ಮಂಗಳೂರು: ಮಂಗಳೂರು ನಗರದ ಸಮಗ್ರ ಅಭಿವೃದ್ಧಿ ಪ್ರಶ್ನೆಯಲ್ಲಿ ದಶಕಗಳಿಂದಲೂ ಮಂಗಳೂರು ನಗರಪಾಲಿಕೆಗೆ ಸಿಪಿಐ(ಎಂ) ಪಕ್ಷವು ಪ್ರತಿಭಟನೆ, ಆಗ್ರಹ, ಪ್ರಸ್ತಾವಿಕೆಗಳನ್ನು ಕಾಲಕಾಲಕ್ಕೆ ಸಲ್ಲಿಸುತ್ತಾ ಬಂದಿದೆ. ಪಾಲಿಕೆ ಆಡಳಿತ ನಡೆಸುತ್ತಿರುವ ಪಕ್ಷಗಳು ಇವುಗಳನ್ನು ಕಡೆಗಣಿಸಿ, ಜನತೆಯ ಹಿತವನ್ನು ಅಲಕ್ಷಿಸಿದೆ. ಈ ನಿಟ್ಟಿನಲ್ಲಿ ಇಂದು ನಗರಪಾಲಿಕೆಯ ವೈಫಲ್ಯವನ್ನು ಮನವರಿಕೆ ಮಾಡಿ ಪರ್ಯಾಯಗಳನ್ನು ಮುಂದಿಡುವ ಸಿಪಿಐ(ಎಂ) ಪಕ್ಷದ ಆಗ್ರಹಗಳಿಗೆ ಜನತೆ ಬೆಂಬಲ ನೀಡಬೇಕಾಗಿದೆ ಎಂಬುದಾಗಿ ಸಿಪಿಐ(ಎಂ) ಪಕ್ಷದ ರಾಜ್ಯ ಕಾರ‍್ಯದರ್ಶಿ ಮಂಡಳಿ ಸದಸ್ಯರಾದ ಜೆ. ಬಾಲಕೃಷ್ಣ ಶೆಟ್ಟಿ ಹೇಳಿದರು.
ಮಂಗಳೂರು ಮಹಾನಗರ ಪಾಲಿಕೆ ಕಚೇರಿ ಎದುರು ಸಿಪಿಐ(ಎಂ) ಮಂಗಳೂರು ನಗರ ದಕ್ಷಿಣ ಸಮಿತಿ ನೇತೃತ್ವದಲ್ಲಿ ಏರ್ಪಡಿಸಿದ್ದ ’ಸೌಹಾರ್ದತೆಯಿಂದ ಅಭಿವೃದ್ಧಿಯೆಡೆಗೆ’ ಎಂಬ ಘೋಷಣೆಯಡಿಯಲ್ಲಿ ಹೊರಟ 4 ದಿನಗಳ ಪಾದಯಾತ್ರೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಹಿಂದಿನ ಬಿಜೆಪಿ ಆಡಳಿತದಲ್ಲೂ ಇಂದಿನ ಕಾಂಗ್ರೆಸ್ ಆಡಳಿತದಲ್ಲೂ ನಗರ ಪಾಲಿಕೆಯ ಸಮಗ್ರ ಅಭಿವೃದ್ಧಿಯ ಚಿಂತನೆ ಇರುವುದಿಲ್ಲ. ಕೇವಲ ಹತ್ತು ವರ್ಷಗಳ ಹಿಂದೆ ಎಡಿಬಿ ಸಾಲ ಪಡೆದು ನಡೆಸಿದ ಒಳಚರಂಡಿ ಕಾಮಗಾರಿಗಳನ್ನು ದುರಸ್ಥಿ ಮಾಡುವುದಕ್ಕಾಗಿ ಪಾಲಿಕೆ ಬೇರೊಂದು ಬೃಹತ್ ಸಾಲಕ್ಕೆ ಮುಂದಾಗಿರುವುದು ಇದಕ್ಕೆ ಒಂದು ಉದಾಹರಣೆಯಾಗಿದೆ.
ಮಂಗಳೂರು ನಗರದಲ್ಲಿ ನಿವೇಶನ ರಹಿತರು ಸಾವಿರಾರು ಸಂಖ್ಯೆಯಲ್ಲಿದ್ದು, ಅವರಿಗಾಗಿ ಒಂದು ಕಾರ್ಯಯೋಜನೆ ಪಾಲಿಕೆಯಲ್ಲಿರಲಿಲ್ಲ. ಸಿಪಿಐ(ಎಂ) ಪಕ್ಷ ನಿವೇಶನ ರಹಿತರನ್ನು ಸಂಘಟಿಸಿ ಹಲವಾರು ಬಾರಿ ಹೋರಾಟ ಮಾಡಿದ ಫಲವಾಗಿ, ನಿವೇಶನಕ್ಕಾಗಿ ಪಾಲಿಕೆ ಜಮೀನು ಕಾಯ್ದಿರಿಸಬೇಕಾಯಿತು. ಅಲ್ಲದೆ ಬಹುಮಹಡಿ ವಸತಿ ಸಂಕೀರ್ಣದ ಯೋಜನೆ ತಯಾರಿಸಿ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆಯನ್ನು ಪ್ರಾರಂಭಿಸಿತು. ಪಾಲಿಕೆ ಆಡಳಿತ ಹಾಗೂ ಸ್ಥಳೀಯ ಶಾಸಕರು ಒಂದೇ ಪಕ್ಷದವರಾಗಿದ್ದರೂ, ಬಡವರ ನಿವೇಶನದ ಬಗ್ಗೆ ನಿರಾಸಕ್ತಿ ವ್ಯಕ್ತಪಡಿಸಿದ್ದರು. ನಗರದಲ್ಲಿ ನೀರಿನ ಪೂರೈಕೆ ಅವ್ಯವಸ್ಥೆ ಹಾಗೂ ದರ ಹೆಚ್ಚಳದ ವಿರುದ್ಧ ಕೂಡಾ ಸಿಪಿಐ(ಎಂ) ನಡೆಸಿದ ಹೋರಾಟದ ಬಳಿಕ ದರ ಪರಿಷ್ಕರಣೆಗೆ ನಗರಪಾಲಿಕೆ ಪ್ರಯತ್ನಿಸಿತಲ್ಲದೆ, ತನ್ನದೇ ಉತ್ಸುಕತೆಯಿಂದ ಅಲ್ಲ ಎಂಬುದಾಗಿ ಜೆ. ಬಾಲಕೃಷ್ಣ ಶೆಟ್ಟಿ ಟೀಕಿಸಿದರು.
ಸಿಪಿಐ(ಎಂ) ಪಕ್ಷದ ಬಾವುಟವನ್ನು ಸಿಪಿಐ(ಎಂ) ಮಂಗಳೂರು ನಗರ ದಕ್ಷಿಣ ಕಾರ‍್ಯದರ್ಶಿ ಸುನೀಲ್‌ಕುಮಾರ್ ಬಜಾಲ್ ಅವರಿಗೆ ಹಸ್ತಾಂತರಗೊಳಿಸುವ ಮೂಲಕ ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಅವರು ಪಾದಯಾತ್ರೆಗೆ ಚಾಲನೆ ನೀಡಿದರು. ಮುನೀರ್ ಕಾಟಿಪಳ್ಳ ಮಾತನಾಡಿ, ಮಂಗಳೂರು ನಗರದಲ್ಲಿ ಒಂದು ರಾಜಕೀಯ ಪರಿವರ್ತನೆ ಆಗಬೇಕಿದ್ದು, ಅದಕ್ಕೆ ಯುವಜನರು ಮುಂದಾಳತ್ವ ತೆಗೆದುಕೊಳ್ಳಬೇಕಾಗಿದೆ. ಈಗಾಗಲೇ ಶಾಸಕರಾಗಿರುವವರು ಜನತೆಯ ಹಿತವನ್ನು ಗಣನೆಗೆ ತೆಗೆದುಕೊಳ್ಳುತ್ತಿಲ್ಲ. ಶ್ರೀಮಂತರು ನಿರ್ಮಿಸುವ ಅಪಾರ್ಟ್‌ಮೆಂಟುಗಳ ಭೂಮಿ ಪೂಜೆಗಳಿಗೆ ಎಲ್ಲ ಶಾಸಕರು ಹಾಜರಿರುತ್ತಾರೆ. ಆದರೆ ಸಾವಿರಗಟ್ಟಲೆ ನಿವೇಶನರಹಿತರ ಮನೆ ನಿರ್ಮಾಣದ ಬಗ್ಗೆ ಕನಿಷ್ಟ ಕಾಳಜಿಯೂ ಅವರಲ್ಲಿ ಕಂಡು ಬರುವುದಿಲ್ಲ. ಕಮ್ಯುನಿಸ್ಟ್ ಪಕ್ಷದವರು ಕಟ್ಟಿರುವ ಸಂಘಕ್ಕೆ ಸೇರಿಕೊಳ್ಳುವ ನಿವೇಶನರಹಿತರಿಗೆ ಆ ಸಂಘಟನೆಯಿಂದ ನಿಮಗೆ ಮನೆ ಕೊಡಿಸಲು ಸಾಧ್ಯವಿಲ್ಲ ಎಂದೂ ಬೆದರಿಸುತ್ತಾರೆ ಎಂಬುದಾಗಿ ವಾಗ್ದಾಳಿ ನಡೆಸಿದರು.
ನಗರ ಕೇಂದ್ರದ ಸೆಂಟ್ರಲ್ ಮಾರ್ಕೆಟನ್ನು ಪುನರ್‌ರಚಿಸಬೇಕು ಎಂಬ ಒತ್ತಾಯ ಹಲವಾರು ವರ್ಷಗಳಿಂದ ಇದ್ದರೂ, ಈಗಿನ ಶಾಸಕರು ಆ ಬಗ್ಗೆ ಕಾರ‍್ಯ ಪ್ರವೃತ್ತರಾಗಲಿಲ್ಲ. ಅವಶ್ಯಕತೆ ಇಲ್ಲದಿದ್ದರೂ ಸುರತ್ಕಲ್‌ನಲ್ಲಿ ಹೈಟೆಕ್ ಮಾರ್ಕೆಟನ್ನು ನಿರ್ಮಾಣ ಮಾಡಲು ಇನ್ನೊಬ್ಬ ಶಾಸಕರು ಮುತುವರ್ಜಿ ವಹಿಸಿದ್ದಾರೆ.
ಇನ್ನೊಂದೆಡೆ ಬೃಹತ್ ಕಟ್ಟಡ ನಿರ್ಮಾಣದ ವೇಳೆಗೆ ಪಾರ್ಕಿಂಗ್ ಸ್ಥಳಗಳನ್ನು ಕಾದಿರಿಸಬೇಕೆಂಬ ನಿಯಮವಿದ್ದರೂ, ಬಹುತೇಕ ವ್ಯಾಪಾರಿ ಕಟ್ಟಡದ ಒಡೆಯರು ಪಾರ್ಕಿಂಗ್ ಸ್ಥಳ ನಿರ್ಮಿಸದೆ ಅದೇ ಸ್ಥಳದಲ್ಲಿ ವ್ಯಾಪಾರಿ ಮಳಿಗೆ ನಿರ್ಮಿಸಿದ್ದಾರೆ. ಇದರಿಂದಾಗಿ ನಗರದ ರಸ್ತೆಯಲ್ಲಿ ವಾಹನ ದಟ್ಟಣೆ ಹೆಚ್ಚಾಗಿದೆ ಹಾಗೂ ಅಕ್ರಮ ಪಾರ್ಕಿಂಗ್‌ಗೆ ಕಾರಣವಾಗಿದೆ. ಇದೇ ಶ್ರೀಮಂತರು ಬೀದಿಬದಿ ವ್ಯಾಪಾರಿಗಳು ನಗರ ಸೌಂದರ್ಯಕ್ಕೆ ಅಡ್ಡಿಯೆಂದು ಅವರನ್ನು ಒಕ್ಕಲೆಬ್ಬಿಸಲು ಪ್ರೇರಣೆ ನೀಡಿ, ಅದರಂತೆ ಪಾಲಿಕೆ ಕ್ರಮ ಕೈಗೊಳ್ಳುತ್ತಿದೆ. ಸುನೀಲ್‌ಕುಮಾರ್ ಬಜಾಲ್ ನೇತೃತ್ವದಲ್ಲಿ ಬೀದಿಬದಿ ವ್ಯಾಪಾರಿಗಳ ಸಂಘವು ಪಾಲಿಕೆಗೆ ಸವಾಲು ಒಡ್ಡಿ ಇದನ್ನು ಎದುರಿಸುತ್ತಿದೆ. ಬೀದಿಬದಿ ವ್ಯಾಪಾರಿಗಳನ್ನು ಒಕ್ಕಲೆಬ್ಬಿಸುವುದಕ್ಕೆ ಬರುವ ಮೊದಲು, ಬೃಹತ್ ಕಟ್ಟಡಗಳಲ್ಲಿ ಪಾರ್ಕಿಂಗ್ ಸ್ಥಳಗಳಲ್ಲಿ ಅಕ್ರಮವಾಗಿ ನಿರ್ಮಿಸಲಾದ ಅಂಗಡಿ ಮುಗ್ಗಟ್ಟುಗಳನ್ನು ಪಾಲಿಕೆ ಕೆಡವಿ ಹಾಕಲಿ ಎಂದು ಮುನೀರ್ ಕಾಟಿಪಳ್ಳ ಪಾಲಿಕೆಗೆ ಸವಾಲು ಹಾಕಿದರು. ಮಂಗಳೂರು ನಗರದವು ಶ್ರೀಮಂತರ ಮಂಗಳೂರು ಎನಿಸಬಾರದು, ಬಡವರು ಜನಸಾಮಾನ್ಯರ ಮಂಗಳೂರು ಆಗಬೇಕು ಎಂದವರು ಆಶಿಸಿದರು.
ಸಿಪಿಐ(ಎಂ) ಮಂಗಳೂರು ನಗರ ದಕ್ಷಿಣ ಸಮಿತಿ ಕಾರ‍್ಯದರ್ಶಿ ಸುನೀಲ್‌ಕುಮಾರ್ ಬಜಾಲ್ ಪ್ರಾಸ್ತಾವಿಕ ಮಾತುಗಳಲ್ಲಿ, ನಗರ ಪಾಲಿಕೆಯ ಆಡಳಿತವು ಭ್ರಷ್ಟವಾಗಿದ್ದು, ಬದಲಾವಣೆ ನಮ್ಮಿಂದಲೇ ಆಗಬೇಕಾಗಿದೆ ಎಂದು ವಿವರಿಸಿದರು. ಸಮಿತಿ ಸದಸ್ಯ ಯೋಗೀಶ್ ಜಪ್ಪಿನಮೊಗರು ಸ್ವಾಗತಿಸಿದರು. ಸದಸ್ಯ ಸಂತೋಷ್ ಶಕ್ತಿನಗರ ವಂದಿಸಿದರು. ನಗರ ಪಾಲಿಕೆ ಕಾರ್ಪೊರೇಟರ್ ದಯಾನಂದ ಶೆಟ್ಟಿ, ಮಾಜಿ ಕಾರ್ಪೊರೇಟರ್ ಜಯಂತಿ ಬಿ. ಶೆಟ್ಟಿ, ಸಿಪಿಐ(ಎಂ) ಜಿಲ್ಲಾ ಸಮಿತಿಯ ವಾಸುದೇವ ಉಚ್ಚಿಲ, ನಗರ ಸಮಿತಿ ಸದಸ್ಯರು, ಡಿವೈಎಫ್‌ಐ ದ.ಕ. ಜಿಲ್ಲಾಧ್ಯಕ್ಷ ಬಿ.ಕೆ. ಇಮ್ತಿಯಾಜ್ ಪಾದಯಾತ್ರೆ ಉದ್ಘಾಟನಾ ಸಭೆಯಲ್ಲಿ ಭಾಗವಹಿಸಿದ್ದರು.
ಪಾದಯಾತ್ರೆಯು 4 ದಿನ ನಗರದ 38 ವಾರ್ಡುಗಳಲ್ಲಿ ಸಾಗಿ, ಡಿಸೆಂಬರ್ 10ರ ಸಾಯಂಕಾಲ ಶಕ್ತಿನಗರದಲ್ಲಿ ಸಮಾರೋಪಗೊಳ್ಳಲಿದೆ.
Click this button or press Ctrl+G to toggle between Kannada and English