ಹಲ್ಲೆ ಪ್ರಕರಣ: ಏಳು ಮಂದಿಗೆ ಶಿಕ್ಷೆ, ದಂಡ

12:17 PM, Wednesday, December 13th, 2017
Share
1 Star2 Stars3 Stars4 Stars5 Stars
(5 rating, 1 votes)
Loading...

7-peopleಮಂಗಳೂರು: ವೈಯುಕ್ತಕ ಮತ್ತು ಹಾಗೂ ಕೌಟುಂಬಿಕ ವೈಷಮ್ಯದ ಹಿನ್ನೆಯಲ್ಲಿ ಇಬ್ಬರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ 7 ಮಂದಿ ಅಪರಾಧಿಗಳಿಗೆ ಮಂಗಳೂರಿನ 4ನೆ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು 5 ವರ್ಷಗಳ ಶಿಕ್ಷೆ ಹಾಗೂ 15 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ.

ಉಪ್ಪಿನಂಗಡಿ ನಿವಾಸಿಗಳಾದ ಜೆಸಿಬಿ ಸಿದ್ದೀಕ್ (36), ಸುಲೈಮಾನ್ (33), ಸಿರಾಜ್ (31), ಅಬ್ದುಲ್ ಗಫೂರ್ (36), ಹಾರಿಸ್ (34), ಅಬ್ದುಲ್ ಸತ್ತಾರ್ (28), ಬಿ.ಟಿ. ಫಾರೂಕ್ (30) ಶಿಕ್ಷೆಗೊಳಗಾದ ಅಪರಾಧಿಗಳು.

ಅವರು ಅಬ್ದುಲ್ ಹಕೀಂ (27) ಮತ್ತು ಅಶ್ರಫ್ (35) ಎಂಬವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ್ದರು ಎಂದು ದೂರು ದಾಖಲಾಗಿತ್ತು. 2014ರ ಫೆ.23ರಂದು ಉಪ್ಪಿನಂಗಡಿಯ ಕರ್ವೇಲು ಜಂಕ್ಷನ್‌ನಲ್ಲಿ ಹಕೀಂ ಮತ್ತು ಶ್ರಫ್ ನಡೆದುಕೊಂಡು ಹೋಗುತ್ತಿದ್ದಾಗ ಮಾರುತಿ ಓಮ್ನಿ ಹಾಗೂ ದ್ವಿಚಕ್ರ ವಾಹನದಲ್ಲಿ ಆಗಮಿಸಿದ್ದ 7 ಮಂದಿಯ ತಂಡ ಅವರನ್ನು ತಡೆದು ನಿಲ್ಲಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರಲ್ಲದೆ, ತಲವಾರಿನಿಂದ ದಾಳಿ ನಡೆಸಿದ್ದರು.

ಪರಿಣಾಮವಾಗಿ ಅಶ್ರಫ್ ಅವರ ಎದೆಭಾಗಕ್ಕೆ ಮತ್ತು ಹಕೀಂ ಅವರ ಎಡಕೈಗೆ ಗಂಭೀರ ಗಾಯವಾಗಿತ್ತು. ಈ ಬಗ್ಗೆ ಉಪ್ಪಿನಂಗಡಿ ಠಾಣಾ ಪೊಲೀಸರು ಕೊಲೆಯತ್ನ ಪ್ರಕರಣ ದಾಖಲಿಸಿದ್ದರು.

ವಿಚಾರಣೆ ನಡೆಸಿದ ನ್ಯಾಯಾಧೀಶೆ ನೇರಳೆ ವೀರಭದ್ರಯ್ಯ ಭವಾನಿ ಅವರು ಅಪರಾಧಿಗಳಿಗೆ ಐಪಿಸಿ ಸೆಕ್ಷನ್ 143ರಡಿ 6 ತಿಂಗಳು, 147ರಡಿ 1ವರ್ಷ, 148ರಡಿ 1ವರ್ಷ, 341ರಡಿ 1 ತಿಂಗಳು, 504ರಡಿ 1ವರ್ಷ, 326ರಡಿ 2 ವರ್ಷ, 307ರಡಿ 5ವರ್ಷ ಶಿಕ್ಷೆ ನೀಡಿ ತೀರ್ಪು ನೀಡಿದ್ದಾರೆ. ಎಲ್ಲ ಶಿಕ್ಷೆಯನ್ನು ಏಕಕಾಲದಲ್ಲಿ ಅನುಭವಿಸಬೇಕಾಗಿದೆ. ಅಲ್ಲದೆ ಪ್ರತಿಯೊಬ್ಬರಿಗೂ 15 ಸಾವಿರ ರೂ. ದಂಡವಿಧಿಸಿದ್ದಾರೆ. ದಂಡ ತೆರಲು ತಪ್ಪಿದರೆ ಪ್ರತಿಯೊಬ್ಬರು ತಲಾ 6 ತಿಂಗಳ ಕಾಲ ಹೆಚ್ಚುವರಿ ಶಿಕ್ಷೆ ಅನುಭವಿಸಬೇಕು ಎಂದು ನ್ಯಾಯಾಧೀಶರು ಆದೇಶಿಸಿದ್ದಾರೆ.

ದಂಡದ ಮೊತ್ತ 1.05 ಲಕ್ಷದಲ್ಲಿ 10 ಸಾವಿರ ರೂ. ಸರಕಾರಕ್ಕೆ ಪಾವತಿಸಿದರೆ, ಉಳಿದಮೊತ್ತವನ್ನು ಸಂತ್ರಸ್ತರಾದ ಅಶ್ರಫ್ (ಶೇ.60) ಮತ್ತು ಹಕೀಂ (ಶೇ.40) ಅವರಿಗೆ ಪರಿಹಾರವಾಗಿ ನೀಡಬೇಕು ಎಂದು ತೀರ್ಪಿನಲ್ಲಿ ಸೂಚಿಸಲಾಗಿದೆ.

ದೋಷಾರೋಪಣಾ ಪಟ್ಟಿಯನ್ನು ಉಪ್ಪಿನಂಗಡಿ ಸಬ್‌ಇನ್‌ಸ್ಪೆಕ್ಟರ್ ಜಗದೀಶ್ ಅವರು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಸರಕಾರಿ ಅಭಿಯೋಜಕ ಹರಿಶ್ಚಂದ್ರ ಉದ್ಯಾವರ ವಾದಿಸಿದ್ದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English