ಮೂಡುಬಿದಿರೆ: ಭಾರತವು ಯಾವ ಅಪಾಯಕಾರಿ ದೇಶಕ್ಕೆ ಹೆಚ್ಚಿನ ಮಹತ್ವವನ್ನು ನೀಡಬೇಕಾಗಿತ್ತೋ, ಆ ದೇಶವನ್ನು ಕಡೆಗಣಿಸಿ, ನಿರ್ಲಕ್ಷಿತ ದೇಶಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಿರುವುದೇ ಇಂದಿನ ಚೀನಾ ಮತ್ತು ಭಾರತದ ನಡುವಿನ ಸಮಸ್ಯೆಗೆ ಕಾರಣ ಎಂದು ಬಿ.ಜೆ.ಪಿ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿಯಾಗಿರುವ ಬಿ.ಎಲ್.ಸಂತೋಷ್ ಹೇಳಿದರು.
ಅವರು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ರೋಸ್ಟ್ರಮ್ ಕ್ಲಬ್ ಹಾಗೂ ಸಂಚಲನ ಮೂಡಬಿದಿರೆ ಇವರ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ `ಭಾರತ ಮತ್ತು ಚೀನಾ ನಡುವಿನ ಸಂಬಂಧ’ ಎಂಬ ವಿಷಯದ ಕುರಿತು ಮಾತನಾಡಿದರು. ದುರಾದೃಷ್ಟವಷಾತ್ ನಾವು ಮೊದಲಿನಿಂದಲೂ ನಿರ್ಲಕ್ಷಿತ ಪಾಕಿಸ್ತಾನ ನಮ್ಮ ಬದ್ಧ ವೈರಿ ಎಂದು ಪರಿಗಣಿಸಿದೆವೆಯೇ ಹೊರತು ಅತ್ಯಂತ ಅಪಾಯಕಾರಿಯಾದ ಚೀನಾವನ್ನು ಕಡೆಗಣಿಸುತ್ತಾ ಬಂದೆವು. ಆದರೆ ಭಾರತದ ಆ ನಿಲುವೇ ಚೀನಾ ನಮ್ಮ ದೇಶದ ಮೇಲೆ ಆಕ್ರಮಣ ಮುಂದಾಗಲು ಕಾರಣವಾಗಿದೆ ಎಂದರು. ಚೀನಾ ಹೇಗೆ ಭಾರತಕ್ಕೆ ಸಂಸ್ಕøತಿ, ಜಲಸಂಪನ್ಮೂಲ, ಆರ್ಥಿಕತೆ ಹಾಗೂ ರಕ್ಷಣಾಪಡೆಗೆ ಸವಾಲನ್ನೊಡ್ಡುತ್ತಿದೆ ಎಂಬುದರ ಕುರಿತು ಬೆಳಕು ಚೆಲ್ಲಿದರು.
ಚೀನಾದಿಂದ ವಸ್ತುಗಳ ಆಮದು ಈಗಾಗಲೇ ಶೇ.7ರಷ್ಟು ಕಡಿಮೆಯಾಗಿದ್ದು ಈ ಸಂಖ್ಯೆಯು ಇನ್ನಷ್ಟು ಕಡಿಮೆಯಾಗಬೇಕಾಗಿದೆ. ಅದಲ್ಲದೆ ಚೀನಾದ ಕುರಿತು `ಚೀನೀ ಉತ್ಪನ್ನ ಏಕೆ?’ ಎಂಬ ಮನೋಭಾವನೆಯನ್ನು ಯುವಪೀಳಿಗೆಯು ಬೆಳೆಸಿಕೊಳ್ಳಬೇಕು. ಜೊತೆಗೆ ವಿದ್ಯಾರ್ಥಿಗಳು ಚೀನಾದ ಕುರಿತು ಹೆಚ್ಚಿನ ಜ್ಞಾನ ಹೊಂದಿರಬೇಕು. ಇದು ದೇಶದ ಭವಿಷ್ಯಕ್ಕೆ ಅತ್ಯಗತ್ಯ.ಪ್ರಸ್ತುತ ಆಡಳಿತದಲ್ಲಿರುವ ಸರ್ಕಾರ ಹೇಗೆ ತನ್ನ ರಾಜತಾಂತ್ರಿಕ ಜಾಣ್ಮೆಯಿಂದ ಡೋಕ್ಲಮ್ ಸಮಸ್ಯೆಯನ್ನು ಬಗೆಹರಿಸಿತು ಎಂಬುದರ ಕುರಿತು ವಿವರಿಸಿದರು. ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆ, ಕೌಶಲ್ಯಭರಿತ ಯುವ ಸಮೂಹ, ಕ್ರಿಯಾತ್ಮಕ ಮನೋಭಾವ, ಸಾರ್ವಜನಿಕ ಉದ್ದಿಮೆ ಹೇಗೆ ಚೀನ ದೇಶಕ್ಕೆ ಸವಾಲಾಗಿ ಕೆಲಸ ಮಾಡುತ್ತಿದೆ ಎಂಬುದನ್ನು ತಿಳಿಸಿದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮ್ಯಾನೇಜಿಂಗ್ ಟ್ರಸ್ಟಿ ವಿವೇಕ್ ಆಳ್ವ, ಆಳ್ವಾಸ್ ಪದವಿ ಕಾಲೇಜಿನ ಪ್ರಾಂಶುಪಾಲ ಡಾ.ಕುರಿಯನ್, ಆಳ್ವಾಸ್ ನ್ಯಾಚುರೋಪತಿ ಕಾಲೇಜಿನ ಪ್ರಾಂಶುಪಾಲ ಡಾ ವನಿತಾ ಶೆಟ್ಟಿ, ಆಳ್ವಾಸ್ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲ ಡಾ.ವಿನಯಚಂದ್ರ ಶೆಟ್ಟಿ, ದೇವಿಪ್ರಸಾದ್ ಶೆಟ್ಟಿ, ಸೂರಜ್ ಉಪಸ್ಥಿತರಿದ್ದರು.
Click this button or press Ctrl+G to toggle between Kannada and English