ಮಂಗಳೂರು: ಏಕಾಂಗಿಯಾಗಿ ಚುನಾವಣೆ ಎದುರಿಸಲಾಗದೆ ಕಾಂಗ್ರೆಸ್ ದೇಶದ್ರೋಹಿ ಸಂಘಟನೆಗಳಾದ ಎಸ್‌ಡಿಪಿಐ, ಪಿಎಫ್ಐ ಜತೆ ಹೊಂದಾಣಿಕೆಗೆ ಮುಂದಾಗಿದೆ ಎಂದು ದ.ಕ. ಜಿಲ್ಲಾ ಬಿಜೆಪಿ ಆರೋಪಿಸಿದೆ.
ಪಕ್ಷದ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪಕ್ಷದ ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು, ಶತಾಯಗತಾಯ ಅಧಿಕಾರಕ್ಕೆ ಬರಬೇಕೆನ್ನುವ ಉದ್ದೇಶದಿಂದ ಕಾಂಗ್ರೆಸ್ ತಾನು ಯಾವ ಮಟ್ಟಕ್ಕೂ ಇಳಿಯಲು ಸಿದ್ಧ ಎಂಬುದುದನ್ನು ತೋರಿಸಿದೆ. ಕೆಪಿಸಿಸಿ ಅಧ್ಯಕ್ಷ ಡಾ. ಜಿ.ಪರಮೇಶ್ವರ್ ಅವರು ಎಸ್‌ಡಿಪಿಐ ಮತ್ತು ಪಿಎಫ್ಐ ಜತೆಯಲ್ಲಿ ಮಾತುಕತೆ ಮಾಡಿರುವುದನ್ನು ರಾಷ್ಟ್ರೀಯ ಸುದ್ದಿ ವಾಹಿನಿಯೊಂದು ಬಿತ್ತರಿಸಿದೆ ಎಂದರು.
ಎಸ್‌ಡಿಪಿಐ ಮತ್ತು ಪಿಎಫ್ಐ ಸಂಘಟನೆಗಳನ್ನು ನಿಷೇಧಿಸುವುದಾಗಿ ಸರ್ಕಾರ ಒಂದೆಡೆ ಹೇಳುತ್ತಲೇ ಮತ್ತೊಂದೆಡೆ ತುಷ್ಠೀಕರಣ ನೀತಿಯನ್ನು ಅನುಸರಿಸುತ್ತಿದೆ. ಸೋಲುವ ಭೀತಿಯಿಂದ ಕಾಂಗ್ರೆಸ್ ಮತ್ತು ರಾಜ್ಯ ಸರ್ಕಾರ ಈ ರೀತಿಯ ನಿಲುವು ತಳೆಯುತ್ತಿದೆ. ರಾಜ್ಯದ ಜನತೆ ಮೂರ್ಖರಲ್ಲ. ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಅಧ್ಯಕ್ಷ ಡಾ. ಜಿ.ಪರಮೇಶ್ವರ್ ಅವರು ರಾಷ್ಟ್ರದ್ರೋಹಿ ಸಂಘಟನೆಗಳೊಂದಿಗೆ ಮಾಡಿಕೊಳ್ಳುವ ಒಡಂಬಡಿಕೆಗೆ ಸೂಕ್ತ ಉತ್ತರ ನೀಡಲಿದ್ದಾರೆ ಎಂದರು.
ಪ್ರಿಯಾಂಕ ಪ್ರಕರಣದಲ್ಲಿ ಸರ್ಕಾರ ಮತ್ತು ಪೊಲೀಸರು ಆರೋಪಿಗಳನ್ನು ರಕ್ಷಿಸುವಲ್ಲಿ ಆಸಕ್ತಿ ವಹಿಸಿದ್ದಾರೆ. ಆ ಮೂಲಕ ಮುಸ್ಲಿಂ ತುಷ್ಠೀಕರಣ ನೀತಿಯನ್ನು ಸರ್ಕಾರ ಮುಂದುವರಿಸಿದೆ. ಇನ್ನು ವಿಜಯಪುರದಲ್ಲಿ ಅಪ್ರಾಪ್ತ ಬಾಲಕಿಯ ಅತ್ಯಾಚಾರ ಆರೋಪಿಗಳನ್ನು ಬಂಧಿಸುವಲ್ಲಿ ಸೋತಿದೆ. ಮಂಗಳೂರು ನಗರ ಉತ್ತರ ಕ್ಷೇತ್ರದ ಶಾಸಕರೊಬ್ಬರ ಮನೆಗೆ ಇನ್ಸ್‌ಪೆಕ್ಟರ್ ತೆರಳಿ ಸನ್ಮಾನಿಸುತ್ತಾರೆ. ಇದು ಪೊಲೀಸ್ ಇಲಾಖೆಯ ದಿವಾಳಿತನವನ್ನು ಎತ್ತಿ ತೋರಿಸುತ್ತದೆ. ಇಲ್ಲಿ ಕಾನೂನು-ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ ಎಂದು ಅವರು ದೂರಿದರು.
Click this button or press Ctrl+G to toggle between Kannada and English