆಪಿಜೆಪಿ-ಪ್ರಜಾಕೀಯ ಪಕ್ಷ ದ ಸ್ಥಾಪಕ ಉಪೇಂದ್ರ ಕರೆ ನೀಡಿದರು.
ಮಂಗಳವಾರ ಮಂಗಳೂರಿನ ಪತ್ರಿಕಾ ಭವನದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಉಪೇಂದ್ರ ರಾಜಕೀಯಕ್ಕೆ ಬೇಕಾಗಿರುವುದು ನಾಯಕರು, ಸೇವಕರಲ್ಲ. ಆದರೆ, ಇಂದು ವ್ಯವಸ್ಥೆ ಬದಲಾಗಿದೆ. ಗೆದ್ದ ಮೇಲೆ ಜನನಾಯಕರನ್ನು ಹುಡುಕುವುದೇ ಕಷ್ಟವಾಗಿದೆ. ಆದರೆ, ಪ್ರಜಾಕೀಯದಲ್ಲಿ ಹಾಗಲ್ಲ. ಚುನಾವಣೆಗೆ ದುಡ್ಡು ಖರ್ಚು ಮಾಡುವುದಿಲ್ಲ. ಪಕ್ಷ ಬಲವರ್ಧನೆಗೆ ದುಡ್ಡು ಸಂಗ್ರಹವಿಲ್ಲ. ಬೆಂಗಾವಲಿಗರನ್ನು ಇಟ್ಟುಕೊಂಡು ಜೈಕಾರ ಹಾಕಿ ಜನಬೆಂಬಲದ ಪ್ರದರ್ಶನವಿಲ್ಲ. ಇದೆಲ್ಲ ನಿಜವಲ್ಲ; ಬರೀ ಭ್ರಮೆ. ಪಕ್ಷದ ಮೇಲೆ ನಂಬಿಕೆ ಇಟ್ಟು ಬರುವವರಿಗೆ, ಕೆಲಸ ಮಾಡುವವರಿಗೆ, ವ್ಯವಸ್ಥೆಯನ್ನು ಬದಲಾಯಿಸುವ ಮನಸುಗಳಿಗೆ, ನಾಡಿನ ನಿಜವಾದ ಅಭಿವೃದ್ಧಿಯನ್ನು ಬಯಸುವವರಿಗೆ ಪ್ರಜಾಕೀಯದ ಬಾಗಿಲು ಸದಾ ತೆರೆದಿರುತ್ತದೆ ಎಂದರು.
ಎಲ್ಲಿ ಸತ್ಯ ಇರುತ್ತದೋ ಅಲ್ಲಿ ಧರ್ಮ ಇರುತ್ತದೆ. ಸತ್ಯ ಇದ್ದಲ್ಲಿ ಧರ್ಮದ ಅಗತ್ಯ ಇರುವುದಿಲ್ಲ. ಅನ್ಯಾಯವನ್ನು ಪ್ರತಿಭಟಿಸುವ ಮನಸ್ಥಿತಿ ನಮ್ಮಲ್ಲಿ ಇಲ್ಲದಂತಾಗಿದೆ. ಶಿಕ್ಷಣ, ವೈದ್ಯಕೀಯ ವ್ಯವಸ್ಥೆ ಉಚಿತವಾಗಿ ಸಿಕ್ಕಿದರೆ ಯಾರೂ ಭೃಷ್ಟಾಚಾರಿಗಳು ಆಗುವುದಿಲ್ಲ . ಸತ್ಯಕ್ಕೆ ಧರ್ಮದ ಅಗತ್ಯವಿಲ್ಲ. ಜಾತಿ, ಧರ್ಮ ನಮ್ಮ ಮನೆಗಳಲ್ಲಿ, ಮನಗಳಲ್ಲಿರುಬೇಕು. ಅದು ಬೀದಿಗೆ ಬರಬಾರದು. ಬ್ರಿಟಿಷರು ಹೇಳಿಕೊಟ್ಟ ವಿಭಜಿಸಿ ಆಳುವ ರಾಜಕೀಯ ಒಳ್ಳೆಯದಲ್ಲ. ನಮ್ಮ ಸಮಸ್ಯೆಗಳ ಪರಿಹಾರಕ್ಕೆ ಒಗ್ಗೂಡಿ ಕೆಲಸ ಮಾಡಬೇಕು. ಆದರೆ, ಇವತ್ತಿನ ದಿನ ನಾವು ಜಾತಿ, ಹಣದ ಮೂಲಕ ಮಾಡುವುದೇ ನಿಜವಾದ ರಾಜಕೀಯವೆಂದು ನಂಬಿಕೊಂಡು ಬದುಕುತ್ತಿದ್ದೇವೆ. ಜನರಿಗಾಗಿರುವ ಶೇ. 100ರಷ್ಟು ಹಣ ಅವರ ಅಭ್ಯುದಯಕ್ಕೆ ಲಭಿಸಬೇಕು. ಶಿಕ್ಷಣ ಹಾಗೂ ವೈದ್ಯಕೀಯ ಸವಲತ್ತುಗಳು ಉಚಿತವಾಗಿ ಸಿಕ್ಕರೆ ಯಾರೂ ಭ್ರಷ್ಟರಾಗುವುದಿಲ್ಲ ಎಂದು ಅಭಿಪ್ರಾಯಪಟ್ಟರು.
ಇಂದು ಒಬ್ಬೊಬ್ಬರದ್ದು ಏಕಾಂಗಿ ಹೋರಾಟ. ಇದೀಗ ನಾನು ಏಕಾಂಗಿಯಾಗಿಯೇ ಇಲ್ಲಿ ಬಂದು ಹೋರಾಟ ಮಾಡುತ್ತಿದ್ದೇನೆ. ನನ್ನಂಥ ಆನೇಕ ಮಂದಿ ಹೀಗೆಯೇ ಕನಸು ಕಾಣುತ್ತಿದ್ದಾರೆ. ಅವರೆಲ್ಲರೂ ಒಟ್ಟಿಗೆ ಸೇರಿದರೆ ಬದಲಾವಣೆ ಕಾಣಲು ಸಾಧ್ಯ ಎಂದು ನಂಬಿದ್ದೇನೆ ಎಂದರು.
ಈ ದೇಶದಲ್ಲಿ ಶೇ 80ರಷ್ಟು ಒಳ್ಳೆಯವರಿದ್ದಾರೆ. ಆ 80ರಷ್ಟು ಜನರ ಪ್ರತಿನಿಧಿಯಾಗಿ ನಾನು ಬಂದಿದ್ದೇನೆ. ಕೇವಲ ಶೇ. 20ರಷ್ಟು ಮಂದಿ ಮಾತ್ರ ಗಲಾಟೆ ಎಬ್ಬಿಸುತ್ತಾರೆ. ಆದರೆ, ಬಹುಜನರು ಮೌನದಿಂದ ಗಲಾಟೆ ಮಾಡುವವರೇ ಎಲ್ಲಾ ಕಡೆ ಇದ್ದಾರೆ ಅಂತ ಅಂದುಕೊಂಡಿದ್ದೇವೆ. ನಾನು ಶೇ. 80ರಷ್ಟು ಜನ ಮೌನ ಮುರಿಯಬೇಕು ಅಂತ ಅವರನ್ನು ಬಡಿದೆಬ್ಬಿಸುತ್ತಿದ್ದೇನೆ ಹೊರತು ಶೇ. 20ರಷ್ಟು ಜನರನ್ನಲ್ಲ ಎಂದರು.
ಪ್ರಪಂಚ ಸ್ಥಿರವಾಗಿಲ್ಲ. ಕೆಟ್ಟದ್ದು ಯಾವತ್ತೂ ಶಾಶ್ವತವಲ್ಲ. ಒಮ್ಮೆ ಒಳ್ಳೆಯತನ ಮೇಲಾದರೆ, ಮತ್ತೊಮ್ಮೆ ಕೆಟ್ಟತನದ ಕೈಮೇಲಾಗುತ್ತದೆ. ಹಾಗಂತ ನಾವು ಸುಮ್ಮನಿರಬಾರದು. ಭರವಸೆಯನ್ನು ಕಳೆದುಕೊಳ್ಳಬಾರದು. ನಾನು ಆತ್ಮತೃಪ್ತಿಗಾಗಿ ಇದನ್ನು ಮಾಡುತ್ತಿದ್ದೇನೆ. ಎಲ್ಲರೂ ಆತ್ಮತೃಪ್ತಿಗಾಗಿಯೇ ಬಾಳಬೇಕು. ತಪ್ಪನ್ನು ಒಪ್ಪಿಕೊಂಡು ತಲೆತಗ್ಗಿಸಿಕೊಂಡು ಬದುಕುವಂತಹ ಪರಿಸ್ಥಿತಿ ದೇಶದಲ್ಲಿ ಬರಬಾರದು ಎಂದರು.
ರಾಜ್ಯದಲ್ಲಿ ಜನರ ಮಧ್ಯೆ ಕೆಲಸ ಮಾಡುವ 224 ಜನ ಸಿಎಂ ನನಗೆ ಬೇಕಿದ್ದಾರೆ. ಅವರವರ ಕ್ಷೇತ್ರದಲ್ಲಿ ಅವರೇ ಮುಖ್ಯಮಂತ್ರಿಳಾಗಿ ಕೆಲಸ ನಿರ್ವಹಿಸಬೇಕು. ಅಲ್ಲಿನ ಸಮಸ್ಯೆಗಳನ್ನು ಬಗೆಹರಿಸುವ ಸಾಮರ್ಥ್ಯವಿರುವರಾಗಿರಬೇಕು. ನಿಜವಾಗಿಯೂ ‘ಕೆಪಿಜೆಪಿ-ಪ್ರಜಾಕೀಯ’ದ ಮೇಲೆ ನಂಬಿಕೆಯಿದ್ದರೆ ಬೆಂಬಲಿಸಿ. ಪಕ್ಷದ ಉದ್ದೇಶವನ್ನು ಜನರೇ ಪ್ರಚಾರ ಮಾಡಿಕೊಂಡು ಹೋಗಲಿ. ಪ್ರತಿಯೊಬ್ಬರ ಕೈಯಲ್ಲಿ ಸ್ಮಾರ್ಟ್ ಫೋನ್‌ಗಳಿವೆ, ಪತ್ರಿಕೆಗಳನ್ನು ಓದುವವರಿದ್ದಾರೆ, ಟಿವಿ ನೋಡುವವರಿದ್ದಾರೆ.
ನಟರಾದ ಶಿವರಾಜ್‌ಕುಮಾರ್, ಯಶ್ ಸೇರಿದಂತೆ ಹಲವು ನಟರು ಬೆಂಬಲಿಸಿದ್ದಾರೆ. ಮೈಸೂರು ರಾಜಕುಮಾರ ಯದುವೀರ್ ಕೂಡಾ ಇಂಥದ್ದೊಂದು ರಾಜಕೀಯ ಇಚ್ಛಾಶಕ್ತಿಯ ಅಗತ್ಯವಿದೆ ಎಂದಿದ್ದಾರೆಂದು ಅವರು ಈ ಸಂದರ್ಭ ನೆನಪಿಸಿಕೊಂಡರು.
ಕೆ.ಪಿ.ಜೆ.ಪಿ-ಪ್ರಜಾಕೀಯವನ್ನು ಬೆಂಬಲಿಸುವವರು, ಅಭಿಪ್ರಾಯಗಳನ್ನು ತಿಳಿಸುವವರು ಆ್ಯಂಡ್ರಾಯ್ಡ್ ಅಪ್ಲಿಕೇಶನ್ ‘ಪ್ರಜಾಕೀಯ’ವನ್ನು ಮೊಬೈಲ್‌ನಲ್ಲಿ ಡೌನ್ಲೋಡ್ ಮಾಡಿಕೊಳ್ಳಬಹುದು. ಫೇಸ್‌ಬುಕ್, ಟ್ವಿಟರ್, ಇನ್‌ಸ್ಟಾಗ್ರಾಂಗಳಲ್ಲೂ ಫಾಲೋ ಮಾಡಬಹುದು. ಹೆಚ್ಚಿನ ಮಾಹಿತಿಗಾಗಿ 9845396204/9845396804 ಸಂಪರ್ಕಿಸಬಹುದು.
Click this button or press Ctrl+G to toggle between Kannada and English