ಗಣಿ ಧಣಿ ಜನಾರ್ದನ ರೆಡ್ಡಿಗೆ ಸೆಪ್ಟೆಂಬರ್ 19ರವರೆಗೆ ನ್ಯಾಯಾಂಗ ಬಂಧನ

4:11 PM, Tuesday, September 6th, 2011
Share
1 Star2 Stars3 Stars4 Stars5 Stars
(6 rating, 2 votes)
Loading...

Reddy-Arest

ಬೆಂಗಳೂರು : ಶಾಸಕ ಜನಾರ್ದನ ರೆಡ್ಡಿ ಮತ್ತು ಅವರ ಓಬಳಾಪುರಂ ಎಂಡಿ ಶ್ರೀನಿವಾಸ ರೆಡ್ಡಿ ಅವರನ್ನು ಸೋಮವಾರ ಮುಂಜಾನೆ ಬಳ್ಳಾರಿಯಲ್ಲಿ ಬಂಧಿಸುವ ಜೊತೆಗೆ, ಸಿಬಿಐ ಒಂದಷ್ಟು ಮಹತ್ವದ ದಾಖಲೆಗಳನ್ನೂ ವಶಪಡಿಸಿಕೊಂಡಿದೆ. ರೆಡ್ಡಿಗಳಿಗೆ ಸೆಪ್ಟೆಂಬರ್ 19ರವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದ್ದು, ಅವರು ಸಲ್ಲಿಸಿರುವ ಜಾಮೀನು ಅರ್ಜಿಯ ವಿಚಾರಣೆಯನ್ನು ಸೆ.7ಕ್ಕೆ ನಿಗದಿಪಡಿಸಲಾಗಿದೆ

ಜನಾರ್ದನ ರೆಡ್ಡಿ ಬ್ಯಾಂಕ್ ಖಾತೆಗಳು ಜಫ್ತಿ ಮಾಡಲಾಗಿದ್ದು ಮನೆಯಲ್ಲಿದ್ದ 3 ಕೋಟಿ ರೂಪಾಯಿಗೂ ಹೆಚ್ಚು ನಗದು ಹಾಗೂ 30 ಕೆಜಿಗೂ ಹೆಚ್ಚು ಚಿನ್ನವನ್ನೂ ಸಿಬಿಐ ತನ್ನ ವಶಕ್ಕೆ ತೆಗೆದುಕೊಂಡಿದೆ.ಇಷ್ಟೇ ಅಲ್ಲದೆ ಜನಾರ್ದನರೆಡ್ಡಿಗೆ ಸೇರಿದ 11 ಕಾರುಗಳು ಮತ್ತು 1 ಹೆಲಿಕಾಪ್ಟರ್‌ನ್ನು ಜಪ್ತಿ ಮಾಡಲಾಗಿದೆ.

ಜನಾರ್ದನ ರೆಡ್ಡಿಯಷ್ಟೇ ಅಲ್ಲದೆ ಓಬಳಾಪುರಂ ಮೈನಿಂಗ್‌ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಶ್ರೀನಿವಾಸ ರೆಡ್ಡಿ ಮನೆಯಲ್ಲಿ 1.5 ಕೋಟಿ ನಗದು ಹಾಗೂ ಮಹತ್ವದ ದಾಖಲೆ ವಶಪಡಿಸಿಕೊಂಡಿರುವುದಾಗಿ ಸಿಬಿಐ ದೆಹಲಿಯಲ್ಲಿ ತಿಳಿಸಿದೆ.. ಅಲ್ಲದೆ 14 ದಿನಗಳ ಕಾಲ ಸಿಬಿಐ ಕಸ್ಟಡಿ ವಿಧಿಸಿ ನ್ಯಾಯಾಲಯ ತೀರ್ಪು ನೀಡಿದೆ.

ರೆಡ್ಡಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ಕಲಂ 120 ಬಿ, 420, 379, 411, 427 ಹಾಗೂ 447ರ ಅನ್ವಯ ಮೊಕದ್ದಮೆ ದಾಖಲಿಸಲಾಗಿದೆ. ಅಷ್ಟು ಮಾತ್ರವಲ್ಲದೆ 1988ರ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯ ಸೆಕ್ಷನ್‌ 13 (1), 13 (2)ಡಿ ಹಾಗೂ 1927ರ ಭಾರತೀಯ ಅರಣ್ಯ ಕಾಯ್ದೆ ಮತ್ತು 1957ರ ಗಣಿ ಮತ್ತು ಖನಿಜ ನಿಯಂತ್ರಣ ಕಾಯ್ದೆ ಅನ್ವಯವೂ ಬಂಧಿತರ ವಿರುದ್ದ ಪ್ರಕರಣ ದಾಖಲಿಸಲಾಗಿದೆ ಎಂದು ಸಿಬಿಐ ವಿವರಣೆ ನೀಡಿದೆ.

ರೆಡ್ಡಿಗಳ ಪರ 11 ಮಂದಿ ವಕೀಲರಿಂದ ವಾದ ನಡೆಯುತ್ತಿದ್ದು ರಾಜಕೀಯ ದುರುದ್ದೇಶದಿಂದ ಬಂಧನಕ್ಕೆ ಮುನ್ನ ಯಾವುದೇ ಸೂಕ್ತ ಕ್ರಮಗಳನ್ನು ಅನುಸರಿಸದೆ ಬಂದಿಸಲಾಗಿದೆ ಎಂದು ಆರೋಪಿಸಿದ್ದಾರೆ. ಸುಪ್ರೀಂ ಕೋರ್ಟಿನಲ್ಲಿ ಪ್ರಕರಣ ವಿಚಾರಣೆ ಬಾಕಿ ಇರುವಾಗ ಸಿಬಿಐ ತನ್ನ ವ್ಯಾಪ್ತಿಯನ್ನು ಮೀರಿ ಬಂಧಿಸಿದೆ ಎಂದು ಹೇಳಿದ್ದಾರೆ.

ಡಿಸೆಂಬರ್‌ನಲ್ಲಿ ಆಂಧ್ರಪ್ರದೇಶ ಸರ್ಕಾರವು ಅಕ್ರಮ ಗಣಿಗಾರಿಕೆ ಪ್ರಕರಣವನ್ನು ಸಿಬಿಐಗೆ ವಹಿಸಿತು. ಆದರೆ ಅದರ ವಿರುದ್ದ ಆಂಧ್ರಪ್ರದೇಶ ಹೈಕೋರ್ಟ್‌ ತಡೆಯಾಜ್ಞೆ ನೀಡಿತ್ತು. ಈ ತಡೆಯಾಜ್ಞೆ ತೆರವುಗೊಳಿಸುವ ಕಾನೂನು ಹೋರಾಟ ಒಂದು ವರ್ಷ ನಡೆಯಿತು.

2010 ಡಿಸೆಂಬರ್‌ನಲ್ಲಿ ಆಂಧ್ರ ಹೈಕೋರ್ಟ್‌, ಸಿಬಿಐ ಅಕ್ರಮ ಗಣಿಗಾರಿಕೆಗೆ ಸೀಮಿತಗೊಳಿಸಿ ಮಾತ್ರ ತನಿಖೆ ನಡೆಸಬೇಕು. ಕರ್ನಾಟಕ ಮತ್ತು ಆಂಧ್ರದ ನಡುವಿನ ಗಡಿ ವಿವಾದಕ್ಕೆ ಕೈ ಹಾಕಬಾರದು. ಗಡಿ ವಿಚಾರವನ್ನು ಸುಪ್ರೀಂ ಕೋರ್ಟ್‌ ಪರಿಶೀಲಿಸುತ್ತಿದೆ ಎಂದು ಆದೇಶ ನೀಡಿತು.

ತಡೆಯಾಜ್ಞೆ ತೆರವಿನ ನಂತರ ಚುರುಕಾದ ಸಿಬಿಐ, ಈವರೆಗೆ 1530 ದಾಖಲೆಗಳನ್ನು ಪರಿಶೀಲನೆ ನಡೆಸಿದೆ. 112 ಕಬ್ಬಿಣದ ಅದಿರಿನ ಮಾದರಿಯ ಪರೀಕ್ಷೆ ನಡೆಸಿರುವುದು ಮಾತ್ರವಲ್ಲದೆ 86 ಜನ ಶಂಕಿತರು ಹಾಗೂ ಸಾಕ್ಷಿಗಳ ವಿಚಾರಣೆ ನಡೆಸಿದೆ.

ಬೆಂಗಳೂರಿನ ವಿಂಡ್ಸರ್ ಮ್ಯಾನರ್‌ನಲ್ಲಿರುವ ಶ್ರೀರಾಮುಲು ನಿವಾಸದ ಮೇಲೆಯೂ ದಾಳಿ ನಡೆದಿದೆ.

ರೆಡ್ಡಿ ಬೆಂಬಲಿಗರು ಬಳ್ಳಾರಿಯಲ್ಲಿ ಟೈರಿಗೆ ಬೆಂಕಿ ಹಚ್ಚಿ ಪ್ರತಿಭಟನೆ ಆರಂಭಿಸಿದ್ದಾರೆ. ರೆಡ್ಡಿ ಬಂಧನಕ್ಕೆ ಕಾಂಗ್ರೆಸ್ ಕಾರಣ, ಎಂದು ಬಳ್ಳಾರಿಯಲ್ಲಿ ಬೆಂಬಲಿಗರು ಸೋನಿಯಾ ಗಾಂಧಿ ಪ್ರತಿಕೃತಿ ಸುಟ್ಟ ಹಾಕಿದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English