ಹಾವೇರಿ: ತಾಕತ್ತಿದ್ದರೆ ಸಿದ್ದರಾಮಯ್ಯ ಸರಕಾರ ನನ್ನನ್ನು ಬಂಧಿಸಲು ಪೊಲೀಸರಿಗೆ ಆದೇಶ ನೀಡಲಿ ಎಂದು ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಮಾಡಿದ ಸವಾಲಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಸಿದ್ದರಾಮಯ್ಯ, ಕಾನೂನಿಗಿಂತ ಈ ನೆಲದಲ್ಲಿ ಯಾರೂ ದೊಡ್ಡವರಲ್ಲ. ಶೋಭಾ ಅವರು ಉದ್ವೇಗದಿಂದ ಮಾತನಾಡುವುದನ್ನು ನಿಲ್ಲಿಸಬೇಕು ಎಂದು ಸಲಹೆ ನೀಡಿದ್ದಾರೆ.
ಜೊತೆಗೆ, ಶೋಭಾ ಕರಂದ್ಲಾಜೆಯವರು ತಪ್ಪು ಮಾಡಿದು ಸಾಬೀತಾದರೆ ಯಾವುದೇ ಮುಲಾಜಿಲ್ಲದೇ ಪೊಲೀಸರು ಬಂಧಿಸುತ್ತಾರೆಯೇ ಹೊರತು ನಾವಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದಾರೆ.
ಮಹದಾಯಿ ನದಿನೀರು ಹಂಚಿಕೆಯ ವಿವಾದವನ್ನು ಬಗೆಹರಿಸಲು ನಮ್ಮ ಸರಕಾರ ಪ್ರಾಮಾಣಿಕ ಪ್ರಯತ್ನ ನಡೆಸಿದೆ. ದುಡುಕಿನ ನಿರ್ಧಾರ ತೆಗೆದುಕೊಂಡರೆ, ರೈತರ ಪ್ರತಿಭಟನೆಯ ಕಾವು ಏನು ಎನ್ನುವುದನ್ನು ಯಡಿಯೂರಪ್ಪನವರು ಈಗ ಅರಿತಿರಬಹುದು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಏನಿದು ಶೋಭಾ ಕರಂದ್ಲಾಜೆ ಚಾಲೆಂಜ್? ಹೊನ್ನಾವರದ ಮಾಗೋಡಿನ ಶಾಲಾ ಬಾಲಕಿ ಕಾವ್ಯಾ ಶೇಖರ್ ನಾಯ್ಕಳ ಮೇಲೆ ಚಾಕುವಿನಿಂದ ನಡೆದಿದೆ ಎನ್ನಲಾದ ಹಲ್ಲೆ ಪ್ರಕರಣದ ವಿಚಾರದಲ್ಲಿ ಸಂಸದೆ ಶೋಭಾ, ಪ್ರಚೋದನಕಾರಿ ಟ್ವೀಟ್ ಮಾಡಿದ್ದರು. ಈ ವಿಚಾರದಲ್ಲಿ ಚಿಕ್ಕಮಗಳೂರು-ಉಡುಪಿ ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧ ಎಫ್ ಐಆರ್ ದಾಖಲಾಗಿತ್ತು.
ಜಿಹಾದಿಗಳು 9ನೇ ತರಗತಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಮತ್ತು ಕೊಲೆಗೆ ಯತ್ನಿಸಿದ್ದಾರೆ ಎಂದು ಶೋಭಾ ಕರಂದ್ಲಾಜೆ ಟ್ವೀಟ್ ಮಾಡಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಹೊನ್ನಾವರ ಪೊಲೀಸರು ಸ್ವಯಂಪ್ರೇರಿತವಾಗಿ ಶೋಭಾ ವಿರುದ್ಧ ಎಫ್ ಐಆರ್ ದಾಖಲಿಸಿಕೊಂಡಿದ್ದರು. ತನ್ನ ವಿರುದ್ದ ದಾಖಲಾದ FIR ವಿರುದ್ದ ಕೆಂಡಕಾರಿದ್ದ ಶೋಭಾ, ಜಿಹಾದಿಗಳ ವಿರುದ್ಧ ನನ್ನ ಹೋರಾಟ ಮುಂದುವರಿಯುತ್ತದೆ.
ನಾನು ನಡೆಸುವ ಹೋರಾಟವನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ, ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ತಾಕತ್ತಿದ್ದರೆ ನನ್ನನ್ನು ಬಂಧಿಸಲಿ ನೋಡೋಣ ಎಂದು ಸಂಸದೆ ಶೋಭಾ, ಸಿಎಂಗೆ ಸವಾಲು ಎಸೆದಿದ್ದರು.
Click this button or press Ctrl+G to toggle between Kannada and English