ಶಿರಾಡಿ ಕಾಮಗಾರಿ: ಪರ್ಯಾಯ ರಸ್ತೆ – ಡಿಸಿ ಸ್ಥಳ ಸಮೀಕ್ಷೆ

6:14 PM, Wednesday, December 20th, 2017
Share
1 Star2 Stars3 Stars4 Stars5 Stars
(No Ratings Yet)
Loading...

minister-meetingಮಂಗಳೂರು :ಶಿರಾಡಿ ಘಾಟಿ ಎರಡನೇ ಹಂತದ ಕಾಮಗಾರಿ ಸಂದರ್ಭದಲ್ಲಿ ವಾಹನ ಸಂಚಾರಕ್ಕೆ ರಸ್ತೆ ಬಂದ್ ಮಾಡುವ ಕುರಿತು ಇಲ್ಲವೇ ಲಘು ವಾಹನಗಳಿಗೆ ಸಂಚಾರಕ್ಕೆ ಅನುವು ಮಾಡುವ ಬಗ್ಗೆ ಪರಿಶೀಲಿಸಲು ಜಿಲ್ಲಾಧಿಕಾರಿಗಳು ಮತ್ತು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸಮೀಕ್ಷೆ ನಡೆಸಿದ ಬಳಿಕ ತೀರ್ಮಾನಿಸಲಾಗುವುದು ಎಂದು ಅರಣ್ಯ ಪರಿಸರ ಹಾಗೂ ಜೀವಿಶಾಸ್ತ್ರ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ತಿಳಿಸಿದ್ದಾರೆ.

ಅವರು ಬುಧವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಈಗಾಗಲೇ ಕಾಮಗಾರಿ ಬಹಳಷ್ಟು ವಿಳಂಭವಾಗಿದೆ. ರಸ್ತೆಯ ಗುಣಮಟ್ಟ ಹಾಗೂ ಸಾರ್ವಜನಿಕರ ಹಿತಾಸಕ್ತಿ ಗಮನಿಸಿ ಕಾಮಗಾರಿ ಕೈಗೆತ್ತಿಕೊಳ್ಳಬೇಕು. ಈ ನಿಟ್ಟಿನಲ್ಲಿ ಹೆಚ್ಚು ವಿಳಂಭ ಮಾಡದೇ ಕಾಮಗಾರಿಯನ್ನು ಆರಂಭಿಸುವಂತೆ ಅವರು ಸೂಚಿಸಿದರು. ಶಿರಾಡಿ ರಸ್ತೆ ಬಂದ್ ಮಾಡಿದರೆ, ಪರ್ಯಾಯವಾಗಿ ವಾಹನ ಸಂಚಾರಕ್ಕೆ ಗುರುತಿಸಿರುವ ರಸ್ತೆಗಳಲ್ಲಿರುವ ಸೇತುವೆಗಳು ಭಾರೀ ವಾಹನಗಳ ಸಾಮಥ್ರ್ಯವನ್ನು ಹೊಂದಿರುವುದಿಲ್ಲ. ಇದರಿಂದ ಅಲ್ಲಿಯೂ ಸಮಸ್ಯೆಗಳಾಗಬಹುದು ಎಂದು ಸಚಿವ ರಮಾನಾಥ ರೈ ತಿಳಿಸಿದರು.

ಆಹಾರ ಸಚಿವ ಯು.ಟಿ. ಖಾದರ್ ಮಾತನಾಡಿ, ಶಿರಾಡಿ ಘಾಟಿ ರಸ್ತೆಯ ಕಾಮಗಾರಿ ಆರಂಭಿಸುವದಕ್ಕೂ ಮೊದಲು ಚಾರ್ಮಾಡಿ ಘಾಟಿ ರಸ್ತೆಯ ಅಭಿವೃದ್ಧಿ ಹಾಗೂ ಅಗಲೀಕರಣ ಕಾಮಗಾರಿ ನಡೆಸಬೇಕು ಎಂದು ಹೇಳಿದರು.

ಪುತ್ತೂರು ಶಾಸಕಿ ಶಕುಂತಳಾ ಶೆಟ್ಟಿ ಮಾತನಾಡಿ, ಅಡ್ಡಹೊಳೆಯಿಂದ ಕೆಂಪುಹೊಳೆಯವರೆಗೆ ಸಂಪೂರ್ಣವಾಗಿ ಏಕಕಾಲದಲ್ಲಿ ರಸ್ತೆ ಬಂದ್ ಮಾಡುವ ಅಗತ್ಯವಿಲ್ಲ. ಘಾಟಿಯಿಂದ ಗುಂಡ್ಯದವರೆಗೆ ರಸ್ತೆ ಸಂಚಾರಕ್ಕೆ ಮುಕ್ತವಾಗಿರಿಸಿ, ಕೈಕಂಬ-ಕಡಬ-ಉಪ್ಪಿನಂಗಡಿ ಮಾರ್ಗದಲ್ಲಿ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡಬಹುದು. ಸಣ್ಣಪುಟ್ಟ ಮೋರಿಗಳ ಕಾಮಗಾರಿಗಳ ಸಂದರ್ಭದಲ್ಲಿ ಪಕ್ಕದಲ್ಲಿ ವಾಹನ ಸಂಚಾರಕ್ಕೆ ಅವಕಾಶ ನೀಡಬಹುದು ಎಂದು ಹೇಳಿದರು.

ಜಿಲ್ಲಾಧಿಕಾರಿ ಡಾ. ಸಸಿಕಾಂತ್ ಸೆಂಥಿಲ್ ಅವರು ಮಾತನಾಡಿ, ಶಿರಾಡಿ ಘಾಟಿ ರಸ್ತೆ ಕಾಮಗಾರಿ ತ್ವರಿತವಾಗಿ ಪೂರ್ಣಗೊಳ್ಳುವ ಸಲುವಾಗಿ ಲೋಕೋಪಯೋಗಿ ಇಲಾಖೆಗೆ ನಾನ್ ಸಿಆರ್‍ಝಡ್ ವ್ಯಾಪ್ತಿಯಲ್ಲಿ ಎರಡು ಮರಳು ಬ್ಲಾಕ್‍ಗಳನ್ನು ಹಂಚಿಕೆ ಮಾಡಲಾಗುವುದು ಎಂದರು.

ಲೋಕೋಪಯೋಗಿ ಇಲಾಖೆ ಕಾರ್ಯಕಾರಿ ಅಭಿಯಂತರ(ರಾ.ಹೆ) ರಮೇಶ್ ಸಭೆಗೆ ವಿವರ ನೀಡಿ, ಶಿರಾಡಿ ಘಾಟಿ ರಸ್ತೆಯ ಎರಡನೇ ಹಂತದಲ್ಲಿ 13 ಕಿ.ಮೀ. ಉದ್ದ ಕಾಮಗಾರಿ ಸುಮಾರು 61.57 ಕೋಟಿ ರೂ. ಅಂದಾಜು ವೆಚ್ಚದಲ್ಲಿ ನಡೆಯಲಿದೆ. ಕಾಮಗಾರಿಗೆ 5 ತಿಂಗಳ ಕಾಲಾವಕಾಶ ಬೇಕಾಗಿದ್ದು, ಈಗಾಗಲೇ ಟೆಂಡರ್ ಕಾರ್ಯಾದೇಶ ನೀಡಲಾಗಿದೆ. ಗುಣಮಟ್ಟದಿಂದ ಕಾಮಗಾರಿ ನಡೆಯಲು ವಿದೇಶದಿಂದ ಅತ್ಯಾಧುನಿಕ ಯಂತ್ರವನ್ನು ತರಿಸಲಾಗಿದೆ. ಕಾಮಗಾರಿಯ ಗುಣಮಟ್ಟ ಕಾಪಾಡಲು ಕಾಮಗಾರಿ ಸಂದರ್ಭದಲ್ಲಿ ವಾಹನ ಸಂಚಾರ ನಿರ್ಬಂಧಿಸುವುದು ಅಗತ್ಯವಾಗಿದೆ ಎಂದರು.

ಸಭೆಯಲ್ಲಿ ಗೇರು ಅಭಿವೃದ್ದಿ ನಿಗಮ ಅಧ್ಯಕ್ಷ ಬಿ ಹೆಚ್ ಖಾದರ್, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಎಂ.ಆರ್. ರವಿ, ಅಪರ ಜಿಲ್ಲಾಧಿಕಾರಿ ಕುಮಾರ್, ಮತ್ತಿತರರು ಉಪಸ್ಥಿತರಿದ್ದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English