ಬೆಂಗಳೂರು: ಕರ್ನಾಟಕ ರಾಜ್ಯದ ಅಭಿವೃದ್ಧಿ ಇತರರಿಗೆ ಮಾದರಿಯಾಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ಹೇಳಿದ್ದಾರೆ. ‘ದಿ ನ್ಯೂ ಇಂಡಿಯನ್ ಎಕ್ಸ್’ಪ್ರೆಸ್ ಆಯೋಜಿಸಿದ್ದ ‘ವಿಷನ್ 2025’ ಸಮಾವೇಶದಲ್ಲಿ ಮಾತನಾಡಿರುವ ಅವರು, ನವ ಕರ್ನಾಟಕ-2025 ನಿರ್ಮಾಣಕ್ಕೆ ತಮ್ಮ ಸರ್ಕಾರ ಕೈಗೊಂಡಿರುವ ಉಪಕ್ರಮಗಳು ಹಾಗೂ ಅವರ ಜೀವನದ ಅನುಭವಗಳನ್ನು ಹಂಚಿಕೊಂಡರು. ಜೀವನದಲ್ಲಿ ಹಸಿವು, ಬಡತನ ಹಾಗೂ ನಿರುದ್ಯೋಗ ಸಮಸ್ಯೆಗಳನ್ನು ಅನುಭವಿಸಿದ್ದೇನೆ.
ರಾಜ್ಯ ಬಜೆಟ್’ನ್ನು ಘೋಷಣೆ ಮಾಡುವ ವೇಳೆ ನನ್ನ ಅನುಭವಗಳೇ ನನಗೆ ಮಾರ್ಗದರ್ಶನ ನೀಡಿತ್ತು. ಬಸವೇಶ್ವರ, ಅಂಬೇಡ್ಕರ್ ಮತ್ತು ಮಹಾತ್ಮ ಗಾಂಧೀಜಿಯವರು ರಚಿಸಿದ ಅಭಿವೃದ್ಧಿಯೆಂಬ ತತ್ವಶಾಸ್ತ್ರದೊಂದಿಗೆ ಪ್ರತೀ ವಿಭಾಗ ಹಾಗೂ ಸಮಾಜದ ಪ್ರತೀ ಕ್ಷೇತ್ರವನ್ನು ಸಬಲೀಕರಣಗೊಳಿಸುವ ಮೂಲಕ ರಾಜ್ಯವನ್ನು ಪ್ರಗತಿಯತ್ತ ಕೊಂಡೊಯ್ಯಬಹುದು ಎಂದು ತಿಳಿಸಿದ್ದಾರೆ.
ಇದೇ ವೇಳೆ ರಾಜ್ಯ ಸರ್ಕಾರ ಕೈಗೊಂಡಿರುವ ಅನ್ನ ಭಾಗ್ಯ, ಕ್ಷೀರ ಭಾಗ್ಯ, ಇಂದಿರಾ ಕ್ಯಾಂಟೀನ್, ಆಶ್ರಯ ಯೋಜನೆಗಳನ್ನು ಹೆಸರಿಸಿ ಗುಜರಾತ್ ಮಾದರಿ ಕುರಿತಂತೆ ತೀವ್ರವಾಗಿ ಕಿಡಿಕಾರಿದ್ದಾರೆ, ಅಲ್ಲದೆ, ಬೆಂಗಳೂರಿನಲ್ಲಿ ಮೂಲಭೂತ ಸೌಕರ್ಯಗಳನ್ನು ಹೆಚ್ಚುವ ಕುರಿತಂತೆ ಭರವಸೆಯನ್ನು ನೀಡಿದ್ದಾರೆ. ಮುಂದಿನ ಎರಡು ವರ್ಷಗಳಲ್ಲಿ ಕರ್ನಾಟಕ ರಾಜ್ಯ ಉದ್ಯೋಗ ಸೃಷ್ಟಿಸುವುದರಲ್ಲಿ ಉತ್ತಮ ಸ್ಥಾನದಲ್ಲಿರಲಿದೆ ಎಂದು ತಿಳಿಸಿದ್ದಾರೆ.
ಸಮಾವೇಸದಲ್ಲಿ ಸಚಿವ ಆರ್.ವಿ. ದೇಶಪಾಂಡೆ, ಡಿ.ಕೆ. ಶಿವಕುಮಾರ್, ರಾಮಲಿಂಗಾ ರೆಡ್ಡಿ, ಬಸವರಾಜ ರಾಯರೆಡ್ಡಿ, ತನ್ವೀರ್ ಸೇಠ್ ಮತ್ತು ನಟ ರಮೇಶ್ ಅರವಿಂದ್ ಸೇರಿದಂತೆ ಇನ್ನಿತರೆ ಗಣ್ಯಾತಿಗಣ್ಯರು ಹಾಜರಿದ್ದರು.
ಕರ್ನಾಟಕ ದೂರದೃಷ್ಟಿಯುಳ್ಳ ರಾಜ್ಯವಾಗಿದ್ದು, ಸಮಯ ಬರುವುದಕ್ಕೂ ಮೊದಲೇ ಆ ವಿಚಾರದ ಬಗ್ಗೆ ಚಿಂತನೆ ನಡೆಸಿರುತ್ತದೆ ಎಂದು ಭಾರೀ ಮತ್ತು ಮಧ್ಯಮ ಕೈಗಾರಿಕಾ ಸಚಿವ ಆರ್.ವಿ. ದೇಶಪಾಂಡೆಯವರು ಸೋಮವಾರ ಹೇಳಿದ್ದಾರೆ.
‘ದಿ ನ್ಯೂ ಇಂಡಿಯನ್ ಎಕ್ಸ್’ಪ್ರೆಸ್ ಆಯೋಜಿಸಿದ್ದ ‘ವಿಷನ್-2025’ ಸಮಾವೇಶದಲ್ಲಿ ಮಾತನಾಡಿರುವ ಅವರು, ಬಂಡವಾಳ ಹೂಡಿಕೆಯಲ್ಲಿ ಕರ್ನಾಟಕ ಆಕರ್ಷಣೀಯ ತಾಣವಾಗಬೇಕೆಂದು ನಾವು ಬಯಸಿದ್ದೇವೆ. ಈ ಬಗ್ಗೆ ಸರ್ಕಾರ ಕೂಡ ಸಾಕಷ್ಟು ಕೆಲಸಗಳನ್ನು ಮಾಡುತ್ತಿದೆ ಎಂದು ಹೇಳಿದ್ದಾರೆ.
ಇಂಧನ ಸಚಿವ ಡಿ.ಕೆ. ಶಿವಕುಮಾರ್ ಅವರು ಮಾತನಾಡಿ, ರಾಜ್ಯಕ್ಕೆ 24*7 ಗಂಟೆಗಳ ಕಾಲ ವಿದ್ಯುತ್ ಪೂರೈಸಲು ಎಲ್ಲಾ ರೀತಿಯ ಕಾರ್ಯಗಳನ್ನು ಮಾಡಲಾಗುತ್ತಿದೆ ಎಂದು ತಿಳಿಸಿದರು.
Click this button or press Ctrl+G to toggle between Kannada and English