ಗುಜರಾತ್ ಬಳಿಕ ಪ್ರಧಾನಿ ಮಂತ್ರಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಕರ್ನಾಟದ ಮೇಲೆ ಕಣ್ಣಿಟ್ಟಿದ್ದಾರೆ. ಬಿಜೆಪಿಯನ್ನು ಕರ್ನಾಟದಲ್ಲಿ ಅಧಿಕಾರಕ್ಕೆ ತರುವುದು ಇವರ ಗುರಿ. ಆದರೆ ಯುವ ನಾಯಕ ರಾಹುಲ್ ಗಾಂಧಿ ಅವರು ಮೋದಿ-ಶಾ ಜೋಡಿಗೆ ಸವಾಲಾಗಿ ಚುನಾವಣಾ ಆಖಾಡಕ್ಕೆ ಧುಮುಕಲಿದ್ದಾರೆ. ಗುಜರಾತ್ ನಂತೆ ಮುಂದೆ ಕರ್ನಾಟಕದಲ್ಲೂ ಮೊಳಗಲಿದೆ ಚುನಾವಣಾ ರಣಕಹಳೆ.
ಡಿಸೆಂಬರ್ ಅಂತ್ಯದೊಳಗೆ ಮತ್ತು ಜನವರಿ ಮೊದಲ ವಾರ ಕರ್ನಾಟಕದಲ್ಲಿ ಕಾಂಗ್ರೆಸ್ ನ ಸಮಾವೇಶ, ರ್ಯಾಲಿಗಳಲ್ಲಿ ರಾಹುಲ್ ಗಾಂಧಿ ಪಾಲ್ಗೊಳ್ಳಲಿದ್ದಾರೆ. ಕರ್ನಾಟದಲ್ಲಿ ಕಾಂಗ್ರೆಸ್ ಪಕ್ಷವನ್ನು ಮರಳಿ ಅಧಿಕಾರಕ್ಕೆ ತರುವ ಯೋಜನೆಯೊಂದಿಗೆ ರಾಹುಲ್ ಗಾಂಧಿ ಅವರು ಚಿಕ್ಕಮಗಳೂರು, ಬಳ್ಳಾರಿಯಲ್ಲಿ ಕಾಂಗ್ರೆಸ್ ನ ಬೃಹತ್ ಸಮಾವೇಶ ನಡೆಸುವ ಮೂಲಕ ಕಾಂಗ್ರೆಸ್ ನ ಚುನಾವಣಾ ತಯಾರಿಗೆ ಭರ್ಜರಿ ಚಾಲನೆ ನೀಡಲಿದ್ದಾರೆ ಎಂದು ತಿಳಿದು ಬಂದಿದೆ.
ಗುಜರಾತ್ ಚುನಾವಣೆಯಲ್ಲಿ ಕಾಂಗ್ರೆಸ್ ನ್ನು ಬೇರು ಸಮೇತ ಕಿತ್ತು ಎಸೆಯುವ ಸಂಕಲ್ಪ ಮಾಡಿದ್ದ ಬಿಜೆಪಿಯ ಮೋದಿ-ಶಾ ತಂತ್ರವನ್ನು ವಿಫಲಗೊಳಿಸಿದ್ದ ರಾಹುಲ್ ಗಾಂಧಿ ಅವರು ಕಾಂಗ್ರೆಸ್ ಗೆ ಗುಜರಾತ್ ನಲ್ಲಿ ಏಕಾಂಗಿ ಹೋರಾಟದ ಮೂಲಕ ಗರಿಷ್ಠ ಸ್ಥಾನಗಳನ್ನು ತಂದು ಕೊಟ್ಟಿದ್ದಾರೆ.
ದೇಶದ ವಿವಿಧ ರಾಜ್ಯಗಳ ಚುನಾವಣೆಗಳಲ್ಲಿ ಕಾಂಗ್ರೆಸ್ ಸತತ ಸೋಲು ಅನುಭವಿಸುತ್ತಿದ್ದರೂ , ರಾಹುಲ್ ಗಾಂಧಿ ಇದರಿಂದ ವಿಚಲಿತರಾಗದೆ ಕಳೆದ ನಾಲ್ಕು ತಿಂಗಳ ಹಿಂದೆ ಗುಜರಾತ್ ನ ಚುನಾವಣಾ ಪ್ರಚಾರಕ್ಕೆ ಧುಮುಕಿದ್ದರು. ರಾಹುಲ್ ಗಾಂಧಿ ತನ್ನ ಶಕ್ತಿ, ಸಾಮರ್ಥ್ಯವನ್ನು ಗುಜರಾತ್ ನಲ್ಲಿ ತೋರಿಸಿಕೊಡುವ ಮೂಲಕ ಬಿಜೆಪಿಗೆ ನಡುಕವನ್ನುಂಟು ಮಾಡಿದ್ದಾರೆ. ತನಗೆ ಎದುರಾಳಿ ಇಲ್ಲ ಎಂದು ಬೀಗುತ್ತಿದ್ದ ಬಿಜೆಪಿಗೆ ರಾಹುಲ್ ಹೊಸ ಸವಾಲಾಗಿ ಕಾಣಿಸಿಕೊಂಡಿದ್ದಾರೆ.
ಗುಜರಾತ್ ನಲ್ಲಿ ಮೋದಿ ಅಲೆಯ ಮುಂದೆ ಕಾಂಗ್ರೆಸ್ ಗೆ ಬಹುಮತ ಪಡೆಯಲು ಸಾಧ್ಯವಾಗದಿದ್ದರೂ, ಸ್ವಾತಂತ್ರ್ಯ ನಂತರ ನಡೆದ ಚುನಾವಣೆಯಲ್ಲಿ ಗುಜರಾತ್ ನಲ್ಲಿ ಅತ್ಯಂತ ಹೆಚ್ಚು ಸ್ಥಾನಗಳನ್ನು ಜಯಿಸಿದ ವಿಪಕ್ಷ ಎಂಬ ಖ್ಯಾತಿಯನ್ನು ಕಾಂಗ್ರೆಸ್ ಗೆ ತಂದು ಕೊಡುವಲ್ಲಿ ರಾಹುಲ್ ಗಾಂಧಿ ಯಶಸ್ವಿಯಾಗಿದ್ದಾರೆ.