ಉಳಿತಾಯ ಮನೋಭಾವದಿಂದ ಬದುಕು ಸದೃಢವಾಗಲು ಸಾಧ್ಯ: ಡಾ. ಡಿ. ವೀರೇಂದ್ರ ಹೆಗ್ಗಡೆ

11:27 AM, Monday, December 18th, 2017
Share
1 Star2 Stars3 Stars4 Stars5 Stars
(5 rating, 1 votes)
Loading...

virendra-hegdeಮಂಗಳೂರು: ಒಬ್ಬ ವ್ಯಕ್ತಿ ತನ್ನ ದುಡಿಮೆಯಲ್ಲಿ ಕಿಂಚಿತ್ತಾದರೂ ಉಳಿತಾಯ ಮಾಡುವುದರಿಂದ ಮುಂದಿನ ಬದುಕು ಸದೃಢವಾಗಲು ಹಾಗೂ ಸಣ್ಣ ಮೊತ್ತದ ಆರೋಗ್ಯ ವಿಮೆ ಮಾಡಿಸುವುದರಿಂದ ಕಾಯಿಲೆ ಬಂದ ಸಂದರ್ಭ ಚಿಕಿತ್ಸೆಗೆ ಸಹಾಯವಾಗುತ್ತದೆ. ಉತ್ತಮ ಆರೋಗ್ಯ ಹಾಗೆಯೇ ಆಯುಷ್ಯ ಗಟ್ಟಿಯಾಗಿರಬೇಕಾದರೆ ಸಣ್ಣ ಉಳಿತಾಯ ಹಾಗೂ ಆರೋಗ್ಯ ವಿಮೆ ಅತ್ಯಗತ್ಯವಾಗಿದ್ದು, ಚಿಕಿತ್ಸೆಯ ಸಂದರ್ಭ ಹಣಕ್ಕಾಗಿ ಕಷ್ಟಪಡುವುದಕ್ಕೆ ಮುಕ್ತಿ ಕೊಡಬಹುದು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.

ಪೊಲದವರ ಯಾನೆ ಗಟ್ಟಿಯವರ ಸಮಾಜ ಸೇವಾ ಸಂಘದ ಆಶ್ರಯದಲ್ಲಿ ತೊಕ್ಕೊಟ್ಟು ಕಾಪಿಕಾಡಿನ ಗಟ್ಟಿ ಸಮಾಜ ಭವನದಲ್ಲಿ ರವಿವಾರ ನಡೆದ ಗಟ್ಟಿ ಸಮಾಜ ಸಮಾವೇಶ ಹಾಗೂ ಗಟ್ಟಿ ಸಮಾಜ ಭವನದ ದಶಮಾನೋತ್ಸವ ಕಾರ್ಯಕ್ರಮ ಉದ್ಘಾಟಿಸಿ, ಸ್ಮರಣ ಸಂಚಿಕೆ ‘ಪಿಂಗಾರದ ಗಿಂಡೆ; ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಸ್ವಾತಂತ್ರ್ಯ ಪೂರ್ವದಲ್ಲಿ ಬಡವ ಶ್ರೀಮಂತರಲ್ಲಿ ದೊಡ್ಡ ಅಂತರ ಇತ್ತಾದರೂ ಸ್ವಾತಂತ್ರ್ಯ ನಂತರ ಆ ಅಂತರ ಬಹಳಷ್ಟು ಕಡಿಮೆ ಆಗಿದ್ದು ಸಮಾನತೆ ಕಾಣಬಹುದು. ಯಾವುದೇ ಸಮಾಜದ ಆಭಿವೃದ್ಧಿಯಲ್ಲಿ ಶಿಕ್ಷಣ ಪ್ರಮುಖ ಪಾತ್ರ ವಹಿಸುತ್ತಿದ್ದು ಸಮಾಜ ಬಾಂಧವರು ಶೈಕ್ಷಣಿಕವಾಗಿ ಬೆಳೆದಾಗ ತಮ್ಮ ಸಮಾಜವನ್ನು ಯಾವ ರೀತಿ ಮೇಲಿನ ಹಂತಕ್ಕೆ ಕೊಂಡೊಯ್ಯಬಹುದು ಎಂಬ ಚಿಂತನೆ ಆ ಸಮಾಜ ಬಾಂಧವರಲ್ಲಿ ಸಹಜವಾಗಿಯೇ ಮೂಡುತ್ತದೆ ಎಂದು ಹೇಳಿದರು.

ಪೂರ್ವದಲ್ಲಿದ್ದಂತೆ ಸಮಾಜದಲ್ಲಿ ಚತುರ್ವರ್ಣ ಆಶ್ರಮದ ವ್ಯವಸ್ಥೆ ಪ್ರಸ್ತುತ ಕಾಲಘಟ್ಟದಲ್ಲಿ ನಿಂತಿದ್ದು ಸಮಾನತೆ ಬಂದಿದೆ. ಜಾತಿ ಆಧಾರಿತ ಉದ್ಯೋಗ ವ್ಯವಸ್ಥೆ ನಿಂತಿದೆ. ಯಾವುದೇ ಸಮಾಜ ಸಂಘಟಿತವಾದಾಗ ಮಾತ್ರ ಸಮಾಜ ಬಲಿಷ್ಠವಾಗಲು ಸಾಧ್ಯ ಎಂಬ ನಂಬಿಕೆಯಂತೆ ನಾರಿಯರಿಂದ ಸಮಾಜವನ್ನು ಬಲಿಷ್ಠಗೊಳಿಸುವುದು ಸಾಧ್ಯ ಎಂಬುದು ಸತ್ಯ. ಸಮಾನತೆಗೆ ಸಾಕ್ಷಿಯಾಗಿ ಅರ್ಹತೆಯ ಆಧಾರದಲ್ಲಿ ಯಾರು ಯಾವ ಹುದ್ದೆಯನ್ನು ಬೇಕಾದರೂ ಅಲಂಕರಿಸಲು ಅವಕಾಶವಿದೆ ಎಂದರು.

ಅರಣ್ಯ ಸಚಿವ ಬಿ. ರಮನಾಥ ರೈ ಮಾತನಾಡಿ ಪ್ರತಿಯೊಂದು ರಾಜಕೀಯ ಪಕ್ಷಗಳು ಜಾತಿ ಲೆಕ್ಕಾಚಾರದಲ್ಲಿ ತೊಡಗಿಸಿಕೊಂಡಿದೆ. ಒಂದು ಜಾತಿಯಲ್ಲಿ ದೊಡ್ಡ ಸಂಖ್ಯೆಯಲ್ಲಿ ಮತದಾರರು ಇದ್ದರೆ ಅವರಿಗೆ ಪಕ್ಷ ಹೆಚ್ಚಿನ ಅವಕಾಶ ಕೊಟ್ಟಿದ್ದು, ಕಡಿಮೆ ಸಂಖ್ಯೆಯ ಮತದಾರರು ಇರುವ ಜಾತಿಗೆ ಸಣ್ಣ ಸಮಾಜ ಎಂಬ ನೆಲೆಯಲ್ಲಿ ಅರ್ಹತೆ ಇದ್ದರೂ ರಾಜಕೀಯ ಅವಕಾಶದಿಂದ ವಂಚಿತವಾಗಿದೆ. ಹೆಸರು ಮಾತ್ರ ಗಟ್ಟಿ ಸಮಾಜವಾದರೆ ಸಾಲದು ಹೆಸರಿಗೆ ತಕ್ಕಂತೆ ಗಟ್ಟಿ ಸಮಾಜ ಇನ್ನಷ್ಟು ಗಟ್ಟಿಯಾಗಬೇಕು, ಬಲಿಷ್ಠಗೊಳ್ಳಬೇಕಿದೆ ಎಂದು ಆಶಿಸಿದರು.

ಸಚಿವ ಯು.ಟಿ. ಖಾದರ್ ಮಾತನಾಡಿ ಮಕ್ಕಳ ಬಗ್ಗೆ ಕನಸು ಹೊತ್ತ ಪೋಷಕರು ಮಕ್ಕಳಿಗೆ ಸರ್ವವನ್ನೂ ತ್ಯಾಗ ಮಾಡುತ್ತಾರೆ. ತಮ್ಮ ಎಲ್ಲ ಕನಸು ಅದುಮಿಟ್ಟು ಮಕ್ಕಳ ಆಶೆ ಪೂರೈಸುತ್ತಾರೆ. ಹಾಗಾಗಿ ಮಕ್ಕಳು ಪೋಷಕರ ಕಣ್ಣೀರು ಒರೆಸುವ ಕೆಲಸ ಮಾಡಬೇಕು ಹೊರತು ಪೋಷಕರ ಕಣ್ಣಲ್ಲಿ ನೀರು ಬರಿಸುವ ಕೆಲಸ ಮಾಡಬಾರದು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಸಮಾಜಕ್ಕೆ ಗಣನೀಯ ಕೊಡುಗೆ ನೀಡಿದ ಹತ್ತು ಮಂದಿ ಪ್ರಮುಖರಾದ ನಾರಾಯಣ ಗಟ್ಟಿ, ದೇವಪ್ಪ ಗಟ್ಟಿ, ಸುಭದ್ರ ಗಟ್ಟಿ, ಕೃಷ್ಣ ಗಟ್ಟಿ ಸೋಮೇಶ್ವರ, ಕೊರಂತೋಡಿ ರುಕ್ಮಯ ಗಟ್ಟಿ, ದಿ. ಶರವು ಸಂಜೀವ ಗಟ್ಟಿ ಪರವಾಗಿ ಹರೀಶ್ ಗಟ್ಟಿ ಶರವು, ದಿವಂತಗ ಸುಂದರ ಗಟ್ಟಿ ಪರವಾಗಿ ಬಾಲಕೃಷ್ಣ ಗಟ್ಟಿ, ಬೆಂಗಳೂರಿನ ದಿವಂಗತ ಜಗನ್ನಾಥ ಗಟ್ಟಿಯ ಪರವಾಗಿ ನವೀನ್ ಗಟ್ಟಿ ಬೆಂಗಳೂರು, ದಿನೇಶ್ ಗಟ್ಟಿ ಕುತ್ತಾರು ಪರವಾಗಿ ಗುಲಾಬಿ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.

ಸಂಸದ ನಳಿನ್ ಕುಮಾರ್ ಕಟೀಲು, ಬಂಟರ ಯಾನೆ ನಾಡವರ ಮಾತೃ ಸಂಘದ ಮಹಿಳಾ ವಿಭಾಗದ ಅಧ್ಯಕ್ಷೆ ಡಾ. ಆಶಾ ಜ್ಯೋತಿ ರೈ, ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನದ ಆಡಳಿತ ಹಾಗೂ ಸೇವಾ ಟ್ರಸ್ಟ್ ಅಧ್ಯಕ್ಷ ಕಡಂದಲೆ ಸುರೇಶ್ ಭಂಡಾರಿ, ಗಟ್ಟಿ ಸಮಾಜದ ಮೇಲ್ಡೆರು ಎಂ. ನಾರಾಯಣ ಬಿ. ಗಟ್ಟಿ , ನಾಯ್ಗರ ಪ್ರತಿನಿಧಿ ಪದ್ಮನಾಭ ಗಟ್ಟಿ ಬೆಳ್ಮ ಉಪಸ್ಥಿತರಿದ್ದರು.

ಪೊಲದವರ ಯಾನೆ ಗಟ್ಟಿ ಸಮಾಜದ ಅಧ್ಯಕ್ಷ ಪವಿತ್ರ ಕುಮಾರ್ ಗಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಇದಕ್ಕೂ ಮುನ್ನ ಡಾ. ವೀರೇಂದ್ರ ಹೆಗ್ಗಡೆ ಹಾಗೂ ಗಣ್ಯರನ್ನು ತೊಕ್ಕೊಟ್ಟಿನಿಂದ ಕಾಪಿಕಾಡಿನ ವೇದಿಕೆ ತನಕ ಭವ್ಯ ಮೆರವಣಿಗೆಯಲ್ಲಿ ಬರ ಮಾಡಿಕೊಳ್ಳಲಾಯಿತು.

ಸ್ವಾಗತ ಸಮಿತಿ ಸಂಚಾಲಕಿ ಮಮತಾ ಡಿ.ಎಸ್. ಗಟ್ಟಿ ಸ್ವಾಗತಿಸಿದರು. ಧನಲಕ್ಷ್ಮಿ ಗಟ್ಟಿ ಹಾಗೂ ಸೀತಾರಾಮ ಗಟ್ಟಿ ಕಾರ್ಯಕ್ರಮ ನಿರೂಪಿಸಿದರು. ನೀತಾ ಗಟ್ಟಿ ಕುರ್ನಾಡು, ಸುನಿತಾ ಗಟ್ಟಿ ಕುತ್ತಾರು, ಕೃಷ್ಣಪ್ಪ ಗಟ್ಟಿ ಪಿಲಾರು ಸನ್ಮಾನಪತ್ರ ವಾಚಿಸಿದರು. ಪ್ರಧಾನ ಕಾರ್ಯದರ್ಶಿ ನಿತಿನ್ ಗಟ್ಟಿ ಲೇಡಿಹಿಲ್ ವಂದಿಸಿದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English