ಮಂಗಳೂರು : ಹಿಂದೂ ಯುವಸೇನೆಯ ವತಿಯಿಂದ 19ನೇ ವರ್ಷದ ಸಾರ್ವಜನಿಕ ಶ್ರೀಗಣೇಶೋತ್ಸವದಲ್ಲಿ 7ದಿನಗಳ ಕಾಲ ಪೂಜಿಸಲ್ಪಟ್ಟ ಶ್ರೀ ಮಹಾಗಣಪತಿಯ ವೈಭವದ ಶೋಭಾಯಾತ್ರೆ ಬುಧವಾರ ಸಂಜೆ ವಿಜೃಭಂಣೆಯಿಂದ ನಗರದ ಕೇಂದ್ರ ಮೈದಾನದಲ್ಲಿ ಜರಗಿತು.
ಮಹಾಗಣಪತಿಯ ಉತ್ಸವ ಮೂರ್ತಿಯ ಸಾರ್ವಜನಿಕ ಮೆರವಣಿಗೆಯು ನೆಹರೂ ಮೈದಾನದಿಂದ ಕೇರಳದ ಪ್ರಸಿದ್ಧ ಚೆಂಡೆವಾದನ,ನಾಸಿಕ್ ಬ್ಯಾಂಡ್, ವಿವಿಧ ವಿನ್ಯಾಸದ ಟ್ಯಾಬ್ಲೊಗಳು, ವಾದ್ಯ ಘೋಷಗಳೊಂದಿಗೆ ಹೊರಟು ಕ್ಲಾಕ್ ಟವರ್ ಮಾರ್ಗವಾಗಿ,ಹಂಪನ್ ಕಟ್ಟೆ ಮುಖ್ಯ ಸಿಗ್ನಲ್ ವೃತ್ತದ ಮೂಲಕ ಕೆ.ಎಸ್.ರಾವ್.ರಸ್ತೆ, ನವಭಾರತ್ ಸರ್ಕಲ್,ಡೊಂಗರಕೇರಿ, ನ್ಯೂಚಿತ್ರ ಟಾಕೀಸ್,ರಥಬೀದಿಯಾಗಿ ಸಾಗಿ ಶ್ರೀ ಕುಡ್ತೇರಿ ಮಹಮ್ಮಾಯಿ ದೇವಸ್ಥಾನದ ಕೆರೆಯಲ್ಲಿ ಶ್ರೀ ದೇವರ ವಿಗ್ರಹ ಸಮಾಪನ ಗೊಂಡಿತ್ತು.
ಶ್ರೀಗಣೇಶನ ಮೆರವಣಿಗೆ ಆರಂಭವಾದ ಸಂದರ್ಭದಲ್ಲಿ ಕೇಂದ್ರ ಮೈದಾನದಲ್ಲಿ ಸಂಘಟಕರ ವತಿಯಿಂದ ಅಯೋಜಿಸಲಾದ ವಿಶೇಷ ಸಿಡಿಮದ್ದು ಪ್ರದರ್ಶನವು ಎಲ್ಲರ ಗಮನ ಸೆಳೆಯಿತು.
ಸಾವಿರಾರು ಜನರು ತಡರಾತ್ರಿಯವರೆಗೂ ರಸ್ತೆಯುದ್ದಕ್ಕೂ ನಿಂತು ಶ್ರೀದೇವರ ಮೆರವಣಿಗೆ ವೀಕ್ಷಿಸಿದರು. ಮೆರವಣಿಗೆಯ ಸಮಯದಲ್ಲಿ ಮಳೆ ಬಾರದ ಕಾರಣ ಭಕ್ತರು ಸಂಭ್ರಮ ಉಲ್ಲಾಸದಿಂದ ಮೆರವಣೆಗೆ ಯಲ್ಲಿ ಪಾಲ್ಗೊಂಡರು.
ಗಣೇಶೋತ್ಸವ ಸಮಿತಿ ಗೌರವ ಅಧ್ಯಕ್ಷ ಭಾಸ್ಕರಚಂದ್ರ ಶೆಟ್ಟಿ, ಅಧ್ಯಕ್ಷ ಶಶಿಕಾಂತ್ ನಾಗ್ವೇಕರ್, ಹಿಂದೂ ಯುವಸೇನೆಯ ಅಧ್ಯಕ್ಷ ಯಶೋಧರ ಚೌಟ, ಪ್ರಧಾನ ಕಾರ್ಯದರ್ಶಿ ನಾಗೇಶ್ ಬಜಿಲಕೇರಿ, ಜನಾರ್ದನ ಎಸ್ ಅರ್ಕುಳ, ಪದ್ಮನಾಭ ನಾವೂರು,ಮೋಹನ್ ಪಡೀಲ್,ದಿನಕರ ಶೆಟ್ಟಿ,ಧರ್ಮೇಂದ್ರ ಹಾಗೂ ಸಂಘಟನೆಯ ಮತ್ತಿತರ ಪಧಾಧಿಕಾರಿಗಳು, ಕಾರ್ಯಕರ್ತರು ಶೋಭಾಯಾತ್ರೆಯಲ್ಲಿ ಪಾಲ್ಗೊಂಡರು.
Click this button or press Ctrl+G to toggle between Kannada and English