ಮೂಡುಬಿದಿರೆ: ಸುಮಾರು 10 ದಿನದ ಹಿಂದೆ ನಿಗೂಢವಾಗಿ ನಾಪತ್ತೆಯಾಗಿರುವ ದರೆಗುಡ್ಡೆ ಗ್ರಾಮದ ಐತಪ್ಪಭಂಡಾರಿ ಎಂಬವರ ಪುತ್ರಿ ಪ್ರಿಯಾಂಕಾ (25) ಬರೆದಿದ್ದಾಳೆ ಎನ್ನಲಾದ ಪತ್ರವೊಂದು ಮನೆಮಂದಿಗೆ ಶನಿವಾರ ಬಂದಿದ್ದು, ಅದೀಗ ತೀವ್ರ ಕುತೂಹಲ ಸೃಷ್ಟಿಸಿದೆ.
ಬಂಟ್ವಾಳ ತಾಲೂಕಿನ ಪಜೀರ್ ಅಂಚೆ ಕಚೇರಿಯ ಸಹಿಯೊಂದಿಗೆ ಬಂದ ಈ ಪತ್ರದಲ್ಲಿ ‘ನನ್ನನ್ನು ಹುಡುಕುವ ಪ್ರಯತ್ನ ಮಾಡಬೇಡಿ. ನಾನು ಇನೋಳಿಯ ಯುವಕನೊಂದಿಗೆ ಸ್ವ ಇಚ್ಛೆಯಿಂದ ತೆರಳಿದ್ದೇನೆ. ಕೆಲವೇ ದಿನಗಳಲ್ಲಿ ನಾವು ಜೊತೆಯಾಗಿ ನ್ಯಾಯಾಲಯಕ್ಕೆ ಹಾಜರಾಗುವೆವು’ ಎಂದು ಬರೆದಿದೆ ಎಂದು ಹೇಳಲಾಗುತ್ತಿದೆ. ಆದರೆ, ಈ ಪತ್ರದಲ್ಲಿರುವ ಕೈ ಬರಹ ಮಗಳದ್ದಲ್ಲ ಎಂದು ಯುವತಿಯ ಮನೆ ಮಂದಿ ಹೇಳಿದ್ದಾರೆ.
ಪ್ರಕರಣದ ದಾರಿ ತಪ್ಪಿಸಲು ಯಾರೋ ಇಂತಹ ಪತ್ರ ಬರೆದಿರುವ ಬಗ್ಗೆಯೂ ಸಂಶಯ ವ್ಯಕ್ತವಾಗಿದೆ. ಈ ಮಧ್ಯೆ ಪತ್ರಿಕೆಯೊಂದಿಗೆ ಮಾತನಾಡಿದ ಮೂಡುಬಿದಿರೆ ಇನ್‌ಸ್ಪೆಕ್ಟರ್, ಐತಪ್ಪ ಭಂಡಾರಿಯ ಮನೆಗೆ ಬಂದಿದೆ ಎನ್ನಲಾದ ಪತ್ರದ ಬಗ್ಗೆ ತನಿಖೆ ನಡೆಸಲಾಗುವುದು ಎಂದಿದ್ದಾರೆ.
ಪ್ರಿಯಾಂಕಾಳಿಗೆ ವಿದೇಶದಲ್ಲಿ ಉದ್ಯೋಗದಲ್ಲಿರುವ ಕೊಲ್ಲೂರಿನ ಯುವಕನೊಂದಿಗೆ ಡಿ.11ರಂದು ವಿವಾಹ ನಿಗದಿಯಾಗಿತ್ತು. ಅಲ್ಲದೆ ಡಿ. 9ರಂದು ಮೆಹಂದಿಗೆ ಸಿದ್ಧತೆ ನಡೆದಿತ್ತು. ಆದರೆ ಡಿ.8ರಂದು ರಾತ್ರಿ ಪ್ರಿಯಾಂಕಾ ನಿಗೂಢವಾಗಿ ನಾಪತ್ತೆಯಾಗಿದ್ದಳು. ಈಕೆ ಇನೋಳಿಯ ಯುವಕನ ಜೊತೆಗೆ ಪರಾರಿಯಾಗಿದ್ದಾಳೆ ಎಂಬ ಆರೋಪ ಕೇಳಿ ಬಂದ ಕಾರಣ ಪೊಲೀಸರು ತನಿಖೆ ನಡೆಸಿದರೂ ಕೂಡ ಪ್ರಯೋಜನವಾಗಿಲ್ಲ.
Click this button or press Ctrl+G to toggle between Kannada and English