ಮಂಗಳೂರು: ‘ದೇವಸ್ಥಾನಗಳು ಊರಿನ ಸಮೃದ್ಧಿಗೆ ಸಾಕ್ಷಿಯಾಗುತ್ತವೆ. ಆಯಾ ಊರಿನಲ್ಲಿರುವ ಒಗ್ಗಟ್ಟು, ಅಭಿವೃದ್ಧಿ ಚಟುವಟಿಕೆಗಳನ್ನು ಪ್ರತಿಬಿಂಬಿಸುತ್ತವೆ’ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಹೇಳಿದರು.
ಕಂಕನಾಡಿ ಶ್ರೀ ಬ್ರಹ್ಮ ಬೈದರ್ಕಳ ಗರಡಿಯಲ್ಲಿ ನೂತನವಾಗಿ ನಿರ್ಮಿಸಿರುವ ಉತ್ತರ ದಿಕ್ಕಿನ ಪೌಳಿಯನ್ನು ಮಂಗಳವಾರ ಸಂಜೆ ಉದ್ಘಾಟಿಸಿದ ಬಳಿಕ ನಡೆದ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ‘ಒಂದು ಊರಿನಲ್ಲಿರುವ ದೇವಸ್ಥಾನಗಳು ಹೇಗಿವೆ ಎನ್ನುವುದನ್ನು ನೋಡಿದ ಬಳಿಕ ಅಲ್ಲಿನ ಜನರ ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ ಪರಿಸ್ಥಿತಿಯ ಬಗ್ಗೆ ನಿರ್ಧಾರಕ್ಕೆ ಬರಬಹುದು’ ಎಂದರು.
ದೇವಸ್ಥಾನ ಮತ್ತು ದೈವಸ್ಥಾನಗಳ ಅಭಿವೃದ್ಧಿಯಿಂದ ಸಮಾಜದ ಮೇಲೆ ಒಳ್ಳೆಯ ಪರಿಣಾಮಗಳಾಗುತ್ತವೆ. ಜನರು ಒಂದುಗೂಡುತ್ತಾರೆ. ಹಲವು ಬಗೆಯ ಧನಾತ್ಮಕ ಚಟುವಟಿಕೆಗಳಿಗೆ ಅದು ನಾಂದಿ ಹಾಡುತ್ತದೆ. ಆಯಾ ಪ್ರದೇಶದ ಸಮಗ್ರ ಅಭಿವೃದ್ಧಿಗೆ ಪೂರಕವಾಗುತ್ತದೆ ಎಂದು ಹೇಳಿದರು.
ಕೋಟಿ– ಚೆನ್ನಯರು ತುಳುನಾಡು ಕಂಡ ಅಪೂರ್ವ ವೀರಪುರುಷರು. ಅವರಲ್ಲಿ ವೀರತ್ವ ಮಾತ್ರ ಇರಲಿಲ್ಲ, ದೈವತ್ವವೂ ಇತ್ತು. ಶೋಷಣೆಯ ವಿರುದ್ಧದ ಅವರ ಹೋರಾಟವನ್ನು ಇಂದಿನ ಯುವ ಪೀಳಿಗೆ ಆದರ್ಶವಾಗಿ ಅನುಸರಿಸಬೇಕು ಎಂದು ಸಲಹೆ ನೀಡಿದರು.
ಸಾನ್ನಿಧ್ಯ ವಹಿಸಿದ್ದ ಕನ್ಯಾಡಿ ಶ್ರೀರಾಮ ಕ್ಷೇತ್ರದ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಆಶೀರ್ವಚನ ನೀಡಿದರು. ಜಾನಪದ ವಿದ್ವಾಂಸ ಡಾ.ಗಣೇಶ್ ಅಮೀನ್ ಸಂಕಮಾರ್ ದಿಕ್ಸೂಚಿ ಭಾಷಣ ಮಾಡಿದರು. ಬಿಲ್ಲವರ ಮಹಾಮಂಡಲದ ಅಧ್ಯಕ್ಷ ಜಯ ಸಿ.ಸುವರ್ಣ ಅಧ್ಯಕ್ಷತೆ ವಹಿಸಿದ್ದರು.
ಅಖಿಲ ಭಾರತ ಬಿಲ್ಲವರ ಯೂನಿಯನ್ ಅಧ್ಯಕ್ಷ ನವೀನ್‌ಚಂದ್ರ ಡಿ.ಸುವರ್ಣ, ಕರ್ಣಾಟಕ ಬ್ಯಾಂಕ್ ಅಧ್ಯಕ್ಷ ಪಿ.ಜಯರಾಮ ಭಟ್, ಕದ್ರಿ ಮಂಜುನಾಥ ಸ್ವಾಮಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎ.ಜೆ.ಶೆಟ್ಟಿ, ಲೆಕ್ಕ ಪರಿಶೋಧಕ ಎ.ಕೃಷ್ಣಮೂರ್ತಿ, ದುಬೈ ಬಿಲ್ಲವ ಸಂಘದ ಮಾಜಿ ಅಧ್ಯಕ್ಷ ಜಿತೇಂದ್ರ ಸುವರ್ಣ, ಉದ್ಯಮಿ ಎಂ.ಸೀತಾರಾಮ್, ಮರೋಳಿ ಸೂರ್ಯನಾರಾಯಣ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕೆ.ಪಿ.ಶೆಟ್ಟಿ, ಕಾಂಗ್ರೆಸ್ ಮುಖಂಡ ರಾಜಶೇಖರ ಕೋಟ್ಯಾನ್, ಬಂಟ್ವಾಳ ಬಿಲ್ಲವ ಸಂಘದ ಅಧ್ಯಕ್ಷ ಶೇಷಪ್ಪ ಕೋಟ್ಯಾನ್, ಕಂಕನಾಡಿ ಗರಡಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ.ಚಿತ್ತರಂಜನ್ ಉಪಸ್ಥಿತರಿದ್ದರು.
Click this button or press Ctrl+G to toggle between Kannada and English