‘ಕಾಂಗ್ರೆಸ್‌ ಸರ್ಕಾರದಿಂದ ರೈತರಿಗೆ ಆತ್ಮಹತ್ಯೆ ಭಾಗ್ಯ’

1:12 PM, Friday, December 29th, 2017
Share
1 Star2 Stars3 Stars4 Stars5 Stars
(5 rating, 1 votes)
Loading...

congressಮಂಗಳೂರು: ಜನರ ದುಡ್ಡಿನಲ್ಲಿ ಪಕ್ಷದ ಪ್ರಚಾರ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ರೈತರ ಬಗ್ಗೆ ನಿಜವಾದ ಕಾಳಜಿ ಇಲ್ಲ. ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ನಂತರ ರಾಜ್ಯದಲ್ಲಿ 3,500 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಭಾಗ್ಯಗಳ ಸರದಾರ ಸಿದ್ದರಾಮಯ್ಯ ಅವರು ರಾಜ್ಯದ ರೈತರಿಗೆ ಆತ್ಮಹತ್ಯೆ ಭಾಗ್ಯವನ್ನು ನೀಡಿದ್ದಾರೆ ಎಂದು ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.

ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅನ್ನಭಾಗ್ಯ, ಕೃಷಿ ಭಾಗ್ಯ, ಸಾಲ ಮನ್ನಾ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಹೇಳುತ್ತಿದ್ದಾರೆ. ಈ ಯೋಜನೆಗಳ ಹೊರತಾಗಿಯೂ ರಾಜ್ಯದಲ್ಲಿ ರೈತರ ಆತ್ಮಹತ್ಯೆಗಳು ಮುಂದುವರಿದಿರುವುದು ಏಕೆ ಎಂಬುದಕ್ಕೆ ಉತ್ತರ ನೀಡಬೇಕು ಎಂದು ಆಗ್ರಹಿಸಿದರು.

₹8ಸಾವಿರ ಕೋಟಿ ಸಾಲಮನ್ನಾ ಮಾಡಿ ಜೂನ್‌ 28ಕ್ಕೆ ಆದೇಶ ಹೊರಡಿಸಲಾಗಿದೆ. ಆದರೆ, ಇದುವರೆಗೆ ಯಾವೊಬ್ಬ ರೈತರಿಗೂ ಇದರ ಪ್ರಯೋಜನ ಸಿಕ್ಕಲ್ಲ. ಸಾಲಮನ್ನಾ ಘೋಷಣೆ ಮಾಡಿದ ನಂತರ 450 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದರರ್ಥ ಸಾಲಮನ್ನಾ ಇನ್ನೂ ರೈತರಿಗೆ ತಲುಪಿಯೇ ಇಲ್ಲ. ಇದೊಂದು ಬೋಗಸ್‌ ಕಾರ್ಯಕ್ರಮ. ಈಗಿರುವ ಸರ್ಕಾರ ₹8 ಸಾವಿರ ಕೋಟಿಯನ್ನು ಭರಿಸುವುದಿಲ್ಲ. ಅದೇನಿದ್ದರೂ ಮುಂದೆ ಬರುವ ಸರ್ಕಾರವೇ ಭರಿಸಬೇಕು ಎಂದು ಹೇಳಿದರು.

ಕಾರ್ಯಕ್ರಮಕ್ಕೆ ₹50 ಲಕ್ಷ: ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಸಾಧನಾ ಸಮಾವೇಶದ ಹೆಸರಿನಲ್ಲಿ ರಾಜ್ಯದ ಜನರು ತೆರಿಗೆ ಹಣವನ್ನು ಲೂಟಿ ಮಾಡುತ್ತಿದ್ದಾರೆ ಎಂದು ಕುಮಾರಸ್ವಾಮಿ ಆರೋಪಿಸಿದರು.

ಪ್ರತಿ ಕಾರ್ಯಕ್ರಮಕ್ಕೆ ₹50 ಲಕ್ಷ ಖರ್ಚು ಮಾಡಲಾಗುತ್ತಿದೆ. ಬರುವ ಜನರಿಗೆ ತಲಾ ₹200, ₹300 ನೀಡಲಾಗುತ್ತಿದೆ. ಸಾಧನಾ ಸಮಾವೇಶಗಳು ಬಿಜೆಪಿ ನಾಯಕರನ್ನು ಟೀಕಿಸುವುದಕ್ಕೇ ಸೀಮಿತವಾಗಿವೆ. ಐದು ವರ್ಷದ ಹಿಂದೆ ಶಂಕುಸ್ಥಾಪನೆ ಮಾಡಿದ ಕಾಮಗಾರಿಗಳನ್ನು ಚುನಾವಣೆಯ ಸಂದರ್ಭದಲ್ಲಿ ಉದ್ಘಾಟನೆ ಮಾಡಲಾಗುತ್ತಿದೆ ಎಂದು ದೂರಿದರು.

ಕಾನೂನು ಸುವ್ಯವಸ್ಥೆ ಹಾಳು: ರಾಜ್ಯದಲ್ಲಿ ಕಾನೂನು, ಸುವ್ಯವಸ್ಥೆ ಸಂಪೂರ್ಣ ಕುಸಿದಿದೆ. ಐಜಿಪಿಯಂತಹ ಅಧಿಕಾರಿಯ ಕಾರಿಗೆ ಬೆಂಕಿ ಹಚ್ಚುವ ಮಟ್ಟಕ್ಕೆ ಕಾನೂನು, ಸುವ್ಯವಸ್ಥೆ ಹಾಳಾಗಿದೆ ಎಂದು ಆರೋಪಿಸಿದರು.

ನಿವೃತ್ತ ಐಪಿಎಸ್‌ ಅಧಿಕಾರಿಯೊಬ್ಬರಿಗೆ ಕ್ಯಾಬಿನೆಟ್ ಸ್ಥಾನಮಾನ ನೀಡಿ, ಸಲಹೆಗಾರರನ್ನಾಗಿ ನೇಮಕ ಮಾಡಲಾಗಿದೆ. ಅವರು ಏನು ಸಲಹೆ ನೀಡುತ್ತಿದ್ದಾರೆ ಎಂಬುದು ರಾಜ್ಯದ ಸ್ಥಿತಿಯನ್ನು ನೋಡಿದರೆ ಅರ್ಥವಾಗುತ್ತದೆ ಎಂದರು.

ದಕ್ಷಿಣ ಕನ್ನಡ ಸೇರಿದಂತೆ ಕರಾವಳಿ ಭಾಗದಲ್ಲಿ ನಡೆಯುತ್ತಿರುವ ದುಷ್ಕೃತ್ಯಗಳಿಗೆ ಕಾರಣ ಏನು ಎಂಬುದನ್ನು ಇದುವರೆಗೆ ಪತ್ತೆ ಹಚ್ಚಲು ಆಗಿಲ್ಲ. ಇದು ಕೋಮುದ್ವೇಷದಿಂದ ಆಗುತ್ತಿರುವುದೋ ಅಥವಾ ವೈಯಕ್ತಿಕ ಕಾರಣಗಳಿವೆಯೋ ಎಂಬುದರ ಸ್ಪಷ್ಟ ತನಿಖೆ ಮಾಡುವಲ್ಲಿ ಪೊಲೀಸ್‌ ಇಲಾಖೆ ವಿಫಲವಾಗಿದೆ ಎಂದು ಹೇಳಿದರು.

ಮಾಜಿ ಸಚಿವ ಕೆ. ಅಮರನಾಥ ಶೆಟ್ಟಿ, ಶಾಸಕ ಬಿ.ಬಿ. ನಿಂಗಯ್ಯ, ಪದಾಧಿಕಾರಿಗಳಾದ ಫಾರೂಕ್‌ ಬಿ.ಎಂ., ಮಹ್ಮದ್‌ ಕುಂಞಿ ವಿಟ್ಲ, ಭೋಜೇಗೌಡ, ಸಮತಿ ಹೆಗ್ಡೆ, ರಂಜನ್‌, ಅಕ್ಷಿತ್ ಸುವರ್ಣ, ಅಲ್ತಾಫ್‌, ಸದಾಶಿವ ಇದ್ದರು.

ಈ ಬಾರಿ ರಾಜ್ಯದಲ್ಲಿ ಜೆಡಿಎಸ್‌ ಅಧಿಕಾರಕ್ಕೆ ಬರುವ ವಿಶ್ವಾಸವಿದೆ ಎಂದು ಕುಮಾರಸ್ವಾಮಿ, ಯಾವುದೇ ಕಾರಣಕ್ಕೂ ಸಮ್ಮಿಶ್ರ ಸರ್ಕಾರದಲ್ಲಿ ಭಾಗಿಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಈ ಬಾರಿ ಜೆಡಿಎಸ್‌ಗೆ ಅವಕಾಶ ನೀಡುವಂತೆ ಮನವಿ ಮಾಡುತ್ತಿದ್ದೇನೆ. ಜನರೂ ಬದಲಾವಣೆ ಬಯಸಿದ್ದು, ಜೆಡಿಎಸ್ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದರು.

ಜೆಡಿಎಸ್‌ ಅಧಿಕಾರಕ್ಕೆ ಬಂದಲ್ಲಿ ₹50 ಸಾವಿರ ಕೋಟಿ ಸಾಲಮನ್ನಾ ಮಾಡಲಾಗುವುದು. ₹25 ಸಾವಿರ ಕೋಟಿ ವೆಚ್ಚದಲ್ಲಿ ಸ್ವಾಮಿನಾಥನ್‌ ಆಯೋಗದ ವರದಿ ಜಾರಿ ಮಾಡಲಾಗುವುದು. ಪ್ರತಿ ಕುಟುಂಬಕ್ಕೆ ಆರೋಗ್ಯ ವಿಮೆ ಸೌಕರ್ಯ ಕಲ್ಪಿಸಲಾಗುವುದು. ಹಿರಿಯ ನಾಗರಿಕರಿಗೆ ಪ್ರತಿ ತಿಂಗಳು ₹5 ಸಾವಿರ ಗೌರವಧನ, ತಾಯಿ–ಮಗುವಿನ ಆರೋಗ್ಯಕ್ಕಾಗಿ ತಲಾ ₹36 ಸಾವಿರ ವೆಚ್ಚ ಮಾಡಲು ಯೋಜನೆ ಹೊಂದಿರುವುದಾಗಿ ಹೇಳಿದರು.

ಕರಾವಳಿ ಜಿಲ್ಲೆಯ ಸಾಮರಸ್ಯದ ವಾತಾವರಣ ಮೂಡಿಸಲು ಜನವರಿ 9 ರಂದು ನಗರದ ನೆಹರೂ ಮೈದಾನದಲ್ಲಿ ‘ಜನತಾದಳದ ನಡಿಗೆ ಸೌಹಾರ್ದದ ಕಡೆಗೆ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕುಮಾರಸ್ವಾಮಿ ತಿಳಿಸಿದರು.

ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ. ದೇವೇಗೌಡ ಭಾಗವಹಿಸಲಿದ್ದಾರೆ. ಎರಡೂ ರಾಷ್ಟ್ರೀಯ ಪಕ್ಷದ ಹಿಡನ್‌ ಅಜೆಂಡಾ ಬಗ್ಗೆ ಈ ಭಾಗದ ಜನರಿಗೆ ತಿಳಿವಳಿಕೆ ನೀಡುವ ಮೂಲಕ ಸೌಹಾರ್ದ ಹೊಸ ವಾತಾವರಣ ನಿರ್ಮಿಸಲು ಉದ್ದೇಶಿಸಲಾಗಿದೆ. ಇದಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದು ಮನವಿ ಮಾಡಿದರು. ಸಮಾಜಘಾತುಕ ಶಕ್ತಿಗಳು, ಸಂಘಟನೆಗಳ ಬೆಂಬಲ ಈ ಸಮಾವೇಶಕ್ಕೆ ಬೇಡ ಎಂದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English