ಬೆಂಗಳೂರು: ಇಂದಿನಿಂದ ‘ನವ ಕರ್ನಾಟಕ ನಿರ್ಮಾಣ’ ಯಾತ್ರೆಯನ್ನು ಆರಂಭಿಸಲಿರುವ ಸಿಎಂ ಸಿದ್ದರಾಮಯ್ಯ ವರ್ಷಾಂತ್ಯದ ವೇಳೆಗೆ ಅಪರೂಪದ ದಾಖಲೆಯೊಂದನ್ನು ಸೃಷ್ಟಿಸಲಿದ್ದಾರೆ. ಸಿದ್ದರಾಮಯ್ಯನವರ ಹೊಸ ದಾಖಲೆ ಏನಿರಬಹುದು ಎಂಬ ಕುತೂಹಲವೇ.?
ಮಾಜಿ ಮುಖ್ಯಮಂತ್ರಿ ದಿ. ರಾಮಕೃಷ್ಣ ಹೆಗಡೆ ಅವರ ನಂತರ ಅತ್ಯಂತ ಸುದೀರ್ಘ ಕಾಲ ಮುಖ್ಯಮಂತ್ರಿಯಾಗಿದ್ದ ಎಸ್.ಎಂ. ಕೃಷ್ಣ ಅವರ ದಾಖಲೆಯನ್ನು ಸಿದ್ದರಾಮಯ್ಯ ಮುರಿಯಲಿದ್ದಾರೆ. 1999 ರ ಅಕ್ಟೋಬರ್ 11 ರಂದು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದ ಎಸ್.ಎಂ. ಕೃಷ್ಣ ಅವರು 2004 ರ ಮೇ 28 ರ ತನಕ ಕರ್ನಾಟಕದ ಮುಖ್ಯಮಂತ್ರಿಯಾಗಿದ್ದರು. ಅಂದರೆ ಎಸ್.ಎಂ. ಕೃಷ್ಣ ಅವರು 4 ವರ್ಷ 230 ದಿನಗಳ ಕಾಲ ಕರ್ನಾಟಕದ ಮುಖ್ಯಮಂತ್ರಿಯಾಗಿದ್ದರು.
ಇದೀಗ ಸಿದ್ದರಾಮಯ್ಯ ಡಿಸೆಂಬರ್ ಅಂತ್ಯದ ವೇಳೆಗೆ ಈ ದಾಖಲೆಯನ್ನು ಮುರಿದು ದಿ. ರಾಮಕೃಷ್ಣ ಹೆಗಡೆ ಅವರ ನಂತರ ಅತ್ಯಂತ ಸುದೀರ್ಘ ಅವಧಿಯ ಸಿಎಂ ಎಂಬ ಕೀರ್ತಿಗೆ ಭಾಜನರಾಗಲಿದ್ದಾರೆ.
ಸಿದ್ದರಾಮಯ್ಯ ಅವರು 2013 ರ ಮೇ 13 ರಂದು ಕರ್ನಾಟಕದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದು, ಆ ಮೂಲಕ ಇದುವರೆಗೆ 4 ವರ್ಷ, 215 ದಿನಗಳನ್ನು ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯನವರು ಪೂರೈಸಿದ್ದಾರೆ. ಡಿಸೆಂಬರ್ 29 ಕ್ಕೆ ಅವರು ಮುಖ್ಯಮಂತ್ರಿಯಾಗಿ 4 ವರ್ಷ 231 ದಿನಗಳಾಗಲಿದ್ದು, ಆ ಮೂಲಕ ಮಾಜಿ ಮುಖ್ಯಮಂತ್ರಿಗಳಾದ ದಿ. ನಿಜಲಿಂಗಪ್ಪ, ದೇವರಾಜ ಅರಸು, ರಾಮಕೃಷ್ಣ ಹೆಗಡೆ ಅವರ ನಂತರ ಅತ್ಯಂತ ಸುದೀರ್ಘ ಕಾಲದ ಸಿಎಂ ಆದ ಕೀರ್ತಿಗೆ ಸಿದ್ದರಾಮಯ್ಯ ಪಾತ್ರರಾಗಲಿದ್ದಾರೆ.
ಹೆಗಡೆ ಅವರ ನಂತರ ಸಿದ್ದರಾಮಯ್ಯ ಸೇರಿದಂತೆ 13 ಮುಖ್ಯಮಂತ್ರಿಗಳು ರಾಜ್ಯವನ್ನಾಳಿದ್ದು, ಇದೀಗ ಬೀದರ್ ಟು ಬೆಂಗಳೂರು ಯಾತ್ರೆ ಆರಂಭಿಸಿರುವ ಸಿಎಂ ಯಾತ್ರೆಯ ನಡುವೆಯೇ ಎಸ್.ಎಂ. ಕೃಷ್ಣರ ದಾಖಲೆ ಮುರಿಯಲಿದ್ದಾರೆ.
ರಾಮಕೃಷ್ಣ ಹೆಗಡೆ ಅವರ ನಂತರ ಎಸ್ ಆರ್. ಬೊಮ್ಮಾಯಿ, ವೀರೇಂದ್ರ ಪಾಟೀಲ್, ಎಸ್. ಬಂಗಾರಪ್ಪ, ವೀರಪ್ಪ ಮೊಯ್ಲಿ, ಹೆಚ್.ಡಿ. ದೇವೇಗೌಡ, ಜೆ.ಹೆಚ್. ಪಟೇಲ್, ಎಸ್.ಎಂ. ಕೃಷ್ಣ, ಧರ್ಮಸಿಂಗ್, ಹೆಚ್.ಡಿ. ಕುಮಾರಸ್ವಾಮಿ, ಬಿ.ಎಸ್. ಯಡಿಯೂರಪ್ಪ, ಡಿ.ವಿ. ಸದಾನಂದಗೌಡ, ಜಗದೀಶ್ ಶೆಟ್ಟರ್ ಹಾಗೂ ಸಿದ್ದರಾಮಯ್ಯ ಅನುಕ್ರಮವಾಗಿ ಮುಖ್ಯಮಂತ್ರಿಗಳಾಗಿದ್ದರು.
Click this button or press Ctrl+G to toggle between Kannada and English