ನವದೆಹಲಿ: ಇಂದು ಮಾಜಿ ಪ್ರಧಾನಿ, ಬಿಜೆಪಿಯ ಹಿರಿಯ ವರಿಷ್ಠ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನ. ಈ ಹಿನ್ನೆಲೆಯಲ್ಲಿ ವಾಜಪೇಯಿ ಅವರಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಪ್ರಧಾನಿ ಮೋದಿ ಸೇರಿದಂತೆ ಹಲವು ಗಣ್ಯರು ಶುಭಕೋರಿದ್ದಾರೆ.
ವಾಜಪೇಯಿ ಇಂದು 93ನೇ ವಸಂತಕ್ಕೆ ಕಾಲಿಟ್ಟಿದ್ದು, ‘ನಮ್ಮೆಲ್ಲರ ಪ್ರೀತಿಪಾತ್ರರಾಗಿರುವ ಮಾಜಿ ಪ್ರಧಾನಿ ವಾಜಪೇಯಿ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು’ ಎಂದು ರಾಷ್ಟ್ರಪತಿ ರಾಮನಾಥ್ ಟ್ವೀಟ್ ಮಾಡಿದ್ದಾರೆ.
ಪ್ರಧಾನಿ ಮೋದಿ ಕೂಡ ಟ್ವೀಟ್ ಮೂಲಕ ವಾಜಪೇಯಿ ಅವರಿಗೆ ಶುಭಕೋರಿದ್ದು, ‘ನಮ್ಮ ಅಟಲ್‌ಜೀ ಅವರಿಗೆ ಜನ್ಮದಿನದ ಶುಭಾಶಯಗಳು. ವಾಜಪೇಯಿ ಅವರ ದೂರದೃಷ್ಟಿಯುಳ್ಳ ನಾಯಕತ್ವದಿಂದ ಭಾರತದ ಅಭಿವೃದ್ಧಿಗೆ ನೆರವಾಯಿತು ಮತ್ತು ವಿಶ್ವಮಟ್ಟದಲ್ಲಿ ದೇಶದ ಪ್ರತಿಷ್ಠೆಯನ್ನು ಹೆಚ್ಚಿಸಿದೆ. ಅವರಿಗೆ ಉತ್ತಮ ಆರೋಗ್ಯ ಲಭಿಸಲಿ ಎಂದು ಪ್ರಾರ್ಥಿಸುತ್ತೇನೆ’ ಎಂದು ಟ್ವೀಟ್ ಮಾಡಿದ್ದಾರೆ.
ಕಾಂಗ್ರೆಸ್ ಸಹ ವಾಜಪೇಯಿ ಅವರಿಗೆ ಶುಭಕೋರಿದೆ. ‘ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಹುಟ್ಟು ಹಬ್ಬದ ಶುಭಾಶಯ’ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ. ಅಲ್ಲದೇ ಕೇಂದ್ರ ಸಚಿವರು, ಸಿಎಂ ಸಿದ್ದರಾಮಯ್ಯ ಸೇರಿದಂತೆ ಇತರ ಮುಖ್ಯಮಂತ್ರಿಗಳು ಹಲವು ರಾಜಕೀಯ ಗಣ್ಯರು ವಾಜಪೇಯಿ ಹುಟ್ಟುಹಬ್ಬಕ್ಕೆ ಶುಭಾಶಯ ತಿಳಿಸಿದ್ದಾರೆ.
ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಹಾಗೂ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ವಾಜಪೇಯಿ ನಿವಾಸಕ್ಕೆ ಭೇಟಿ ನೀಡಿದ್ದರು. ದೆಹಲಿಯ ಕೃಷ್ಣ ಮೆನನ್ ಮಾರ್ಗ್‌ನಲ್ಲಿ ವಾಜಪೇಯಿ ನಿವಾಸವಿದ್ದು, ಮನೆ ಮುಂದೆ ಹೂಗಳಿಂದ ಅಲಂಕಾರ ಮಾಡಲಾಗಿದೆ.
Click this button or press Ctrl+G to toggle between Kannada and English