ಉಡುಪಿ: ಸಮವಸ್ತ್ರ ಧಾರಣೆ ಮಾಡುವ ಸರಕಾರಿ ಇಲಾಖೆಗಳ ನೇಮಕಾತಿ ಸಂದರ್ಭಗಳಲ್ಲಿ ಪ್ರತಿಭಾವಂತ ಕ್ರೀಡಾಪಟುಗಳಿಗೆ ಅವಕಾಶ ದೊರಕಿಸುವ ನಿಟ್ಟಿನಲ್ಲಿ ರಾಜ್ಯದ ಕ್ರೀಡಾ ನೀತಿಯನ್ನು ರೂಪಿಸುವ ಕುರಿತು ಗಂಭೀರ ಚಿಂತನೆ ನಡೆಸಲಾಗಿದೆ ಎಂದು ರಾಜ್ಯ ಮೀನುಗಾರಿಕೆ, ಯುವ ಸಬಲೀಕರಣ ಹಾಗೂ ಕ್ರೀಡೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ತಿಳಿಸಿದ್ದಾರೆ.
ಉಡುಪಿ ಜಿಲ್ಲಾ ಗೃಹರಕ್ಷಕದಳದ ಆಶ್ರಯದಲ್ಲಿ ಉಡುಪಿ ಚಂದು ಮೈದಾನ ದಲ್ಲಿ ಹಮ್ಮಿಕೊಳ್ಳಲಾದ ಮೂರು ದಿನಗಳ ಪಶ್ಚಿಮ ವಲಯ ಮಟ್ಟದ ವೃತ್ತಿಪರ ಕ್ರೀಡಾಕೂಟದಲ್ಲಿ ಭಾಗವಹಿಸಿ ಅರು ಶನಿವಾರ ಮಾತನಾಡುತಿದ್ದರು.
ಕರ್ತವ್ಯದಲ್ಲಿ ವೃತ್ತಿಪರತೆ ಕಾಯ್ದುಕೊಳ್ಳಲು ದೈಹಿಕ ಸಾಮರ್ಥ್ಯ ಇರಬೇಕು. ದೈಹಿಕ ಸಾಮರ್ಥ್ಯ ಕಾಯ್ದುಕೊಳ್ಳಲು ನಿಯಮಿತವಾದ ಕ್ರೀಡಾ ವ್ಯಾಯಾಮ ಗಳು ಅಗತ್ಯ. ಪೊಲೀಸ್, ಅರಣ್ಯ, ಗೃಹರಕ್ಷಕದಳ ಇಲಾಖೆಗಳಲ್ಲಿ ಈ ರೀತಿಯ ನಿಯಮಿತವಾದ ಕ್ರೀಡಾ ಅಭ್ಯಾಸಗಳು ನಡೆಯುತ್ತಿರುವುದರಿಂದಾಗಿ ಅಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ದೈಹಿಕ ಸಾಮರ್ಥ್ಯಗಳು ಇತರ ಇಲಾಖೆಗಳಿಗಿಂತ ಹೆಚ್ಚಾಗಿರುತ್ತದೆ. ಇದು ನಮ್ಮ ಮಾನಸಿಕ ಆರೋಗ್ಯವನ್ನು ಕೂಡ ಹೆಚ್ಚಿಸುತ್ತದೆ ಎಂದರು.
ಗೃಹರಕ್ಷಕದಳ ಜಿಲ್ಲಾ ಕಮಾಂಡೆಂಟ್ ಡಾ.ಪ್ರಶಾಂತ ಶೆಟ್ಟಿ, ಜಿಲ್ಲಾ ಸೆಕಂಡ್ ಇನ್ ಕಮಾಂಡ್ ರಾಜೇಶ್ ಕೆ.ಸಿ., ಮಣಿಪಾಲ ಕೆಎಂಸಿ ಆಸ್ಪತ್ರೆಯ ಹಿರಿಯ ವೈದ್ಯ ಡಾ.ಪದ್ಮರಾಜ್ ಹೆಗ್ಡೆ, ಬ್ರಹ್ಮಾವರ ಜಿ.ಎಂ.ವಿದ್ಯಾನಿಕೇತನ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ, ಜಿಲ್ಲಾ ಡೆಪ್ಯೂಟಿ ಕಮಾಂಡೆಂಟ್ ರಮೇಶ್ ಉಪಸ್ಥಿತರಿದ್ದರು.
Click this button or press Ctrl+G to toggle between Kannada and English