ಮಂಗಳೂರು: ಕೇಂದ್ರ ಸರ್ಕಾರ ಆಮ್ ಆದ್ಮಿ ಜೀವವಿಮಾ ಪಾಲಿಸಿಯನ್ನು ಸ್ಥಗಿತಗೊಳಿಸಿರುವುದರಿಂದ ಜನಸಾಮಾನ್ಯರು ತೊಂದರೆಗೊಳಗಾಗಿದ್ದಾರೆ ಎಂದು ಆಹಾರ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಮಾ ಯೋಜನೆಯಲ್ಲಿ ಪ್ರಾಕೃತಿಕ ವಿಕೋಪದಿಂದ ಸಾವು ಸಂಭವಿಸಿದರೆ, ಅಪಘಾತದಿಂದ ಮೃತಪಟ್ಟವರಿಗೆ, ಅಂಗ ವೈಕಲ್ಯಕ್ಕೆ ಗರಿಷ್ಠ ಮೊತ್ತದ ಪರಿಹಾರಕ್ಕೆ ಅವಕಾಶವಿತ್ತು. ಆದರೆ ಕೇಂದ್ರ ಏಕಾಏಕಿ ಈ ವಿಮೆ ಯೋಜನೆಯನ್ನು ರದ್ದುಪಡಿಸಿದ್ದು, ಇದು ಸರಿಯಾದ ಕ್ರಮವಲ್ಲ ಎಂದು ಹೇಳಿದರು.
ಆಹಾರ ವಸ್ತುಗಳ ಗುಣಮಟ್ಟವನ್ನು ನಿರ್ಧರಿಸುವ ಬ್ಯೂರೋ ಆಫ್ ಸ್ಟಾಂಡರ್ಡ್ (ಬಿಐಎಸ್) ಸಮಿತಿಗೆ ನನ್ನನ್ನು ಕೇಂದ್ರ ಸರ್ಕಾರ ಸದಸ್ಯನನ್ನಾಗಿ ನೇಮಕ ಮಾಡಿದೆ. ಇತ್ತೀಚೆಗೆ ಕೇಂದ್ರ ಆಹಾರ ಸಚಿವ ರಾಮವಿಲಾಸ್ ಪಾಸ್ವಾನ್ ಅಧ್ಯಕ್ಷತೆಯಲ್ಲಿ ದೆಹಲಿಯಲ್ಲಿ ಇದರ ಸಭೆ ನಡೆದಿದೆ.
ಆ ಸಭೆಯಲ್ಲಿ ಆಹಾರ ವಸ್ತುಗಳ ಖರೀದಿ ಮತ್ತು ಮಾರಾಟಕ್ಕೆ ಮಾತ್ರ ಬಿಐಎಸ್ ಮಾನದಂಡವನ್ನು ಪರಿಗಣಿಸದೆ ಮೂಲ ಸೌಕರ್ಯಕ್ಕೆ ಇದನ್ನು ಅನ್ವಯಿಸುವಂತೆ ತೀರ್ಮನಿಸಲಾಗಿದೆ. ಇನ್ನು ಮುಂದೆ ಆಹಾರ ಗುಣಮಟ್ಟವನ್ನು ಸ್ವಯಂ ಆಗಿ ದೃಢೀಕರಿಸಬಹುದು. ಆದರೆ, ಅಡ್ಡಪರಿಶೀಲನೆ ವೇಳೆ ಅದು ಸುಳ್ಳು ಎಂದು ಪತ್ತೆಯಾದರೆ, ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಅವಕಾಶ ಇದೆ ಎಂದು ಸಚಿವ ಖಾದರ್ ಎಚ್ಚರಿಕೆ ನೀಡಿದರು.
ಪಡಿತರ ಅಂಗಡಿಗಳಲ್ಲಿ ಪಾಯಿಂಟ್ ಆಫ್ ಸೇಲ್(ಪಿಒಎಸ್)ಯಂತ್ರಗಳನ್ನು ಕಡ್ಡಾಯವಾಗಿ ಅಳವಡಿಸಬೇಕಾಗಿದೆ. ಇಂಟರ್‌ನೆಟ್ ಸೌಲಭ್ಯ ಇಲ್ಲದ ಕಡೆಗಳಲ್ಲಿ ಆಹಾರ ಇಲಾಖೆಯ ವತಿಯಿಂದಲೇ ಯಂತ್ರಗಳನ್ನು ಅಳವಡಿಸಲಾಗುವುದು. ಬಳಿಕ ಮಾಸಿಕ ಕಮಿಷನ್ನಲ್ಲಿ ಈ ಮೊತ್ತವನ್ನು ಕಡಿತಗೊಳಿಸಲಾಗುವುದು. ಪಿಒಎಸ್ ಯಂತ್ರಗಳನ್ನು ಅಳವಡಿಸಿದವರಿಗೆ 87 ರೂ. ಕಮಿಷನ್ ನೀಡಲಾಗುವುದು ಎಂದರು.
ರಾಜ್ಯದಲ್ಲಿ ಖಾಲಿ ಇರುವ ಗ್ರಾಹಕರ ಕೋರ್ಟ್‌ಗೆ ನಿವೃತ್ತ ನ್ಯಾಯಾಧೀಶರನ್ನು ನೇಮಕ ಮಾಡಲು ಕ್ರಮ ಕೈಗೊಳ್ಳಲಾಗುವುದು. ಇದರಿಂದಾಗಿ ಗ್ರಾಹಕರ ವ್ಯಾಜ್ಯ ಪರಿಹಾರಕ್ಕೆ ಸುಲಭವಾಗಲಿದೆ. ಒಂದೇ ಬ್ರಾಂಡ್‌ನ ಕುಡಿಯುವ ನೀರಿಗೆ ವಿಭಿನ್ನ ದರಗಳನ್ನು ವಿಧಿಸುವುದರ ವಿರುದ್ಧ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಲಿದೆ. ಈ ವಿಚಾರದಲ್ಲಿ ಸುಪ್ರೀಂ ಕೋರ್ಟ್‌ಗೆ ಮನವರಿಕೆ ಮಾಡುವ ಬಗ್ಗೆ ಕಾನೂನು ತಜ್ಞರ ಜೊತೆಗೆ ಸಮಾಲೋಚನೆ ನಡೆಸಲಾಗುವುದು ಎಂದರು.
ಗುಜರಾತ್‌ನ ಸೂರತ್‌ನಲ್ಲಿ ಚುನಾವಣಾ ಪ್ರಚಾರಕ್ಕೆ ತೆರಳಿದಾಗ ನಡೆಸಿದ ಪಾದಯಾತ್ರೆಯಲ್ಲಿ ಜನರೇ ಇಲ್ಲ ಎಂದು ಯಾರೋ ವಿಡಿಯೋ ಹರಿಯಬಿಟ್ಟಿದ್ದಾರೆ. ಇದು ನನಗೆ ಒಳ್ಳೆಯದೇ ಆಯಿತು. ನಾನು ರಸ್ತೆಯನ್ನು ಕ್ರಾಸ್ ಮಾಡುತ್ತಿದ್ದಾಗ ತೆಗೆದ ವಿಡಿಯೋ ಅದಾಗಿತ್ತು. ಈ ಮೂಲಕವಾದರೂ ನಾನು ಗುಜರಾತ್ ಚುನಾವಣಾ ಪ್ರಚಾರಕ್ಕೆ ತೆರಳಿರುವುದು ಎಲ್ಲರಿಗೆ ಗೊತ್ತಾಗುವಂತೆ ಪುಕ್ಕಟೆ ಪ್ರಚಾರ ಸಿಕ್ಕಿತಲ್ಲ ಎಂದು ಸಚಿವರು ನಗೆಯಾಡಿದರು.
ಜಿಲ್ಲೆಯ ಬಂಟ್ವಾಳ ತಾಲೂಕಿನ ಎರಡು ಕಡೆಗಳಲ್ಲಿ ನಡೆದ ಅಹಿತಕರ ಘಟನೆಯಲ್ಲಿ ಮೃತಪಟ್ಟ ಇಬ್ಬರ ಕುಟುಂಬಕ್ಕೆ ರಾಜ್ಯ ಸರ್ಕಾರದಿಂದ ತಲಾ 5 ಲಕ್ಷ ಪರಿಹಾರ ಪ್ರಕಟಿಸಲಾಗಿದೆ. ಮೊತ್ತವನ್ನು ಒಳಾಡಳಿತ ಇಲಾಖೆಯ ಅಧೀನ ಕಾರ್ಯದರ್ಶಿ ಬಿಡುಗಡೆಗೊಳಿಸಿದ್ದಾರೆ. ಈ ಪರಿಹಾರ ಮೊತ್ತವನ್ನು ಶೀಘ್ರವೇ ಸಂತ್ರಸ್ತ ಕುಟುಂಬಕ್ಕೆ ಹಸ್ತಾಂತರಿಸುವುದಾಗಿ ಸಚಿವ ಖಾದರ್ ತಿಳಿಸಿದರು.
Click this button or press Ctrl+G to toggle between Kannada and English