ಸೂರಜ್‌ ಕಲಾಸಿರಿಯಲ್ಲಿ ಮನಸೂರೆಗೊಂಡ ಸಾಂಸ್ಕೃತಿಕ ಕಾರ್ಯಕ್ರಮಗಳು

2:13 PM, Saturday, December 23rd, 2017
Share
1 Star2 Stars3 Stars4 Stars5 Stars
(5 rating, 1 votes)
Loading...

Suraj Kalasiri ಕೊಣಾಜೆ : ಸೂರಜ್‌ ಶಿಕ್ಷಣ ಸಂಸ್ಥೆ ಹಾಗೂ ಕನ್ನಡ ಸಂಸ್ಕೃತಿ ಇಲಾಖೆಯ ಆಶ್ರಯದಲ್ಲಿ ಮುಡಿಪುವಿನಲ್ಲಿ ನಡೆಯುತ್ತಿರುವ ಸಮೃದ್ಧ ಭಾರತ ಸಂಸ್ಕೃತಿ ಪರಿಕಲ್ಪನೆಯ ‘ಸೂರಜ್‌ ಕಲಾಸಿರಿ-2017’ ರಾಜ್ಯಮಟ್ಟದ ಸಾಂಸ್ಕೃತಿಕ ಉತ್ಸವದ ಎರಡನೇ ದಿನವಾದ ಶುಕ್ರವಾರ ವಿವಿಧ ಕಲಾ ಪ್ರಕಾರಗಳು ಪ್ರಸ್ತುತಗೊಂಡವು. ಸೂರಜ್‌ ಶಿಕ್ಷಣ ಸಂಸ್ಥೆ ಸೇರಿದಂತೆ ನೆರೆಯ ಶಾಲೆಗಳಿಂದ ಆಗಮಿಸಿದ ವಿದ್ಯಾರ್ಥಿಗಳು ಮತ್ತು ಗ್ರಾಮೀಣ ಪ್ರದೇಶದ ಕಲಾ ಪ್ರೇಮಿಗಳು ಕಲಾಸಿರಿಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಅಸ್ವಾದಿಸಿದರು.

ಬೆಳಗ್ಗೆ ನಡೆದ ವಿಚಾರಗೋಷ್ಠಿಯ ಬಳಿಕ ಕೊಡಗು ಜಿಲ್ಲೆಯಿಂದ ಆಗಮಿಸಿದ ಮುದ್ದಪ್ಪ ಮತ್ತು ಅವರ ಸಂಗಡಿಗರಿಂದ ಹುತ್ತರಿ ನೃತ್ಯ ಮನಸೂರೆಗೊಂಡರೆ, ಬಳಿಕ ನಡೆದ ಕಾವ್ಯ, ಗಾನ, ಕುಂಚ ನೃತ್ಯ ಕವಿಗೋಷ್ಠಿಯಲ್ಲಿ ಕವಿಗಳಾದ ಭಾಸ್ಕರ ರೈ ಕುಕ್ಕುವಳ್ಳಿ, ಶಿವಾನಂದ ಕರ್ಕೇರಾ, ಲಕ್ಷ್ಮೀ ನಾರಾಯಣ ರೈ ಹರೇಕಳ, ಮಹೇಂದ್ರ ನಾಥ್‌, ವಿಜಯಾ ಶೆಟ್ಟಿ ಸಾಲೆತ್ತೂರು, ಸುಧಾ ನಾಗೇಶ್‌, ಶೋಭಾ ರಾಣಿ, ಮಾಲತಿ ಶೆಟ್ಟಿ ಕವನವನ್ನು ವಾಚಿಸಿದರು.

Suraj Kalasiri ತೋನ್ಸೆ ಪುಷ್ಕಳ್‌ ಕುಮಾರ್‌ ನೇತೃತ್ವದ ತಂಡ ಸಂಗೀತ ನೀಡಿ ಕವನಕ್ಕೆ ಹಾಡಿನ ರೂಪ ನೀಡಿದರು. ವಿದುಷಿ ರೇಶ್ಮಾ ನಿರ್ಮಲ್‌ ನೇತೃತ್ವದಲ್ಲಿ ಹಾಡಿಗೆ ನೃತ್ಯ ಸಂಯೋಜಿಸಿದರೆ, ಮಹೇಂದ್ರ ಅವರು ಕುಂಚದ ಮೂಲಕ ಕವನದ ಅರ್ಥವನ್ನು ಪ್ರಸ್ತುತ ಪಡಿಸಿದರು. ಪದವಿ ಪೂರ್ವ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲ ಪ್ರಸನ್ನ ಕುಮಾರ್‌ ನಿರ್ವಹಿಸಿದರು. ಬಳಿಕ ನಡೆದ ಜೀವನ ಹಾಸ್ಯ ಮತ್ತು ಮೌಲ್ಯ ಕಾರ್ಯಕ್ರಮವನ್ನು ಅಂತಾರಾಷ್ಟ್ರೀಯ ಹಾಸ್ಯ ಕಲಾವಿದೆ ಉಡುಪಿಯ ಸಂಧ್ಯಾ ಶೆಣೈ ನಡೆಸಿಕೊಟ್ಟರು.

Suraj Kalasiri

ಶಿವಮೊಗ್ಗದ ರಾಧಿಕಾ ಮತ್ತು ಸಂಗಡಿಗರಿಂದ ಡೊಳ್ಳುಕುಣಿತ ಗಮನ ಸೆಳೆದರೆ, ಮೈಸೂರಿನ ರೇವಣ್ಣ ಹಾಗೂ ಸಂಗಡಿಗರಿಂದ ಬೀಸು ಕಂಸಾಳೆ, ಮಂಗಳೂರಿನ ಕ್ಯಾಪ್‌ಮೆನ್‌ ಮೀಡಿಯಾದಿಂದ ಒಪ್ಪನೆ ನೃತ್ಯ ಹಾಗೂ ಚಿಕ್ಕಮಗಳೂರಿನ ರುದ್ರಪ್ಪ ಮತ್ತು ಸಂಗಡಿಗರಿಂದ ವೀರಗಾಸೆ ನೃತ್ಯ ಪ್ರದರ್ಶನ ನಡೆಯಿತು.ಇರಾದ ಯಕ್ಷ ಪ್ರಿಯ ಬಳಗ ತುಳು ರೂಪಕವನ್ನು ನಡೆಸಿಕೊಟ್ಟರು.

ಶನಿವಾರ ಬೆಳಗ್ಗೆ ಶಿಕ್ಷಣ ಸಂಸ್ಥೆಯ ವಾರ್ಷಿಕೋತ್ಸವ ನಡೆಯಲಿದ್ದು, ಮಧ್ಯಾಹ್ನದ ಬಳಿಕ ಸೂರಜ್‌ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳಿಂದ ಜಾಂಬವತಿ ಕಲ್ಯಾಣ ಯಕ್ಷಗಾನ, ಸಂಜೆ 4.00 ಗಂಟೆಗೆ ಸಮಾರೋಪ ನಡೆಯಲಿದೆ. ಚಿತ್ರನಟಿ ಜಯಂತಿ ಅವರಿಗೆ ಸೂರಜ್‌ ಕಲಾಸಿರಿ ಪ್ರಶಸ್ತಿ ಪ್ರಧಾನ ನಡೆದು ಬಳಿಕ ಮುಂಬಯಿಯ ಅಮಿತಾ ಜತಿನ್‌ ತಂಡದವರಿಂದ ನೃತ್ಯ ವೈಭವ, ಕೈರಂಗಳ ಗೋಪಾಲಕೃಷ್ಣ ಯಕ್ಷಗಾನ ಸಂಗದಿಂದ ನರಕಾಸುರ ಮೋಕ್ಷ ಯಕ್ಷಗಾನ ನಡೆಯಲಿದೆ.

Suraj Kalasiri

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English