ಮತ್ತೆ ರಾಜ್ಯಕ್ಕೆ ಕಾಲಿಟ್ಟ ಮಹಾಮಾರಿ… ಬೆಂಗಳೂರಲ್ಲಿ ಹಕ್ಕಿ ಜ್ವರ ಭೀತಿ

3:17 PM, Tuesday, January 2nd, 2018
Share
1 Star2 Stars3 Stars4 Stars5 Stars
(5 rating, 1 votes)
Loading...

bird-flueಬೆಂಗಳೂರು: ಜಾಗತಿಕ ಮಟ್ಟದಲ್ಲಿ ಸದ್ದು ಮಾಡಿದ್ದ ಹಕ್ಕಿ ಜ್ವರ ಇದೀಗ ಸಿಲಿಕಾನ್ ಸಿಟಿಯಲ್ಲಿಯೂ ಪತ್ತೆಯಾಗಿದೆ. ದಾಸರಹಳ್ಳಿಯ ಕೆಜಿಎನ್ ಕೋಳಿ ಮಾರಾಟ ಅಂಗಡಿಯಲ್ಲಿನ ಕೋಳಿಗಳಲ್ಲಿ ಹಕ್ಕಿ ಜ್ವರ ಇರುವುದು ಪ್ರಯೋಗಾಲಯದಲ್ಲಿ ಸಾಬೀತಾಗಿದ್ದು ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ.

ಹೌದು, ಉದ್ಯಾನನಗರಿಗೆ ಹಕ್ಕಿ ಜ್ವರ ಕಾಲಿಟ್ಟಿದೆ. ತಮಿಳುನಾಡಿನಿಂದ ಬಂದಂತಹ ನಾಟಿ ಕೋಳಿಗಳಲ್ಲಿ ಹಕ್ಕಿ ಜ್ವರ ಪತ್ತೆಯಾಗಿದೆ. ಕಳೆದ ವಾರ ತಮಿಳುನಾಡಿನ ಕೋಳಿ ಮಾರಾಟಗಾರರಿಂದ 15 ಕೋಳಿ ಖರೀದಿಸಿದ್ದ ಕೆಜಿಎನ್ ಅಂಗಡಿ ಮಾಲೀಕರು ನಾಲ್ಕೈದು ಕೋಳಿಗಳು ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಮೃತ ಕೋಳಿಗಳನ್ನು ಪರೀಕ್ಷೆ ಒಳಪಡಿಸಿದ್ದರು. ಹೆಬ್ಬಾಳದ ಪಶು ಆರೋಗ್ಯ ಮತ್ತು ಜೈವಿಕ ಸಂಸ್ಥೆಯಲ್ಲಿ ಕೋಳಿಯ ಸ್ಯಾಂಪಲ್ ಪರೀಕ್ಷೆ ನಡೆಸಿ ಭೋಪಾಲ್‌ನಲ್ಲಿರುವ ಪ್ರಯೋಗಾಲಯಕ್ಕೂ ಸ್ಯಾಂಪಲ್ ರವಾನಿಸಿ ಪರೀಕ್ಷೆ ನಡೆಸಲಾಯಿತು. ಪರೀಕ್ಷೆ ಬಳಿಕ ಹಕ್ಕಿ ಜ್ವರ ಇರುವುದು ದೃಢವಾಗಿದೆ. ಹಕ್ಕಿ ಜ್ವರ ಪ್ರಕರಣ ದೃಢ ಪಟ್ಟ ನಂತರ ಎಚ್ಚೆತ್ತ ಪಶು ಆರೋಗ್ಯ ಇಲಾಖೆ ಅಧಿಕಾರಿಗಳು ಕೆಜಿಎನ್ ಅಂಗಡಿಗೆ ತೆರಳಿ ಶುಚಿಗೊಳಿಸಿದರು.

ಹಕ್ಕಿ ಜ್ವರ ಕಾಣಿಸಿಕೊಂಡಿರುವ ಕಾರಣ ಕೋಳಿ ಸಾಕಾಣಿಕೆ ಮತ್ತು ಮಾರಾಟಗಾರರಿಗೆ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಪಶು ಆರೋಗ್ಯ ಇಲಾಖೆ ಅಧಿಕಾರಿಗಳು ಸೂಚನೆ ನೀಡಲಾಗಿದೆ.

ನಗರದ ಯಲಹಂಕ, ಬ್ಯಾಟರಾಯನಪುರ, ಥಣಿಸಂದ್ರ ಸೇರಿದಂತೆ ಕೆಲ ಕಡೆ ಕೋಳಿ ಅಂಗಡಿಗಳಲ್ಲಿ ಕೆಲ ಕೋಳಿಗಳು ಮೃತಪಟ್ಟಿದ್ದು, ಇದು ಹಕ್ಕಿಜ್ವರದಿಂದಲೇ ಎಂಬ ಸಂಶಯದ ಹಿನ್ನೆಲೆಯಲ್ಲಿ ಹೆಬ್ಬಾಳದ ಪಶು ಆರೋಗ್ಯ ಹಾಗೂ ಜೈವಿಕ ಸಂಸ್ಥೆಯಲ್ಲಿ ಸತ್ತ ಕೋಳಿಗಳ ಅಂಗಾಂಗಳನ್ನು ಪರೀಕ್ಷೆ ಮಾಡಿಸಲಾಗಿದೆ. ಖಚಿತತೆಗಾಗಿ ಅದರ ಶ್ಯಾಂಪಲ್‌ಅನ್ನು ಭೂಪಾಲ್‍ನ ಪ್ರಯೋಗಾಲಯಕ್ಕೆ ಸತ್ತ ಕೋಳಿಗಳನ್ನು ರವಾನಿಸಲಾಗಿದೆ. ಅಲ್ಲಿಂದ ವರದಿ ಬಂದ ಮೇಲೆ ಆತಂಕ ದೂರವಾಗಲಿದೆ. ವರದಿ ಬರುವವರಿಗೆ ಆ ಪ್ರದೇಶಗಳ ಕೋಳಿ ಅಂಗಡಿಗಳನ್ನು ಮುಚ್ಚಲು ಬಿಬಿಎಂಪಿಯ ಆರೋಗ್ಯಾಧಿಕಾರಿಗಳು ಸೂಚನೆ ನೀಡಿದ್ದಾರೆ.

ತಮಿಳುನಾಡಿನಿಂದ ಆಮದಾಗಿರುವ ನಾಟಿ ಕೋಳಿಗಳಲ್ಲಿ ಹಕ್ಕಿ ಜ್ವರ ಪತ್ತೆಯಾಗಿದೆ ಎಂಬ ಸುದ್ದಿ ಹಬ್ಬಿದೆ. ಬ್ಯಾಟರಾಯನಪುರ, ಥಣಿಸಂದ್ರ, ದಾಸರಹಳ್ಳಿ ಮತ್ತಿತರ ಕಡೆ ಭೀತಿ ಎದುರಾಗಿದೆ. ಹಕ್ಕಿ ಜ್ವರದ ಬಗ್ಗೆ ಸಂಜೆ ವೇಳೆಗೆ ಸರ್ಕಾರ ಅಧಿಕೃತ ವರದಿ ನೀಡಲಿದೆ. ಕಳೆದ ಬಾರಿ ಮಂಡ್ಯದಲ್ಲೂ ಇದೇ ರೀತಿ ಆತಂಕ ಎದುರಾಗಿತ್ತು. ಆದರೆ, ಹಕ್ಕಿಜ್ವರ ಪ್ರಯೋಗಾಲಯದಲ್ಲಿ ಸಾಭೀತಾಗಿರಲಿಲ್ಲ.

ಹಕ್ಕಿ ಜ್ವರದ ಆತಂಕದ ಹಿನ್ನೆಲೆಯಲ್ಲಿ ಕೋಳಿ ಮಾರಾಟದ ಮಾಲೀಕರಿಗೆ ಅಂಗಡಿಗಳನ್ನು ಶುಚಿಗೊಳಿಸುವಂತೆ ಪಶು ಇಲಾಖೆಯ ಅಧಿಕಾರಿಗಳು ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English