ಮಂಗಳೂರು: ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ತಮ್ಮ ಆಡಳಿತಾವಧಿಗಳಲ್ಲಿ ಜನರ ಮೂಲಭೂತ ಸಮಸ್ಯೆಗಳನ್ನು ಪರಿಹರಿಸಿ ಅವರ ಬೇಡಿಕೆಗಳನ್ನು ಪೂರೈಸುವಲ್ಲಿ ವಿಫಲವಾಗಿದೆ. ತನ್ನ ತಪ್ಪು ಆರ್ಥಿಕ ಹಾಗೂ ಸಾಮಾಜಿಕ ನೀತಿಗಳ ಪರಿಣಾಮವಾಗಿ ಇಂದು ಭಾರತೀಯರು ಪರಿತಪಿಸುವಂತಾಗಿದೆ.
ಕಾಂಗ್ರೆಸ್ ನೇತೃತ್ವದ ಯುಪಿಎ-2 ಸರಕಾರ ಬೆಲೆ ಏರಿಕೆಯಂತಹ ಜನರ ಮೂಲಭೂತ ಕಷ್ಟವನ್ನು ಪರಿಹರಿಸಲು ವಿಫಲವಾದಾಗ ಅದು ಅಧಿಕಾರವನ್ನು ಕಳೆದುಕೊಂಡಿತು. ಅನಂತರ ಬಂದ ಈಗಿನ ಬಿಜೆಪಿ ನೇತೃತ್ವದ ಎನ್ ಡಿ ಎ ಸರಕಾರ ಬೆಲೆ ಏರಿಕೆಯನ್ನು ನಿಯಂತ್ರಿಸಲು ಸಾಧ್ಯವಾಗಿಲ್ಲ.
ಈಗಿನ ಸರಕಾರಕ್ಕೆ ಜನರ ಹಸಿವಿನ ಬಗ್ಗೆ ಚಿಂತೆಯಿಲ್ಲ ಬದಲಾಗಿ ಹಸುವಿನ ಬಗ್ಗೆ ಕಾರ‍್ಯಪ್ರವೃತ್ತವಾಗಿದೆ. ಇಂತಹ ಪಕ್ಷ ಮತ್ತು ಸರಕಾರಗಳ ನೀತಿಗಳನ್ನು ಜನ ಧಿಕ್ಕರಿಸಿ ಭಾರತದ ಸ್ವಾತಂತ್ರ್ಯ, ಸ್ವಾಭಿಮಾನವನ್ನು ಉಳಿಸುವತ್ತ ಬದಲಿ ಆಲೋಚನೆ ಮಾಡಬೇಕೆಂದು ಭಾರತ ಕಮ್ಯೂನಿಸ್ಟ್ ಪಕ್ಷ (ಸಿಪಿಐ) ದ ಕರ್ನಾಟಕ ರಾಜ್ಯ ಸಹಾಯಕ ಕಾರ‍್ಯದರ್ಶಿ ಸಾತಿ ಸುಂದರೇಶ್ ಕರೆನೀಡಿದರು.
ಇಂದು ಮಂಗಳೂರಿನ ಕಾಮ್ರೇಡ್ ಸಿಂಪ್ಸನ್ ಸೋನ್ಸ್ ಸಭಾಂಗಣದಲ್ಲಿ ನಡೆದ ಸಿಪಿಐ ದ.ಕ ಮತ್ತು ಉಡುಪಿ ಜಿಲ್ಲಾ 23 ನೇ ಸಮ್ಮೇಳನದ ಪ್ರತಿನಿಧಿ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಪಕ್ಷದ ಹಿರಿಯ ಮುಂದಾಳು ವಿಠಲ ಬಂಗೇರರವರು ಸಮ್ಮೇಳನದ ಧ್ವಜಾರೋಹಣವನ್ನು ನೆರವೇರಿಸಿದರು.
ಈ ಸಂಧರ್ಭದಲ್ಲಿ ಪಕ್ಷದ ಜಿಲ್ಲಾ ಕಾರ‍್ಯದರ್ಶಿ ವಿ.ಕುಕ್ಯಾನ್ ಸಾಂಧರ್ಭಿಕವಾಗಿ ಮಾತನಾಡಿದರು. ಬಿ.ಶೇಖರ್ ಸ್ವಾಗತಿಸಿದರು. ಹುತಾತ್ಮ ಸಂಗಾತಿಗಳಿಗೆ ಪುಷ್ಪಾಂಜಲಿ ಅರ್ಪಿಸಲಾಯಿತು.
2017 ಡಿಸೆಂಬರ್ 26 ನೇ ಮಂಗಳವಾರ ಬೆಳಿಗ್ಗೆ 10-30ಕ್ಕೆ ಮಂಗಳೂರು ಮಿಲಾಗ್ರಿಸ್ ಚರ್ಚ್ ಬಳಿಯಿಂದ ವರ್ಣ ರಂಜಿತ ರ‍್ಯಾಲಿ ನಡೆದು ನಂತರ ನೆಹರೂ ಮೈದಾನದ ಗೋವಿಂದ ಪನ್ಸಾರೆ ವೇದಿಕೆಯಲ್ಲಿ ಬಹಿರಂಗ ಸಭೆ ನಡೆಯಲಿದೆ.
ಬಹಿರಂಗ ಸಭೆಯ ಉದ್ಘಾಟನೆಯನ್ನು ಕೇರಳದ ಕಂದಾಯ ಸಚಿವರಾದ ಇ.ಚಂದ್ರ ಶೇಖರನ್ ನೆರವೇರಿಸಲಿದ್ದಾರೆ. ಸಿಪಿಐ ರಾಷ್ಟ್ರೀಯ ಮಂಡಳಿ ಸದಸ್ಯ ಡಾ.ಸಿದ್ದನಗೌಡ ಪಾಟೀಲ, ಪಕ್ಷದ ರಾಜ್ಯ ಕಾರ‍್ಯದರ್ಶಿ ಪಿ.ವಿ ಲೋಕೇಶ್, ಸಹಾಯಕ ಕಾರ‍್ಯದರ್ಶಿ ಸಾತಿ ಸುಂದರೇಶ್, ಪಕ್ಷದ ಕಾಸರಗೋಡ್ ಜಿಲ್ಲಾ ಸಹಕಾರ‍್ಯದರ್ಶಿ ಕಾ. ಬಿ.ವಿ ರಾಜನ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಅಧ್ಯಕ್ಷತೆಯನ್ನು ಸಿಪಿಐ ಜಿಲ್ಲಾ ಕಾರ‍್ಯದರ್ಶಿ ಕಾ.ವಿ.ಕುಕ್ಯಾನ್ ವಹಿಸಲಿದ್ದಾರೆ.
Click this button or press Ctrl+G to toggle between Kannada and English