ಸೌದಿ ಅರೇಬಿಯಾ ಆರ್ಥಿಕ ಬಿಕ್ಕಟ್ಟು, ಹೊಸ ಕಾನೂನು… ಸಂಕಷ್ಟದಲ್ಲಿ ಕರಾವಳಿ ಮಂದಿ

2:45 PM, Thursday, December 14th, 2017
Share
1 Star2 Stars3 Stars4 Stars5 Stars
(5 rating, 1 votes)
Loading...

saudi-arabiaಮಂಗಳೂರು: ಸೌದಿ ಅರೇಬಿಯಾದ ರಾಜಮನೆತನದೊಳಗಿನ ಬಿಕ್ಕಟ್ಟು ಹಾಗೂ ನೂತನ ರಾಜ ಮೊಹಮ್ಮದ್‌ ಬಿನ್‌ ಸಲ್ಮಾನ್‌‌ ಜಾರಿಗೊಳಿಸಿದ ಹೊಸ ಕಾನೂನು ಕಟ್ಟಳೆಗಳಿಂದ ಸೌದಿಯಲ್ಲಿದ್ದ ಕರಾವಳಿ ಮಂದಿ ಸಂಕಷ್ಟಕ್ಕೀಡಾಗಿದ್ದಾರೆ.

ಹೌದು, ಸೌದಿ ಅರೇಬಿಯಾದ ನೂತನ ಕಾನೂನುಗಳಿಂದ ಅಲ್ಲಿದ್ದ ಭಾರತೀಯರು ಸೇರಿ ಕರ್ನಾಟಕದ ಹಲವರು ಉದ್ಯೋಗ ಕಳೆದುಕೊಂಡು ತವರಿಗೆ ಮರಳಿದ್ದಾರೆ. ಅಂತೆಯೇ ತಾಯ್ನಾಡಿಗೆ ಮರಳಿದ ಯುವಕರು ಬಂದರಿನಲ್ಲಿ ಹಾಗೂ ಗಲ್ಲಿಗಲ್ಲಿಗಳಲ್ಲಿ ಮೀನು ಮಾರಾಟ ಮಾಡಿ ಜೀವನ ಮಾಡುತ್ತಿದ್ದಾರೆ.

ಸೌದಿ ಅರೇಬಿಯಾದಲ್ಲಿ ಉಂಟಾಗಿರುವ ರಾಜಕೀಯ, ಆರ್ಥಿಕ ತಲ್ಲಣ ಭಾರತದ ಯುವಕರ ಉದ್ಯೋಗ ಕಿತ್ತುಕೊಂಡಿತ್ತು. ಸಾಮಾನ್ಯವಾಗಿ ಕೇರಳ ಹಾಗೂ ಕರ್ನಾಟಕ (ಅದರಲ್ಲೂ ಮಂಗಳೂರು-ಉಡುಪಿ ಜಿಲ್ಲೆಗಳ) ಯುವಕರು ಉದ್ಯೋಗ ಅರಸಿಕೊಂಡು ಸೌದಿಗೆ ಹೆಚ್ಚು ಮಂದಿ ಹೋಗಿದ್ದರು. ಆದ್ರೆ ಇದೀಗ ಅವರೆಲ್ಲ ತವರಿಗೆ ಬಂದು ಉದ್ಯೋಗಕ್ಕಾಗಿ ಅಲೆದಾಡಿ, ಮೀನು ಮಾರಾಟದ ಮೂಲಕವೇ ಬದುಕು ಕಟ್ಟಿಕೊಳ್ಳುತ್ತಿದ್ದಾರೆ.

ಹಲವರು ಮೀನು ಮಾರಾಟದಲ್ಲಿ ತೊಡಗಿದರೆ ಮತ್ತೆ ಕೆಲವರು ರಿಕ್ಷಾ, ಟೆಂಪೋಗಳಲ್ಲಿ ತರಕಾರಿ, ಹಣ್ಣು-ಹಂಪಲು, ಮಾರಾಟ ಮಾಡುತ್ತಿದ್ದಾರೆ. ಮಂಗಳೂರು, ಬಜಪೆ, ಕಿನ್ನಿಗೋಳಿ, ಬಂಟ್ವಾಳ, ಬೆಳ್ತಂಗಡಿ, ಉಡುಪಿ, ಸಚ್ಚೇರಿಪೇಟೆ, ಕುಂದಾಪುರದಲ್ಲಿ ಈ ದೃಶ್ಯಗಳು ಸಾಮಾನ್ಯವಾಗಿವೆ.

ಸೌದಿಯಲ್ಲಿ 4.1 ಮಿಲಿಯನ್ ಭಾರತೀಯರಿದ್ದರೆ, 5.22 ಲಕ್ಷ ಕೇರಳಿಗರು ಹಾಗೂ 2ಲಕ್ಷಕ್ಕೂ ಅಧಿಕ ಮಂದಿ ಕನ್ನಡಿಗರು ಇದ್ದಾರೆ. ಕಳೆದ ಆಗಸ್ಟ್ ತಿಂಗಳಲ್ಲೇ ಉಂಟಾದ ಆರ್ಥಿಕ ತಲ್ಲಣಕ್ಕೆ ಸುಮಾರು 10 ಸಾವಿರ ಭಾರತೀಯರು ಉದ್ಯೋಗ ಕಳೆದುಕೊಂಡು ತಾಯ್ನಾಡಿಗೆ ಮರಳಿದ್ದಾರೆ.

ಸರ್ಕಾರಿ ಇಲಾಖೆ ಹಾಗೂ ಖಾಸಗಿ ಒಡೆತನಕ್ಕೆ ಸೇರಿದ ಸಂಸ್ಥೆಗಳಲ್ಲಿ ಸೌದಿ ಪ್ರಜೆಗಳಿಗೆ ಹೆಚ್ಚಿನ ವೇತನ ನೀಡಿ ಮೊದಲ ಪ್ರಾಶಸ್ತ್ಯ ನೀಡಬೇಕೆಂಬ ನಿರ್ಧಾರದಿಂದ ಅನೇಕ ಮಂದಿ ಉದ್ಯೋಗ ಕಳೆದುಕೊಳ್ಳುವಂತಾಯಿತು. ಇದೀಗ ಸಂಪ್ರದಾಯವಾದಿ ಸೌದಿ ಅರೇಬಿಯಾದಲ್ಲಿ ಅಲ್ಲಿನ ಮಹಿಳೆಯರಿಗೂ ಉದ್ಯೋಗ ಅವಕಾಶ ಕಲ್ಪಿಸಿರುವುದರಿಂದ ಭಾರತೀಯರು ತಾಯ್ನಾಡಿಗೆ ಮರಳದೆ ವಿಧಿಯಿರಲಿಲ್ಲ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English