ಮಂಗಳೂರು: ಕಥೆಗಾರ್ತಿ ಅನಿತಾ ನರೇಶ್ ಮಂಚಿಯವರು ತಮ್ಮ ಮಗನ ಮದುವೆಯ ಸಂಭ್ರಮದಲ್ಲಿ ಚೊಚ್ಚಲ ಕಾದಂಬರಿಯನ್ನು ಬಿಡುಗಡೆಗೊಳಿಸಿದ್ದಾರೆ.
ಕಥೆಗಾರ್ತಿ ಅನಿತಾ-ನರೇಶ್ ದಂಪತಿಯ ಮಗನ ಮದುವೆ ಸಮಾರಂಭ ನಡೆಯಿತು. ಮಗ ಚೇತನ್, ಸ್ವಾತಿ ಮಂಚಿಯವರನ್ನು ಸಪ್ತಪದಿ ತುಳಿದು ಮನೆತುಂಬಿಸಿಕೊಳ್ಳುವ ಸಂಭ್ರಮದ ಸಂದರ್ಭದಲ್ಲಿ ಅನಿತಾರ `ಪದ ಕುಸಿಯೆ ನೆಲವಿಹುದು’ ಎಂಬ ಕಾದಂಬರಿಯನ್ನು ಅನಾವರಣಗೊಳಿಸಲಾಯಿತು.
ದಿಟ್ಟ ಮಹಿಳೆಯೊಬ್ಬಳ ಕಥೆಯನ್ನು ಸಾರುವ ಕೃತಿ ಇದಾಗಿದೆ. ಹೆಸರಿಗೆ ತಕ್ಕ ಹಾಗೆ ಶಾಂತ ಸ್ವಭಾವದ ಶಾಂತಿ ಬದುಕಿನುದ್ದಕ್ಕೂ ಹೋರಾಟದ ಹಾದಿಯಲ್ಲಿ ಸಾಗುವ ನೈಜ ಬದುಕನ್ನಾಧರಿಸಿ ಬರೆದ ಕೃತಿಯನ್ನು ಬೆಂಗಳೂರಿನ ತೇಜು ಪಬ್ಲಿಕೇಶನ್ ಪ್ರಕಟಿಸಿದೆ.
ದ.ಕ. ಜಿಲ್ಲೆಯ ಹಿನ್ನೆಲೆಯಲ್ಲಿ ಮೂಡಿಬಂದ ಈ ಕಥೆ ಸುಮಾರು 50 ವರ್ಷಗಳ ಹಿಂದೆ ಓದುಗರನ್ನು ಎಳೆದೊಯ್ಯುತ್ತದೆ. ದಕ್ಷಿಣ ಕನ್ನಡ ಜಿಲ್ಲೆಯ ಊರೊಂದರಲ್ಲಿ ನಡೆದ ಕಥೆ ಇಂದು ಕಾದಂಬರಿಯಾಗಿ ಮೂಡಿಬಂದಿದೆ. ತಮ್ಮ ಕುಟುಂಬಿಕರಲ್ಲಿ ಬಹುತೇಕ ಪುಸ್ತಕಗಳನ್ನು ಓದುವ ಹವ್ಯಾಸವಿರುವವರೇ ಇದ್ದಾರೆ. ಆದ್ದರಿಂದಲೇ ಮಗನ ಮದುವೆಯಂದೇ ಕೃತಿ ಬಿಡುಗಡೆ ಸೂಕ್ತ ಎನಿಸಿತು ಅಂತಾರೆ ಅನಿತಾ ನರೇಶ್ ಮಂಚಿ.
ಅನಿತಾ ಮಂಚಿ ಸಣ್ಣ ಕಥೆ, ಹಾಸ್ಯ ಲೇಖನ, ಲಘು ಬರಹಗಳ ಮೂಲಕ ಹೆಸರು ಮಾಡಿದ್ದಾರೆ. ಈಗಾಗಲೇ ಅವರ ಎಂಟು ಪುಸ್ತಕಗಳು ಪ್ರಕಾಶನಗೊಂಡಿವೆ. ಪತ್ರಿಕೆ, ವೆಬ್ ಪತ್ರಿಕೆಗಳಿಗೆ ಅಂಕಣ ಬರೆಯುವ ಇವರ ಮೊದಲ ಕಾದಂಬರಿಗೆ ಮಾಲಿನಿ ಗುರುಪ್ರಸನ್ನ ಮುನ್ನುಡಿ ಬರೆದಿದ್ದಾರೆ.
Click this button or press Ctrl+G to toggle between Kannada and English