ಬೆಂಗಳೂರು: ಸೋಲು ಗೆಲುವು, ಏಳು ಬೀಳುಗಳ ಹಲವಾರು ರೋಚಕ, ನಾಟಕೀಯ ಕ್ಷಣಗಳನ್ನು ಕಂಡ ಗುಜರಾತ್ ಚುನಾವಣೆ ಇತಿಹಾಸದ ಪುಟಗಳನ್ನು ಸೇರಿಕೊಂಡಿದೆ. ಚುನಾವಣೆಯೆಂಬ ರಿಲೇಯಲ್ಲಿ ಕರ್ನಾಟಕಕ್ಕೆ ಓಟದ ಬೇಟನ್ ಕೊಟ್ಟು ಗುಜರಾತ್ ಹಿಂದೆ ಸರಿದುಕೊಂಡಿದೆ. ಗುಜರಾತ್ ಚುನಾವಣೆಯದ್ದು ಒಂದು ತೂಕವಾದರೆ ಕರ್ನಾಟಕದ್ದು ಅದನ್ನೂ ಮೀರಿಸುವಂಥ ತೂಕ.
ಗುಜರಾತಿನಲ್ಲಿ ಭಾರತೀಯ ಜನತಾ ಪಕ್ಷದ ಗೆಲುವನ್ನು ಗೋಡೆಯ ಮೇಲೆ ಮೊದಲೇ ಬರೆಯಲಾಗಿತ್ತಾದರೂ, ಕೆಲವೊಂದು ನಾಟಕೀಯ ಕ್ಷಣಗಳನ್ನು, ಹೋರಾಟವನ್ನು ನೋಡಿದ್ದು, ಕ್ಲೈಮ್ಯಾಕ್ಸ ಮತ್ತಷ್ಟು ರೋಚಕವಾಗುವಂತೆ ಮಾಡಿತು. ಗುಜರಾತಿನಲ್ಲಿ ಬಿಜೆಪಿ ಗೆಲುವಿನ ರಹಸ್ಯ ಬಹಿರಂಗ ಆದರೆ, ಕರ್ನಾಟಕ ಚುನಾವಣೆ ರಂಗಸ್ಥಳದ ಸನ್ನಿವೇಶಗಳು, ದೃಶ್ಯಗಳು ಗುಜರಾತಿಗಿಂತ ವಿಭಿನ್ನ.
ಬಣ್ಣ ಹಚ್ಚಿಕೊಂಡ ಪಾತ್ರಧಾರಿಗಳು ಕೂಡ ವಿಶಿಷ್ಟ. ಡೈಲಾಗ್ ಡೆಲಿವರಿ, ನಾಟಕೀಯ ಬೆಳವಣಿಗೆ ಎಲ್ಲವೂ ಯಾರ ಊಹೆಗೂ ಮೀರಿದ್ದು. ಸೂತ್ರಧಾರಿಗಳಿಲ್ಲದ ಪಾತ್ರಧಾರಿಗಳು ಕರ್ನಾಟಕದಲ್ಲಿ ಇದ್ದಾರೆ. ಕರ್ನಾಟಕಕ್ಕೆ ಬಿಜೆಪಿಯ ಚುನಾವಣಾ ಚಾಣಕ್ಯರ ದಾಪುಗಾಲು! ಕರ್ನಾಟಕ ವಿಧಾನಸಭೆ ಚುನಾವಣೆ 2018 ಪ್ರಾದೇಶಿಕ ಭಾರತೀಯ ಜನತಾ ಪಕ್ಷ, ಕಾಂಗ್ರೆಸ್ ಮತ್ತು ಜಾತ್ಯತೀತ ಜನತಾದಳಕ್ಕೆ ಭಾರೀ ಮಹತ್ವದ್ದಾಗಿದೆ. ದಕ್ಷಿಣದಲ್ಲಿ ಮತ್ತೆ ಬಾಗಿಲು ತೆರೆಯಲು ಬಿಜೆಪಿ ಹವಣಿಸುತ್ತಿದ್ದರೆ, ಸಿಕ್ಕಿರುವ ಆಡಳಿತವನ್ನು ಉಳಿಸಿಕೊಳ್ಳಲು ಕಾಂಗ್ರೆಸ್ ಸೆಣಸಾಡಬೇಕಿದೆ. ಇವರಿಬ್ಬರ ಕಿತ್ತಾಟದ ಲಾಭವನ್ನು ಪಡೆಯಲು ಜೆಡಿಎಸ್ ಹೊಂಚುಹಾಕಿ ಕುಳಿತಿದೆ.
ಜನವರಿ 28ರಂದು ಪರಿವರ್ತನಾ ಯಾತ್ರೆ ಸಂಪನ್ನ ಎಲ್ಲಕ್ಕಿಂತ ಹೆಚ್ಚಾಗಿ ಭಾರತಿಯ ಜನತಾ ಪಕ್ಷಕ್ಕೆ ಕರ್ನಾಟಕದಲ್ಲಿ ಗೆಲುವು, ಅಳಿವು ಉಳಿವು, ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಏನೇನು ತಂತ್ರಗಾರಿಕೆ ರೂಪಿಸಬೇಕೋ ಅದೆಲ್ಲವನ್ನೂ ರೂಪಿಸಲು ಅಮಿತ್ ಶಾ ಸಿದ್ಧರಾಗಿ ಕುಳಿತಿದ್ದಾರೆ. ಆರಂಭಿಕ ಭಾಗವಾಗಿ, ಯಡಿಯೂರಪ್ಪ ನೇತೃತ್ವದಲ್ಲಿ ಅಮಿತ್ ಶಾ ಚಾಲನೆ ನೀಡಿದ್ದ ಪರಿವರ್ತನಾ ಯಾತ್ರೆ ಜನವರಿ 28ರಂದು ಸಂಪನ್ನವಾಗಲಿದ್ದು, ನರೇಂದ್ರ ಮೋದಿಯವರು ಕೂಡ ಭಾಗವಹಿಸುವ ನಿರೀಕ್ಷೆಯಿದೆ.
ಮತದಾರರನ್ನು ಸೆಳೆಯಲು ವಿಶಿಷ್ಟ ಪ್ರಯೋಗ ಸಾಂಪ್ರದಾಯಿಕ ಯಾತ್ರೆ, ಭಾಷಣ, ಅಭಿಯಾನ, ಮಾತುಗಾರಿಕೆಯ ಜೊತೆಗೆ ರಾಜ್ಯದ ಜನತೆಯ ಮತಗಳನ್ನು ಸೆಳೆಯಲು ಭಾರತೀಯ ಜನತಾ ಪಕ್ಷ ವಿಶಿಷ್ಟವಾದ ಪ್ರಯೋಗಕ್ಕೆ ಮುಂದಾಗಿದೆ. ಗುಜರಾತ್ ನಲ್ಲಿ ಬೂತ್ ಮಟ್ಟದಲ್ಲಿ ಕಾರ್ಯಕರ್ತರನ್ನು ಸಮರ್ಥವಾಗಿ ಸಂಘಟಿಸಿ, ಮತಗಳನ್ನು ಸೆಳೆಯಲು ಯಶಸ್ವಿಯಾಗಿದ್ದ ‘ಚಾಣಕ್ಯ’ ಅಮಿತ್ ಶಾ ಅವರ ಬತ್ತಳಿಕೆಯಿಂದ ಮತ್ತೊಂದು ಪ್ರಾಯೋಗಿಕ ಬಾಣವನ್ನು ಬಿಡಲಿದ್ದಾರೆ.
ವಿವಿಧ ಕ್ಷೇತ್ರಗಳ ನಿಪುಣರು ಫೀಲ್ಡಿಗೆ ಇಳಿಯಲಿದ್ದಾರೆ ಅದೇನೆಂದರೆ, ಆರೋಗ್ಯ, ಶಿಕ್ಷಣ, ವಾಣಿಜ್ಯ, ವ್ಯಾಪಾರ, ಸಾಮಾಜಿಕ ವಲಯ ಮುಂತಾದ ವಿವಿಧ ಕ್ಷೇತ್ರಗಳಲ್ಲಿ ಹೆಸರುವಾಸಿಯಾಗಿರುವ, ನಿಪುಣರಾಗಿರುವ 500ಕ್ಕೂ ಹೆಚ್ಚು ಪ್ರಭಾವಿ ವ್ಯಕ್ತಿಗಳನ್ನು ಅಮಿತ್ ಶಾ ಮತ್ತು ತಂಡ ಗುರುತಿಸಿದ್ದು, ಅವರನ್ನು ಬಳಸಿಕೊಂಡು ಮತಬೇಟೆಗೆ ಇಳಿಯುವ ತಂತ್ರಗಾರಿಕೆ ಅಮಿತ್ ಶಾ ಅವರದ್ದು. ಇಂಥ ಹಲವಾರು ಪ್ರಯೋಗಗಳನ್ನು ಮಾಡಿರುವ ಅವರು ಕರ್ನಾಟಕದಲ್ಲಿ ಈಬಾರಿ ಇದನ್ನ ಪ್ರಯೋಗಿಸಲಿದ್ದಾರೆ. ಸಮಸ್ಯೆಗಳ ಆಧಾರದ ಮೇಲೆ ಪ್ರಣಾಳಿಕೆ 224ಕ್ಕೂ ಕ್ಷೇತ್ರಗಳಲ್ಲಿ ಇರುವ ಪ್ರಮುಖ ಸಮಸ್ಯೆಗಳ ಬಗ್ಗೆ ಮಾಹಿತಿ ಸಂಗ್ರಹಿಸುವ ಕೆಲಸಕ್ಕೆ ಬಿಜೆಪಿ ಮುಂದಾಗಿದೆ.
ಪ್ರಚಾರ ಮಾಡುವಾಗ ಈ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಯುವುದಲ್ಲದೆ, ಆ ಸಮಸ್ಯೆಗಳ ಮೂಲವೇನು, ಪರಿಹಾರವೇನು ಇತ್ಯಾದಿ ಮಾಹಿತಿಯಿರುವ ದಾಖಲೆ ಸಿದ್ಧಮಾಡಲಾಗುತ್ತಿದೆ. ಈ ಸಮಸ್ಯೆಗಳ ಆಧಾರದ ಮೇಲೆ ಚುನಾವಣಾ ಪ್ರಣಾಳಿಕೆಯನ್ನು ಸಿದ್ಧಪಡಿಸಲಾಗುವುದು. ಆಯಾ ಕ್ಷೇತ್ರಗಳಲ್ಲಿ ಸಮಸ್ಯೆಯಿಂದ ಬಳಲುತ್ತಿರುವ ಜನರ ಮಾತು ಆಲಿಸುವುದು.
ಮತದಾರರ ಮಾತುಗಳಿಗೆ ಕಿವಿಯಾಗುವುದು ಸಾರ್ವಜನಿಕ ಸಭೆಗಳೆಂದರೆ ಬರೀ ಭಾಷಣ ಬಿಗಿಯುವುದಲ್ಲ. ಬದಲಾಗಿ, ಜನರ ಸಮಸ್ಯೆ, ಆಶೋತ್ತರಗಳಿಗೆ ಕಿವಿಯಾಗುವುದು ಈ ಪ್ರಯತ್ನದ ಮೂಲ ಉದ್ದೇಶ. ಜನರು ತಮಗೆ ಅನ್ನಿಸಿದ್ದನ್ನು ಹೇಳಲು ಉತ್ಸುಕರಾಗಿರುತ್ತಾರೆ, ಆದರೆ ಹೆಚ್ಚಾಗಿ ಅವರಿಗೆ ಅವಕಾಶ ಸಿಕ್ಕಿರುವುದಿಲ್ಲ. ಸಮಸ್ಯೆಯ ಮೂಲ ಅರಿಯುವುದು, ಅದಕ್ಕೆ ಮತದಾರರಿಂದಲೇ ಪರಿಹಾರ ಕಂಡುಕೊಳ್ಳುಲಾಗುವುದು ಎಂದು ಬಿಜೆಪಿ ನಾಯಕರೊಬ್ಬರು ವಿವರಿಸಿದ್ದಾರೆ.
Click this button or press Ctrl+G to toggle between Kannada and English