ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ವೈಶಿಷ್ಟ್ಯಪೂರ್ಣ ದೇವಾಲಯಗಳಲ್ಲಿ ಬಡಗ ಎಕ್ಕಾರು ಗ್ರಾಮದ ‘ನೆಲ್ಲಿತೀರ್ಥ’ ಸೋಮನಾಥೇಶ್ವರ ಗುಹಾ ದೇವಾಲಯವೂ ಒಂದು. ಭಕ್ತರ ಪಾಲಿಗೆ ಅತ್ಯಂತ ಕಾರ್ಣಿಕದ ದೇವಾಲಯವಾಗಿರುವ ಇಲ್ಲಿ ವರ್ಷದ ಆರು ತಿಂಗಳ ಕಾಲ ಮಾತ್ರವೇ ಶಿವನಿಗೆ ಪೂಜೆ ಸಲ್ಲುತ್ತದೆ. ಉಳಿದ ಆರು ತಿಂಗಳು ದೇವತೆಗಳು, ಮುನಿಗಳು ಶಿವನ ಆರಾಧನೆಯಲ್ಲಿ ತೊಡಗಿರುತ್ತಾರೆ ಎಂಬುದು ಪ್ರತೀತಿ.
ಜನರ ಪ್ರಕಾರ ನೆಲ್ಲಿತೀರ್ಥ ದೇವಾಲಯವು ಅಸ್ತಿತ್ವಕ್ಕೆ ಬಂದಿದ್ದು ಕ್ರಿ.ಶ. 1487ರಲ್ಲಿ. ಅದಕ್ಕಿಂತಲೂ ಅದೆಷ್ಟೋ ವರ್ಷಗಳ ಹಿಂದೆಯೇ ಈ ಗುಹಾಲಯವಿತ್ತೆನ್ನುತ್ತವೆ ಪುರಾಣಗಳು. ಮಂಗಳೂರು ತಾಲೂಕಿನಿಂದ ಸುಮಾರು 30ಕಿ.ಮೀ. ದೂರದ ಹಚ್ಚ ಹಸುರಿನ ಪ್ರಕೃತಿಯ ಮಡಿಲಲ್ಲಿ ನೆಲ್ಲಿತೀರ್ಥ ಗುಹಾ ದೇವಾಲಯವಿದೆ.
ಪ್ರತೀ ವರ್ಷದ ತುಲಾ ಸಂಕ್ರಮಣದಂದು ತೆರೆದುಕೊಂಡು ಮಳೆಗಾಲ ಪ್ರಾರಂಭವಾಗುತ್ತಿದ್ದಂತೆ ಅಂದರೆ ಮೇಷ ಸಂಕ್ರಮಣದಂದು ಸಕಲ ವಿಧಿ ವಿಧಾನಗಳೊಂದಿಗೆ ಮುಚ್ಚಿಕೊಳ್ಳುತ್ತದೆ. ಗುಹಾಲಯದೊಳಗಿರುವ ಶಿವಲಿಂಗಕ್ಕೆ ಗುಹೆಯ ಮೇಲ್ಭಾಗದಲ್ಲಿ ಕಲ್ಲುಗಳ ಸಂದಿಯಿಂದ ನೆಲ್ಲಿಕಾಯಿ ಗಾತ್ರದಲ್ಲಿ ನಿರಂತರವಾಗಿ ಹನಿ ಹನಿಯಾಗಿ ತೊಟ್ಟಿರುವ ‘ಅಂತರಗಂಗೆ’ಯನ್ನು ತೀರ್ಥವೆಂದು ಪರಿಗಣಿಸಿ ಈ ಕ್ಷೇತ್ರಕ್ಕೆ ‘ನೆಲ್ಲಿತೀರ್ಥ’ವೆಂಬ ಹೆಸರು ಬಂದಿದೆ.
ಇಲ್ಲಿ ತಪಸ್ಸನ್ನಾಚರಿಸುತ್ತಿದ್ದ ಜಾಬಾಲಿ ಮುನಿಗಳ ತಪಸ್ಸಿಗೆ ಮೆಚ್ಚಿದ ದುರ್ಗಾ ಮಾತೆಯು ಪ್ರತ್ಯಕ್ಷಳಾಗಿ ಅರುಣಾಸುರನನ್ನು ಸಂಹಾರ ಮಾಡುವ ಅಭಯವನ್ನು ನೀಡುತ್ತಾಳೆ. ಅಭಯದಂತೆ ದುರ್ಗಾಮಾತೆಯು ‘ದುಂಬಿ’ಯ ರೂಪವನ್ನು ತಾಳಿ ಅಲ್ಲೇ ಸಮೀಪದಲ್ಲಿ ಹರಿಯುತ್ತಿರುವ ನಂದಿನಿ ನದಿಯ ತಟದಲ್ಲಿ ಅರುಣಾಸುರನನ್ನು ಸಂಹಾರ ಮಾಡುತ್ತಾಳೆ. ಅದೇ ಸ್ಥಳದಲ್ಲಿ ದುರ್ಗೆಯು ನೆಲೆನಿಂತಿದ್ದು, ಈ ಕ್ಷೇತ್ರವೇ ‘ಶ್ರೀ ಕ್ಷೇತ್ರ ಕಟೀಲು’ ಎಂದು ಮುಂದೆ ಪ್ರಸಿದ್ಧವಾಗುತ್ತದೆ.
ಗುಹೆಯ ಒಳಭಾಗ ಸಂಪೂರ್ಣ ಕತ್ತಲಿನಿಂದಾವೃತವಾಗಿದ್ದು, ಭಕ್ತರು ಒಳ ಪ್ರವೇಶಿಸಲು ಅನುವಾಗುವಂತೆ ಅಲ್ಲಲ್ಲಿ ತೈಲದ ‘ದೊಂದಿ’ಗಳನ್ನು (ದೊಡ್ಡ ಗಾತ್ರದ ದೀಪ) ಹಚ್ಚಿಡುತ್ತಾರೆ. ಗುಹೆಯ ಪ್ರವೇಶ ದ್ವಾರ ಹಿರಿದಾಗಿದ್ದರೂ ಒಳಗೆ ಹೋಗುತ್ತಿದ್ದಂತೆ ದಾರಿ ಕಿರಿದಾಗುತ್ತಾ ಹೋಗುತ್ತದೆ. ಭಕ್ತರು ಬಾಗಿಗೊಂಡು, ತೆವಳಿಕೊಂಡು ಹೋಗಬೇಕು. ಒಳಗಡೆ ತಂಪಾದ ವಾತಾವರಣವಿದೆ. ಗುಹೆಯ ಒಳ ಭಾಗದಲ್ಲಿ ಸುಮಾರು ಹತ್ತರಿಂದ ಇಪ್ಪತ್ತು ಅಡಿ ವಿಸ್ತಾರದಲ್ಲಿ ವಿಶಾಲವಾದ ಪ್ರದೇಶವಿದ್ದು, ಅಲ್ಲೇ ಎತ್ತರದ ಪ್ರದೇಶದಲ್ಲಿ ವಿಶಿಷ್ಟವಾದ ‘ಭೂಲಿಂಗವಿದೆ’.
ಭೂಲಿಂಗದ ದರ್ಶನಕ್ಕೆ ಭಕ್ತರು ನಿಲ್ಲುವ ಜಾಗ ಗುಹೆಯ ಮೇಲ್ಭಾಗದಿಂದ ತೊಟ್ಟಿಕ್ಕುವ ಹೇರಳ ಜಲರಾಶಿಯು ಶೇಖರಗೊಂಡಿದ್ದು, (ಅಂತರ್ಗಂಗೆ) ಈ ನೀರಿನಿಂದ ಭಕ್ತರು ಶಿವಲಿಂಗಕ್ಕೆ ಅಭಿಷೇಕ ಮಾಡಿ ಪುನೀತರಾಗಿ ಭಕ್ತಿ ಹಾಗೂ ಧನ್ಯತಾ ಭಾವದಲ್ಲಿ ಮಿಂದೇಳುತ್ತಾರೆ ಎಂದು ಇಲ್ಲಿನ ಮೊಕ್ತೇಸರರದ ಶ್ರೀ ಸುಬ್ರಾಯ ಭಟ್ ಹೇಳುತ್ತಾರೆ.
ಇಲ್ಲಿನ ಪ್ರಸಾದವೆಂದರೆ ಮಣ್ಣು. ಕರ್ಪೂರದ ಅಂಶ ಹೇರಳವಾಗಿರುವ ಈ ಮಣ್ಣು ಔಷಧೀಯ ಗುಣದಿಂದ ಕೂಡಿರುತ್ತದೆ. ಭಕ್ತರು ಗುಹೆಯಿಂದ ಹೊರಬರುವಾಗ ಮೈಯಿಡೀ ಲೇಪಿಸಿಕೊಂಡು ಬರುತ್ತಾರೆ. ಇದರಿಂದ ಚರ್ಮ ಸಂಬಂಧಿ ವ್ಯಾಧಿಗಳು ಗುಣವಾಗುತ್ತದೆಂಬುದು ನಂಬಿಕೆ.
ಸೋಮನಾಥೇಶ್ವರ ಈ ದೇವಾಲಯದ ಮುಖ್ಯ ದೇವರಾಗಿದ್ದು, ಪಕ್ಕದಲ್ಲಿ ಮಹಾಗಣಪತಿ ಮತ್ತು ಜಾಬಾಲಿ ಮಹರ್ಷಿಯ ಗುಡಿಗಳಿವೆ. ಜೊತೆಯಲ್ಲಿ ಪ್ರಮುಖ ದೈವಗಳಾದ ಪಿಲಿಚಾಮುಂಡಿ (ಪಿಲಿ ಎಂದರೆ ಹುಲಿ), ರಕ್ತೇಶ್ವರಿ, ಧೂಮಾವತಿ ಮತ್ತು ಕ್ಷೇತ್ರಪಾಲರ ಆಲಯವಿದ್ದು, ಈ ದೇವಾಲಯದ ಆಡಳಿತವು ತುಳುನಾಡಿನ ಪ್ರಮುಖ ಮನೆತನಗಳಲ್ಲೊಂದಾದ ‘ಚೌಟ’ ಮನೆತನದ ಸುಪರ್ದಿಯಲ್ಲಿದೆ.
Click this button or press Ctrl+G to toggle between Kannada and English