ಬಾಂಬ್‌ ದಾಳಿ : ಜಿಲ್ಲಾ ನ್ಯಾಯಾಲಯದ ಭದ್ರತಾ ವ್ಯವಸ್ಥೆಗೆ ವಕೀಲರ ಮನವಿ

11:18 AM, Friday, September 9th, 2011
Share
1 Star2 Stars3 Stars4 Stars5 Stars
(3 rating, 1 votes)
Loading...

Lawyers Protest/ ವಕೀಲರ ಪ್ರತಿಭಟನೆ

ಮಂಗಳೂರು: ಹೊಸದಿಲ್ಲಿಯ ಹೈಕೋರ್ಟ್‌ ಆವರಣದಲ್ಲಿ ಭಯೋತ್ಪಾದಕರು ನಡೆಸಿದ ಬಾಂಬ್‌ ದಾಳಿಯನ್ನು ಖಂಡಿಸಿ ಮಂಗಳೂರು ವಕೀಲರ ಸಂಘದ ವತಿಯಿಂದ ಗುರುವಾರ ಜಿಲ್ಲಾ ನ್ಯಾಯಾಲಯ ಸಂಕೀರ್ಣದಲ್ಲಿ ಪ್ರತಿಭಟನೆ ನಡೆಯಿತು. ಪ್ರತಿಭಟನೆಯಲ್ಲಿ ಮಂಗಳೂರು ನ್ಯಾಯಾಲಯ ಸಂಕೀರ್ಣದಲ್ಲಿ ಸೂಕ್ತ ಭದ್ರತಾ ವ್ಯವಸ್ಥೆಗಳನ್ನು ಅಳವಡಿಸುವಂತೆ ವಕೀಲರು ಆಗ್ರಹಿಸಿದರು.

ಪ್ರತಿಭಟನಕಾರರನ್ನುದ್ದೇಶಿಸಿ ಮಾತನಾಡಿದ ಮಂಗಳೂರು ವಕೀಲರ ಸಂಘದ ಅಧ್ಯಕ್ಷ ಎಸ್‌.ಪಿ. ಚೆಂಗಪ್ಪ ಅವರು, ನ್ಯಾಯಾಲಯದ ಆವರಣದಲ್ಲಿ ಭಯೋತ್ಪಾದಕರು ನಡೆಸಿದ ದಾಳಿ ಖಂಡನೀಯ ಇಲ್ಲಿ ಸೆಷನ್ಸ್‌ ನ್ಯಾಯಾಲಯ, ಫಾಸ್ಟ್‌ ಟ್ರ್ಯಾಕ್ ಕೋರ್ಟ್‌, ಜೆಎಂಎಫ್‌ಸಿ, ಸಿವಿಲ್‌ ಸಹಿತ 12 ನ್ಯಾಯಾಲಯಗಳು ಪ್ರಸ್ತುತ ಕಾರ್ಯನಿರ್ವಹಿಸುತ್ತಿವೆ. ನ್ಯಾಯಾಲಯ ಸಂಕೀರ್ಣದಲ್ಲಿ ಭಯೋತ್ಪಾದಕರು, ಉಗ್ರಗಾಮಿಗಳು, ಭೂಗತ ಲೋಕದ ಪಾತಕಿಗಳು ಸೇರಿದಂತೆ ಗಂಭೀರ ಪ್ರಕರಣಗಳ ಆರೋಪಿಗಳನ್ನು ಹಾಜರುಪಡಿಸಲಾಗುತ್ತಿದೆ. ಅವರಣದಲ್ಲಿ ಅನಪೇಕ್ಷಿತ ವ್ಯಕ್ತಿಗಳು ಇರುತ್ತಾರೆ. ವಕೀಲರಿಗೆ ಬೆದರಿಕೆ ಒಡ್ಡಿರುವ, ಹಲ್ಲೆ ಮಾಡಿರುವ ಘಟನೆಗಳೂ ನಡೆದಿವೆ. ಅದುದರಿಂದ ನ್ಯಾಯಾಲಯ ಸಂಕೀರ್ಣಕ್ಕೆ ಬಿಗಿ ಭದ್ರತೆ ಅವಶ್ಯವಿರುತ್ತದೆ. ಪ್ರಸ್ತುತ ಇಲ್ಲಿ ಭದ್ರತಾ ವ್ಯವಸ್ಥೆ ಶೂನ್ಯವಾಗಿದೆ. ಸಿಸಿಟಿವಿ, ಕ್ಯಾಮೆರಾ, ಮೆಟಲ್‌ ಡಿಟೆಕ್ಟರ್‌ ಸೇರಿದಂತೆ ಸೂಕ್ತ ಭದ್ರತಾ ವ್ಯವಸ್ಥೆಗಳಿಗೆ ಆಗ್ರಹಿಸಿ ಸರಕಾರಕ್ಕೆ ಕಳೆದ ನಾಲ್ಕು ವರ್ಷಗಳಿಂದ ಹಲವಾರು ಬಾರಿ ಮನವಿ ನೀಡಿದರೂ ಯಾವುದೇ ಸ್ಪಂದನೆ ದೊರಕಿಲ್ಲ. ನ್ಯಾಯಾಲಯ ಅವರಣದಲ್ಲಿ ಇದ್ದ ಪೊಲೀಸ್‌ ಔಟ್‌ಪೋಸ್ಟ್‌ ಕೂಡಾ ಸ್ಥಗಿತಗೊಂಡಿದೆ ಎಂದರು.

ಹೊಸದಿಲ್ಲಿಯಲ್ಲಿ ಬುಧವಾರ ಸಂಭವಿಸಿದ ಬಾಂಬ್‌ ಸ್ಫೋಟದ ಗಂಭೀರತೆ ಅರಿತುಕೊಂಡು ಸರಕಾರ ಕೂಡಲೇ ಸೂಕ್ತ ಭದ್ರತಾ ವ್ಯವಸ್ಥೆ ಗಳನ್ನು ಅಳವಡಿಸಲು ಕ್ರಮಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.

ಸಂಘದ ಕಾರ್ಯದರ್ಶಿ ಗಣೇಶ್‌ ಶೆಣೈ, ಕೋಶಾಧಿಕಾರಿ ವಿಠಲ್‌ ರೈ, ಪದಾಧಿಕಾರಿಗಳಾದ ರವೀಂದ್ರ ಮುನಿಪಾಡಿ, ಶ್ರೀಧರ್‌, ಲಾವಣ್ಯ ಶೆಟ್ಟಿ, ರಾಧಾಕೃಷ್ಣ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English