ಮಂಗಳೂರು: ಶಾಲೆ ಮುಂದೆ ಇರುವ ಬಾರ್ ಅಂಡ್ ರೆಸ್ಟೋರೆಂಟ್ ಅನ್ನು ಉದ್ಘಾಟಿಸಲು ಬಂದ ಮೇಯರ್ ಕವಿತಾ ಸನಿಲ್ ಅವರನ್ನು ತಡೆದು, ಪ್ರತಿಭಟನೆ ಮಾಡಿದ ಕುಂಟಿಕಾನ ಸೈಂಟ್ ಆ್ಯನ್ಸ್ ಶಾಲೆಯ ಮಕ್ಕಳು ಹಾಗೂ ಶಿಕ್ಷಕರು, ಬಾರ್ ಮುಚ್ಚುವಂತೆ ಮಕ್ಕಳ ಹಕ್ಕು ರಕ್ಷಣಾ ಸಮಿತಿಗೆ ಪೋಸ್ಟ್ ಕಾರ್ಡ್ ಚಳವಳಿ ಮೂಲಕ ಆಗ್ರಹಿಸುತ್ತಿದ್ದಾರೆ.
ಶಾಲೆಯಿಂದ ನೂರು ಮೀಟರ್ ದೂರದಲ್ಲಿ ಮದ್ಯದಂಗಡಿ ಇರುಬೇಕೆಂದು ಸುಪ್ರೀಂಕೋರ್ಟ್ ಆದೇಶವಿದೆ. ಅಷ್ಟೇ ಅಲ್ಲ, ನೂರು ಮೀಟರ್ ವ್ಯಾಪ್ತಿಯೊಳಗೆ ತಂಬಾಕು ಉತ್ಪಾದನೆ ಅಥವಾ ಅಮಲು ಪದಾರ್ಥಗಳ ಜಾಹಿರಾತು, ಮಾರಾಟ ಮಾಡುವುದನ್ನೂ ನಿಷೇಧಿಸಲಾಗಿದೆ. ಆದರೆ, ಈ ಆದೇಶವನ್ನೇ ಗಾಳಿಗೆ ತೂರಿ ಅಬಕಾರಿ ಇಲಾಖೆ 80 ಮೀಟರ್ ವ್ಯಾಪ್ತಿಯೊಳಗಿರುವ ಮದ್ಯದಂಗಡಿ ತೆರೆಯಲು ಅನುಮತಿ ನೀಡಿತ್ತು.
ಕಳೆದ ಡಿಸೆಂಬರ್ 7ರಂದು ಲಕ್ಷ್ಮಣ ಶೆಟ್ಟಿಯವರಿಗೆ ಸೇರಿದ ಕುಂಟಿಕಾನದಲ್ಲಿರುವ ಬಾರ್ ಉದ್ಘಾಟನೆ ಸಂದರ್ಭದಲ್ಲಿ, ಸೈಂಟ್ ಆ್ಯನ್ಸ್ ಶಾಲೆಯ ವಿದ್ಯಾರ್ಥಿಗಳು, ಪೋಷಕರು ಹಾಗೂ ಶಿಕ್ಷಕರು ಇದು ಕಾನೂನು ಉಲ್ಲಂಘನೆ ಎಂದು ಮೇಯರ್ ಅವರಿಗೆ ಮನದಟ್ಟು ಮಾಡಿದರು. ಇದರಿಂದ ಉದ್ಘಾಟನಾ ಸಮಾರಂಭದಲ್ಲೇ ತೆರಳಿದ ಮೇಯರ್ ಈ ಬಗ್ಗೆ ತನಗೆ ವಿವರವಾದ ಮಾಹಿತಿ ಬೇಕೆಂದು ಕೇಳಿದ್ದರು.
ಆದರೆ, ಅವರಿಗೆ ಮಾಹಿತಿ ಲಭ್ಯವಾಗಿದೆಯೋ ಇಲ್ಲವೋ ಗೊತ್ತಿಲ್ಲ. ಇತ್ತ ಶಾಲೆಯ ಆಡಳಿತ ಮಂಡಳಿ ಜಿಲ್ಲಾಧಿಕಾರಿ ಹಾಗೂ ಅಬಕಾರಿ ಆಯುಕ್ತರಿಗೂ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಮಕ್ಕಳ ಹಕ್ಕು ರಕ್ಷಣಾ ಸಮಿತಿ ಅಧ್ಯಕ್ಷರಿಗೆ ಕಾರ್ಡ್ ಬರೆಯುವ ಮೂಲಕ ತಮ್ಮ ಚಳವಳಿಯನ್ನು ಮುಂದುವರಿಸಿದ್ದಾರೆ.
Click this button or press Ctrl+G to toggle between Kannada and English