ಪರಿವರ್ತನಾ ರ‍್ಯಾಲಿ:ರಾಜಧಾನಿಯಲ್ಲಿ ಶಕ್ತಿ ಪ್ರದರ್ಶಿಸಿದ ಬಿಜೆಪಿ ನಾಯಕರು

10:42 AM, Monday, December 11th, 2017
Share
1 Star2 Stars3 Stars4 Stars5 Stars
(5 rating, 1 votes)
Loading...

bjp-rallyಬೆಂಗಳೂರು: ರಾಜ್ಯದಲ್ಲೂ ಅಚ್ಛೇ ದಿನ್‌ ಸಮೀಪಿಸುತ್ತಿದ್ದು, ಸಿಎಂ ಸಿದ್ದರಾಮಯ್ಯ ಸರಕಾರದ ದುರಾಡಳಿತ ಅಂತ್ಯಗೊಳ್ಳುತ್ತಿದೆ. ಸ್ಪಷ್ಟ ಬಹುಮತದೊಂದಿಗೆ ಬಿಜೆಪಿ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ರಾಜ್ಯ ಬಿಜೆಪಿ ಮುಖಂಡರು ಗುಡುಗಿದರು.

‘ಪರಿವರ್ತನಾ ಯಾತ್ರೆ’ಯ 39ನೇ ದಿನವಾದ ಭಾನುವಾರ ನಗರದಲ್ಲಿ ಬೃಹತ್‌ ಸಮಾವೇಶ ನಡೆಯಿತು. ಯಾತ್ರೆ ಉದ್ಘಾಟನಾ ದಿನದ ವೈಫಲ್ಯಕ್ಕೆ ಉತ್ತರ ಎಂಬಂತೆ ನಡೆದ ಸಮಾವೇಶದಲ್ಲಿ ಅಪಾರ ಜನಸ್ತೋಮ ನೆರೆದಿತ್ತು.

ಸಮಾವೇಶ ಉದ್ದೇಶಿಸಿ ಮಾತನಾಡಿದ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ”ಭ್ರಷ್ಟ ಸಿಎಂ ಸಿದ್ದರಾಮಯ್ಯ ಅವರು ಎಸಿಬಿ, ಸಿಐಡಿ ದುರುಪಯೋಗ ಮಾಡಿಕೊಂಡು ಭ್ರಷ್ಟರಿಗೆ ಕ್ಲೀನ್‌ಚಿಟ್‌ ಕೊಡುವ ಕೆಲಸ ಮಾಡುತ್ತಿದ್ದು, ಬಿಜೆಪಿ ಅಧಿಕಾರಕ್ಕೆ ಬಂದ ಕೂಡಲೇ ಈ ಎಲ್ಲ ಪ್ರಕರಣಗಳ ಮರುತನಿಖೆ ನಡೆಸಿ ಭ್ರಷ್ಟರನ್ನು ಕಳುಹಿಸಬೇಕಾದ ಜಾಗಕ್ಕೆ ಕಳುಹಿಸುತ್ತೇವೆ,” ಎಂದು ಗುಡುಗಿದರು.

ಕೇಂದ್ರ ಸಚಿವ ಅನಂತಕುಮಾರ್‌,”ಯಡಿಯೂರಪ್ಪ ಅವರು ಹ್ಯಾಟ್ರಿಕ್‌ ಬಾರಿಸಿ ಮೂರನೇ ಬಾರಿಗೆ ಸಿಎಂ ಆಗಲಿದ್ದಾರೆ. ನಾಲ್ಕೂವರೆ ವರ್ಷ ನಿದ್ದೆ ಮಾಡಿ ಗೊರಕೆ ಹೊಡೆದ ಸಿದ್ದರಾಮಯ್ಯ ಅವರನ್ನು ಮನೆಗೆ ಕಳುಹಿಸಬೇಕಿದೆ. ಹದಗೆಟ್ಟ ಕಾನೂನು ಸುವ್ಯವಸ್ಥೆ ಸರಿಪಡಿಸದೆ ದುರಹಂಕಾರದ ವರ್ತನೆಯಲ್ಲೇ ಕಾಲಹರಣ ಮಾಡುತ್ತಿರುವ ಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಕೆಳಗಿಳಿಸಲು ಎಲ್ಲರೂ ಒಟ್ಟಾಗಿ ಹೋರಾಡೋಣ. ಬೆಂಗಳೂರು ನಗರದಲ್ಲಿ ಕನಿಷ್ಠ 25ಕ್ಷೇತ್ರಗಳನ್ನು ಗೆಲ್ಲುವುದು ನಮ್ಮ ಗುರಿ,” ಎಂದು ಕರೆ ನೀಡಿದರು.

”ಕೆಂಪೇಗೌಡರು ಗೋಪುರ ಕಟ್ಟಿದಂತೆ ಬೆಂಗಳೂರಿನಲ್ಲಿ ಬಿಜೆಪಿ ಗೋಪುರ ಕಟ್ಟುತ್ತೇವೆ. ನಗರದಿಂದ ಕನಿಷ್ಠ 25 ಸ್ಥಾನಗಳನ್ನು ಗೆದ್ದುಕೊಡುತ್ತೇವೆ ಎಂಬ ಸ್ಪಷ್ಟ ಭರವಸೆಯನ್ನು ನಗರದ ಟೀಮ್‌ ಪರವಾಗಿ ಯಡಿಯೂರಪ್ಪ ಅವರಿಗೆ ಕೊಡುತ್ತೇನೆ. ಯಾತ್ರೆ ಮೂಲಕ ಯಡಿಯೂರಪ್ಪ ಅವರು ರಾಜ್ಯದ ಎಲ್ಲ ಭಾಗಗಳಲ್ಲಿ 125 ಸ್ಥಾನಗಳನ್ನು ಗೆದ್ದುಕೊಂಡು ಬರಲಿದ್ದಾರೆ. ಈ ಮೂಲಕ 150 ಸ್ಥಾನ ಗೆದ್ದು ಯಡಿಯೂರಪ್ಪ ನೇತೃತ್ವದಲ್ಲಿ ರಾಜ್ಯದಲ್ಲಿ ಪರಿವರ್ತನೆ ಮಾಡುವ ಸಂಕಲ್ಪ ಮಾಡೋಣ,” ಎಂದು ಅನಂತಕುಮಾರ್‌ ಹೇಳಿದರು.

”ನನ್ನ ಕಂಡರೆ ಪ್ರಧಾನಿ ಮೋದಿಗೆ ಭಯ ಎನ್ನುವ ಸಿದ್ದರಾಮಯ್ಯ ನೀವೊಬ್ಬ ಬಚ್ಛಾ. ಅಧಿಕಾರದಿಂದ ಕೆಳಗಿಳಿದು ಮನೆ ಸೇರಿದಾಗ ಮಾತ್ರವೇ ರಾಜ್ಯಕ್ಕೆ ಅಚ್ಛೇ ದಿನ್‌,” ಎಂದು ಯಡಿಯೂರಪ್ಪ ಅವರು ಸಿಎಂ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿದರು.
”ಬಿಜೆಪಿ ಎಂದರೆ ಜೈಲ್‌ ಪಾರ್ಟಿ ಎಂದು ಸಿದ್ದರಾಮಯ್ಯ ಹೇಳುತ್ತಿದ್ದಾರೆ. ಆದರೆ, ಅವರದೇ ಪಕ್ಷದ ಅಧ್ಯಕ್ಷೆ ಸೋನಿಯಾ ಬೇಲ್‌ ಮೇಲೆ ಹೊರಗಿರುವುದು ಸಿಎಂಗೆ ಗೊತ್ತಿಲ್ಲವೇ,”ಎಂದು ಪ್ರಶ್ನಿಸಿದರು.

ಬಿಜೆಪಿ ರಾಜ್ಯ ಉಸ್ತುವಾರಿ ಮುರಳೀಧರರಾವ್‌, ಮಾಜಿ ಸಚಿವರಾದ ವಿ. ಸೋಮಣ್ಣ, ಅರವಿಂದ ಲಿಂಬಾವಳಿ, ಸಂಸದ ಪಿ.ಸಿ. ಮೋಹನ್‌, ಶಾಸಕರಾದ ಎಂ. ಕೃಷ್ಣಪ್ಪ, ಸತೀಶ್‌ ರೆಡ್ಡಿ, ರವಿ ಸುಬ್ರಹ್ಮಣ್ಯ, ಪಕ್ಷದ ನಾಯಕಿಯರಾದ ಶ್ರುತಿ, ತಾರಾ ಮತ್ತಿತರರು ಪಾಲ್ಗೊಂಡಿದ್ದರು

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English